ADVERTISEMENT

ವಿಜಯಪುರ: ನೀರಾವರಿ ಯೋಜನೆ ಅನುಷ್ಠಾನದ ರಾಜಕೀಯ ಲಾಭಕ್ಕೆ ಪೈಪೋಟಿ

ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿಗೆ ಎಂ.ಬಿ.ಪಾಟೀಲ ತಿರುಗೇಟು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2020, 20:15 IST
Last Updated 9 ಅಕ್ಟೋಬರ್ 2020, 20:15 IST
ಎಂ.ಬಿ.ಪಾಟೀಲ 
ಎಂ.ಬಿ.ಪಾಟೀಲ    

ವಿಜಯಪುರ: ಜಿಲ್ಲೆಯ ನೀರಾವರಿ ಯೋಜನೆಗಳ ಅನುಷ್ಠಾನದ ರಾಜಕೀಯ ಲಾಭ ಪಡೆಯುವ ಸಲುವಾಗಿ ಜಿಲ್ಲೆಯ ಶಾಸಕರ ನಡುವೆ ಎರಡನೇ ಸುತ್ತಿನ ಹೊಯ್ದಾಟ ಏರ್ಪಟ್ಟಿದೆ.

ನಾಲ್ಕು ತಿಂಗಳ ಹಿಂದೆ ತಿಡಗುಂದಿ ಜಲಸೇತುವೆ ಲೋಕಾರ್ಪಣೆ ವಿಷಯವಾಗಿ ಕಾಂಗ್ರೆಸ್‌ ಶಾಸಕರ (ಯಶವಂತರಾಯಗೌಡ ಪಾಟೀಲ, ಶಿವಾನಂದ ಪಾಟೀಲ, ಎಂ.ಬಿ.ಪಾಟೀಲ) ನಡುವೆ ಪರಸ್ಪರ ಹೇಳಿಕೆ, ಪ್ರತಿಹೇಳಿಕೆಗಳು ಕಿಡಿ ಹೊತ್ತಿಸಿದ್ದವು. ಅದು ಜಿಲ್ಲೆಯ ಜನಮಾನಸದಿಂದ ಮರೆಯಾಗುವ ಮುನ್ನವೇ ಇದೀಗನೀರಾವರಿ ನಿಗಮಗಳ ಬೋರ್ಡ್ ಹೊಸ ಯೋಜನೆಗೆ ಅನುಮೋದನೆ ನೀಡಿರುವುದರ ಕ್ರೆಡಿಟ್‌ಗಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ ಶಾಸಕರ ನಡುವೆ ಹೊಯ್ದಾಟ ಹುಟ್ಟುಹಾಕಿದೆ.

‘ಇಂಡಿ ತಾಲ್ಲೂಕಿನ 16 ಕೆರೆಗಳಿಗೆ ನೀರು ತುಂಬಿಸುವ ಹಾಗೂ ಹಳ್ಳಗಳಿಗೆ ನೀರು ಹರಿಸುವ ಯೋಜನೆಗೆ ನೀರಾವರಿ ನಿಗಮದ ನಿರ್ದೇಶಕ ಮಂಡಳಿ ಅನುಮೋದನೆ ನೀಡಲು ತಮ್ಮ ಶ್ರಮ ಕಾರಣ ಎಂಬ ಕಾಂಗ್ರೆಸ್‌ ಶಾಸಕ ಎಂ.ಬಿ.ಪಾಟೀಲರ ಹೇಳಿಕೆಗೆ ತಿರುಗೇಟು ನೀಡಿರುವಬಿಜೆಪಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ, ಈ ಕೆಲಸ ಆಗಿರುವುದು ನಮ್ಮ ಸರ್ಕಾರದಿಂದ. ಆದರೆ, ಪಾಟೀಲರು ತಮ್ಮ ಕನಸು ನನಸಾಗಿದೆ ಎಂದು ಹೇಳುವ ಮೂಲಕ ಜನರ ಹಾದಿ ತಪ್ಪಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ADVERTISEMENT

ನಡಹಳ್ಳಿ ಹೇಳಿಕೆಯಿಂದ ಕೆರಳಿರುವ ಎಂ.ಬಿ.ಪಾಟೀಲ ಶುಕ್ರವಾರ ಪತ್ರಿಕಾ ಹೇಳಿಕೆಯನ್ನು ನೀಡಿ,‘ನಾನು ನೀರಾವರಿ ವಿಷಯದ ಬಗ್ಗೆ ಮಾತನಾಡಿದಾಗಲೆಲ್ಲ, ಕೆಲವು ಬುದ್ದಿಗೇಡಿಗಳು ಸತತವಾಗಿ ಮೈ ಪರಚಿಕೊಳ್ಳುತ್ತಾರೆ. ಇದು ಒಂದು ರೀತಿಯ ವಾಸಿಯಾಗದ ಕಾಯಿಲೆಯಾಗಿದೆ. ಇಂತಹ ಕಾಯಿಲೆಗೆ ಔಷಧ ಇಲ್ಲ’ ಎಂದು ಹೇಳಿದ್ದಾರೆ.

‘ಜಲಸಂಪನ್ಮೂಲ ಸಚಿವನಾಗಿದ್ದಾಗ ಜಿಲ್ಲೆಯನ್ನು ಸಂಪೂರ್ಣ ನೀರಾವರಿಗೆ ಒಳಪಡಿಸಲು ಒಟ್ಟು ₹14,482 ಕೋಟಿ ಮೊತ್ತದ ಯೋಜನೆಗಳಿಗೆ ಅನುಮೋದನೆ ನೀಡಿ, ಅದರಲ್ಲಿ ₹9,809 ಕೋಟಿ ಹಣ ಖರ್ಚು ಮಾಡಲಾಗಿದೆ. ಜಿಲ್ಲೆಯ ನೀರಾವರಿ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವ ಕಾಲವಾಗಿದೆ’ ಎಂದು ಎಂ.ಬಿ.ಪಾಟೀಲ ಹೇಳಿದ್ದಾರೆ.

‘2008-2013ರ ವರೆಗಿನ ಬಿಜೆಪಿ ಆಡಳಿತದ ಅವಧಿಯಲ್ಲಿ ಜಿಲ್ಲೆಯ ನೀರಾವರಿ ಯೋಜನೆಗಳ ಅನುಮೋದಿತ ಮೊತ್ತ ₹1,284 ಕೋಟಿ ಆಗಿದ್ದು, ಅದರಲ್ಲಿ ₹530 ಕೋಟಿ ಮೊತ್ತವನ್ನು ಮಾತ್ರ ಖರ್ಚು ಮಾಡಲಾಗಿತ್ತು’ ಎಂದು ಅವರು ತಿಳಿಸಿದ್ದಾರೆ.

‘ಜಿಲ್ಲೆಗೆ ಸಂಬಂಧಿಸಿದ 16 ಕೆರೆಗಳ ತುಂಬಿಸುವ ಹಾಗೂ ಹಳ್ಳಗಳಿಗೆ ನೀರು ಹರಿಸುವ ಯೋಜನೆಗಳು ನಾನು ರೂಪಿಸಿ, ಸತತ ಪರಿಶ್ರಮ ಪಟ್ಟು, ನಿರಂತರ ಫಾಲೋಅಫ್ ಮಾಡಿದ ಕಾರಣ ಅನುಮೋದನೆ ದೊರಕಿದೆ’ ಎಂದು ತಿಳಿಸಿದ್ದಾರೆ.

ಏಷ್ಯಾದಲ್ಲಿಯೇ ಪ್ರಥಮ ತಿಡಗುಂದಿ ಜಲಸೇತುವೆ ಮಾಡಿದ್ದು ಯಾರು? ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ರೂಪಿಸಿದ್ದು ಯಾರು? ಜಿಲ್ಲೆಯಾದ್ಯಂತ ಸಾವಿರಾರು ಕಿ.ಮೀ ಕಾಲುವೆಗಳನ್ನು 5 ವರ್ಷಗಳ ಅವಧಿಯಲ್ಲಿ ನಿರ್ಮಿಸಿದ್ದು ಯಾರು? ಎಂಬುದು ಜಿಲ್ಲೆಯ ಸಾಮಾನ್ಯ ರೈತನಿಗೂ ಗೊತ್ತಿರುವ ವಿಷಯವಾಗಿದೆ ಎಂದು ಅವರು ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.