ADVERTISEMENT

ಬಹುತ್ವ ಆಧಾರಿತ ಭಾರತೀಯ ಪರಂಪರೆ: ಕುಂ.ವೀ

ಸಾಹಿತಿ ಸುಜಾತಾ ಅವರ ‘ಅಂಬೇಡ್ಕರ್ ಅರಿವಿನ ಜತೆಗಾರ’ ಗ್ರಂಥ ಜನಾರ್ಪಣೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 15:00 IST
Last Updated 27 ಏಪ್ರಿಲ್ 2025, 15:00 IST
ವಿಜಯಪುರದ ನಗರದ ಕಂದಗಲ್ ಹಣಮಂತರಾಯ ರಂಗ ಮಂದಿರದಲ್ಲಿ ಸಾಹಿತಿ ಸುಜಾತಾ ಚಲವಾದಿ ವಿರಚಿತ ‘ಲಚಮವ್ವ ಮತ್ತು ಇತರ ಕತೆಗಳು’ ಹಾಗೂ ‘ಅಂಬೇಡ್ಕರ್ ಅರಿವಿನ ಜತೆಗಾರ’ ಗ್ರಂಥಗಳನ್ನು ಗಣ್ಯರು ಬಿಡುಗಡೆಗೊಳಿಸಿದರು –ಪ್ರಜಾವಾಣಿ ಚಿತ್ರ
ವಿಜಯಪುರದ ನಗರದ ಕಂದಗಲ್ ಹಣಮಂತರಾಯ ರಂಗ ಮಂದಿರದಲ್ಲಿ ಸಾಹಿತಿ ಸುಜಾತಾ ಚಲವಾದಿ ವಿರಚಿತ ‘ಲಚಮವ್ವ ಮತ್ತು ಇತರ ಕತೆಗಳು’ ಹಾಗೂ ‘ಅಂಬೇಡ್ಕರ್ ಅರಿವಿನ ಜತೆಗಾರ’ ಗ್ರಂಥಗಳನ್ನು ಗಣ್ಯರು ಬಿಡುಗಡೆಗೊಳಿಸಿದರು –ಪ್ರಜಾವಾಣಿ ಚಿತ್ರ   

ವಿಜಯಪುರ: ‘ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಬಹುತ್ವದ ತತ್ವ ಮತ್ತು ಸಿದ್ಧಾಂತಗಳ ಅಡಿಯಲ್ಲಿ ಬೆಳೆದಿದೆ’ ಎಂದು ಸಾಹಿತಿ ಕುಂ. ವೀರಭದ್ರಪ್ಪ ಹೇಳಿದರು.

ವಿಜಯಪುರದ ಚನ್ನಬಸಮ್ಮಾ ಚಂದಪ್ಪ ಪ್ರತಿಷ್ಠಾನ, ಸಮಾನ ಮನಸ್ಕರ ವೇದಿಕೆಯಿಂದ ನಗರದ ಕಂದಗಲ್ ಹಣಮಂತರಾಯ ರಂಗ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಸಾಹಿತಿ ಸುಜಾತಾ ಚಲವಾದಿ ವಿರಚಿತ ‘ಲಚಮವ್ವ ಮತ್ತು ಇತರ ಕತೆಗಳು’ ಹಾಗೂ ‘ಅಂಬೇಡ್ಕರ್ ಅರಿವಿನ ಜತೆಗಾರ’ ಗ್ರಂಥಗಳ ಜನಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವ ಶಕ್ತಿಯನ್ನು ಸಂವಿಧಾನ ನೀಡಿದೆ. ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವ ಮತ್ತು ಸಿದ್ಧಾಂತಗಳನ್ನು ಹೆಚ್ಚು ಅರ್ಥ ಮಾಡಕೊಳ್ಳಬೇಕಿದೆ’ ಎಂದರು.

ADVERTISEMENT

‘ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವ ಹಕ್ಕಿಗೆ ಹೆಚ್ಚು ಮಹತ್ವವಿದೆ. ಅನ್ಯಾಯಗಳನ್ನು ಪ್ರಶ್ನಿಸದಿದ್ದರೆ ಇಡೀ ವ್ಯವಸ್ಥೆ ನಿಷ್ಕ್ರಿಯವಾಗುತ್ತದೆ. ಆ ನಿಟ್ಟಿನಲ್ಲಿ ಸಮಕಾಲೀನ ಸಮಸ್ಯೆಗಳನ್ನು ಜನರಿಗೆ ತಲುಪಿಸುವ ಸಲುವಾಗಿ ಸಾಹಿತ್ಯ, ಕಥೆ, ಕಾವ್ಯ ಮತ್ತು ಕಾದಂಬರಿ ರಚಿಸಿ ಪ್ರಕಟಿಸಿ ಸಮಾಜಕ್ಕೆ ನೀಡುವ ಕೆಲಸವನ್ನು ಸಾಹಿತ್ಯ ವಲಯ ಮಾಡಬೇಕಿದೆ’ ಎಂದರು.

‘ಪ್ರಸ್ತುತ ಮೊಬೈಲ್ ಬಳಕೆ ಹೆಚ್ಚಾಗಿದೆ. ಪುಸ್ತಕ ಓದುವ ಬದಲಾಗಿ ಮೊಬೈಲ್ ನೋಡುವ ಗೀಳು ಬೆಳೆದಿದೆ. ಟಿವಿ ಧಾರಾವಾಹಿ ವೀಕ್ಷಣೆ ಮಹಿಳೆಯರಲ್ಲಿ ಹೆಚ್ಚಾಗಿದೆ. ಇದರಿಂದ ಸಾಹಿತ್ಯ ಬರವಣಿಗೆ ಮತ್ತು ಓದುವ ಅಭಿರುಚಿ ಕಡಿಮೆಯಾಗುತ್ತಿರುವುದು ಆತಂಕಕಾರಿ ಸಂಗತಿ’ ಎಂದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ, ಸಾಹಿತಿ ಪ್ರೊ. ಎಚ್. ಟಿ. ಪೋತೆ ಮಾತನಾಡಿ, ‘ಸುಜಾತ ಅವರ ಕಥೆಗಳಲ್ಲಿ ನಿಜವಾದ ತಾಯ್ತನದವಿದೆ. ಮಾತೃ ಸ್ವರೂಪದ ಅಂತಃಕರಣದ ಕಥೆಗಳಿವೆ’ ಎಂದು ಹೇಳಿದರು.

‘ಮಾತನಾಡುವ, ಪ್ರಶ್ನಿಸುವ ಕೆಲಸ ಮಾಡದಿದ್ದರೆ ಸಮಾಜದಲ್ಲಿ ಸಮಾನತೆ ಸಾಧ್ಯವಿಲ್ಲ. ಬದುಕಿನ ಬದಲಾವಣೆಗೆ ಅಕ್ಷರ ಮತ್ತು ಬರವಣಿಗೆ ಬೇಕು. ಜನಪರ ಮತ್ತು ದಲಿತಪರ ಧ್ವನಿಗಳಿಗೆ ಬೆಂಬಲವಿಲ್ಲದೆ ಸಾಹಿತಿಗಳಿಗೆ ಭಯದ ವಾತಾವರಣ ನಿರ್ಮಾಣವಾಗಿದೆ ಇದು ಹೆಚ್ಚು ಆತಂಕಕಾರಿ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರು ಮಾತನಾಡಿ, ವಿಶ್ವದಾದ್ಯಂತ ಬಿ.ಆರ್. ಅಂಬೇಡ್ಕರ್ ಅವರ ಬರೆದಿರುವ ಪುಸ್ತಕ ಮತ್ತು ವಿಷಯಗಳ ಬಗ್ಗೆ ಹೆಚ್ಚು ಚರ್ಚೆಗಳು ನಡೆಯುತ್ತಿವೆ. ಅವರ ವೈಜ್ಞಾನಿಕ ನೆಲೆಯ ಚಿಂತನೆಗಳು ಕುರಿತು ಸುಜಾತ ಚಲವಾದಿ ಅವರಿಂದ ಉತ್ತಮ ಕೃತಿಗಳು ಬರಲೆಂದು ಆಶಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿ, ‘ಡಾ.ಬಿ.ಆರ್. ಅಂಬೇಡ್ಕರ್ ಅವರು ಆಧುನಿಕ ಭಾರತದ ಭವಿಷ್ಯವನ್ನು ಬರೆದಿದ್ದಾರೆ. ಶ್ರೇಷ್ಠ ಸಂವಿಧಾನ ರಚಿಸಿ ನೊಂದ ಸಮುದಾಯಗಳಿಗೆ ಶಾಶ್ವತ ನೆಲೆಯನ್ನು ಒದಗಿಸಿದ್ದಾರೆ’ ಎಂದರು.

ಪುಸ್ತಕ ಪರಿಚಯ ಮಾಡಿದ ಸಂಸ್ಕೃತಿ ಚಿಂತಕ ನಿಂಗಪ್ಪ ಮುದೇನೂರ, ‘ಸುಜಾತಾ ಅವರ ಕೃತಿಗಳಲ್ಲಿ ನೆಲ ಮೂಲ ಸಂಸ್ಕೃತಿಯನ್ನು ಬಿಂಬಿಸುವ ಕಥೆಗಳಿವೆ. ಜೊತೆಗೆ ಹೊಸ ಆಲೋಚನೆ ಹುಟ್ಟುಹಾಕುವಂತಿವೆ’ ಎಂದರು.

ಲೇಖಕಿ ಸುಜಾತ ಛಲವಾದಿ ಮಾತನಾಡಿ, ‘ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ವಿಚಾರಗಳು ನನಗೆ ಬರವಣಿಗೆಗೆ ಪ್ರೇರಣೆಯಾಗಿದೆ. ಬಸವಣ್ಣನವರ ವೈಚಾರಿಕ ವಿಚಾರಗಳ ಪ್ರಭಾವ ನಮ್ಮ ಸಾಹಿತ್ಯದ ಮೇಲಿದೆ’ ಎಂದರು.

ಸಾಹಿತಿ ಮನು ಪತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಳಿಕೋಟೆ ವಿವಿ ಸಂಘದ ಚೇರಮನ್‌ ವಿ.ಸಿ. ಹಿರೇಮಠ, ಅಭಿಷೇಕ ಚಕ್ರವರ್ತಿ, ದಾಕ್ಷಾಯಿಣಿ ಬಿರಾದಾರ, ಮೋಹನ್ ಕಟ್ಟಿಮನಿ ಇದ್ದರು.

Quote - ಸಾಹಿತ್ಯ ರಚನೆ ಜೊತೆಗೆ ಓದುಗರಿಗೆ ತಲುಪಿಸುವ ಕೆಲಸವಾಗಬೇಕು. ಸಾಹಿತಿಗಳು ಕಥೆಗಾರರು ಮತ್ತು ಕಾದಂಬರಿಕಾರರು ಉತ್ತಮ ಅಭಿರುಚಿಯ ಸಾಹಿತ್ಯ ರಚನೆಗೆ ಒತ್ತು ನೀಡಬೇಕು ಕುಂ. ವೀರಭದ್ರಪ್ಪ ಸಾಹಿತಿ 

Quote - ಸರ್ವರನ್ನು ಸಮಾನದೃಷ್ಠಿಯಿಂದ ನೋಡುವ ಸಂವಿಧಾನವಿದ್ದರೂ ಸಹ ವರ್ಗ ಮತ್ತು ಜಾತಿ ತಾರತಮ್ಯ ಇನ್ನು ಜೀವಂತವಿದೆ. ಇದು ಯಾವ ನ್ಯಾಯ?  ಪ್ರೊ. ಎಚ್. ಟಿ. ಪೋತೆ ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.