ADVERTISEMENT

ಹುಸಿಯಾದ ’ಉಜ್ವಲ’ ಗ್ಯಾಸ್‌ ಸಂಪರ್ಕ: ಕಠಿಣ ಷರತ್ತುಗಳಿಗೆ ಅರ್ಜಿದಾರರು ಹೈರಾಣ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 2:42 IST
Last Updated 27 ಡಿಸೆಂಬರ್ 2025, 2:42 IST
 ಪ್ರಧಾನ ಮಂತ್ರಿ ಉಜ್ವಲ ಗ್ಯಾಸ್ ಯೋಜನೆಯ ಭಿತ್ತಿಪತ್ರ 
 ಪ್ರಧಾನ ಮಂತ್ರಿ ಉಜ್ವಲ ಗ್ಯಾಸ್ ಯೋಜನೆಯ ಭಿತ್ತಿಪತ್ರ    

ಮುದ್ದೇಬಿಹಾಳ: ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ಉರುವಲು ಸೌದೆ ಬಳಸದೇ ಹೊಗೆ ಮುಕ್ತ ಹಳ್ಳಿಗಳನ್ನಾಗಿ ಮಾಡುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಪ್ರಧಾನ ಮಂತ್ರಿ ಉಜ್ವಲ ಯೋಜನೆ’ಯಡಿ ಗ್ಯಾಸ್ ಸಂಪರ್ಕ ಪಡೆಯುವುದು ಕನಸಿನ ಮಾತಾಗಿದೆ.

ಹೌದು, ಪ್ರಧಾನಿ ನರೇಂದ್ರ ಮೋದಿ ಅವರು ಹಳ್ಳಿ ಹಳ್ಳಿಗಳಲ್ಲೂ ಹೊಗೆ ಮುಕ್ತ ವಾತಾವರಣ, ಗೃಹಿಣಿಯರು ಗ್ಯಾಸ್ ಬಳಕೆಯ ಜ್ಞಾನ ಹೊಂದಿ ಉಚಿತ ಗ್ಯಾಸ್ ಸಂಪರ್ಕ ಪಡೆದುಕೊಳ್ಳಲು ವಿಧಿಸಿರುವ ಕಠಿಣ ನಿಯಮಗಳು ಗ್ಯಾಸ್ ಪಡೆದುಕೊಳ್ಳುವುದರಿಂದ ದೂರ ಉಳಿಯುವಂತಾಗುತ್ತಿದೆ ಎಂಬ ಆರೋಪ ಅರ್ಜಿದಾರರಿಂದ ಕೇಳಿ ಬಂದಿವೆ.

ಆರಂಭದಲ್ಲಿ ಯೋಜನೆಯನ್ನು ಘೋಷಣೆಯನ್ನು ಮಾಡಿದಾಗ ಸರಳ ನಿಯಮಗಳನ್ನು ರೂಪಿಸಿದ್ದ ಕೇಂದ್ರ ಸರ್ಕಾರ ಈಗ ಎರಡನೇ ಹಂತದಲ್ಲಿ ಗ್ಯಾಸ್ ಸಂಪರ್ಕ ಪಡೆದುಕೊಳ್ಳಲು ಅತ್ಯಂತ ಕಠಿಣ ನಿಯಮಗಳನ್ನು ರೂಪಿಸಿದೆ ಎಂಬುದು ಉಚಿತ ಗ್ಯಾಸ್ ಗಗನ ಕುಸುಮ ಎಂದು ಅರ್ಜಿ ಸಲ್ಲಿಸಲು ಮುಂದಾಗುವವರು ಹೇಳುತ್ತಿದ್ದಾರೆ.

ADVERTISEMENT

ಗ್ಯಾಸ್ ಅಂಗಡಿಗಳಿಗೆ ಅಲೆದಾಡುತ್ತಿರುವ ಗ್ರಾಹಕರು ಉಚಿತ ಗ್ಯಾಸ್ ಸಂಪರ್ಕ ಹೇಗೆ ಪಡೆದುಕೊಳ್ಳಬೇಕು ಎಂದು ಹತ್ತಾರು ಕಡೆಗಳಲ್ಲಿ ತಿರುಗಾಡುವಂತಾಗಿದೆ.

ಈ ಮುಂಚೆ ಉಚಿತ ಗ್ಯಾಸ್ ಸಂಪರ್ಕ ಪಡೆದುಕೊಳ್ಳಲು ಪಡಿತರ ಚೀಟಿ, ಆಧಾರ್ ಕಾರ್ಡ್‌ ಹಾಗೂ ಜಾತಿ–ಆದಾಯ ಪ್ರಮಾಣ ಪತ್ರ ಸಲ್ಲಿಸಿದ್ದಲ್ಲಿ ಗ್ಯಾಸ್ ಸಂಪರ್ಕ ನೀಡಲಾಗುತ್ತಿತ್ತು. ಆದರೆ, ಈಗ ಅರ್ಜಿದಾರ ತರಬೇಕಾದ ದಾಖಲೆಗಳು ಹುಡುಕಾಟ ನಡೆಸಿದರೂ ಸಿಗಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆ ಕೇವಲ ಕರ್ನಾಟಕದಲ್ಲಿ ಅಲ್ಲ ಇಡೀ ದೇಶದಾದ್ಯಂತ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ಗ್ಯಾಸ್ ಕಂಪನಿಗಳ ಮಾಲೀಕರ ಅಭಿಮತವಾಗಿದೆ.

ಒದಗಿಸಬೇಕಾದ ದಾಖಲೆಗಳು: 

ಪ್ರಧಾನ ಮಂತ್ರಿ ಉಜ್ವಲ ಗ್ಯಾಸ್ ಯೋಜನೆಗೆ ಪಡಿತರ ಚೀಟಿ ಅದರಲ್ಲಿರುವವರ ಎಲ್ಲರ ಆಧಾರ್ ಕಾರ್ಡಗಳು, ಮನೆ ಇದ್ದರೆ ಮನೆಯ ಹಕ್ಕುಪತ್ರ, ಜಮೀನು ಇದ್ದರೆ ಅದರ ಪಹಣಿ ಪತ್ರ, ಮನೆ ಜಮೀನು ಇಲ್ಲದಿದ್ದಲ್ಲಿ ಅದರ ಕುರಿತು ಸಂಬಂಧಿಸಿದ ತಹಶೀಲ್ದಾರ್ ಕಚೇರಿಯಿಂದ ದೃಢೀಕರಣ ಪತ್ರ ಕಡ್ಡಾಯಗೊಳಿಸಲಾಗಿದೆ.

ಪಡಿತರ ಚೀಟಿಯಲ್ಲಿರುವ ಸದಸ್ಯರಲ್ಲಿ ಯಾರಾದರೂ ಉಚಿತ ಗ್ಯಾಸ್ ಸಂಪರ್ಕ ಹೊಂದಿದ್ದರೆ ಅವರಿಗೆ ಈ ಯೋಜನೆಯಡಿ ಸಂಪರ್ಕ ಪಡೆದುಕೊಳ್ಳಲು ಅವಕಾಶ ಇಲ್ಲ ಎಂದು ತಿಳಿಸಲಾಗಿದೆ.

2.50 ಎಕರೆ ಜಮೀನು ಒಳಗಡೆ ಇದ್ದವರು ಅರ್ಜಿ ಸಲ್ಲಿಸಲು ಸೂಚಿಸಿರುವುದು ಗ್ಯಾಸ್ ಸಂಪರ್ಕ ಪಡೆದುಕೊಳ್ಳುವವರೆಗೆ ತಲೆನೋವಾಗಿ ಪರಿಣಮಿಸಿದೆ.

ಕೇವಲ 10 ಜನಕ್ಕೆ ಸಂಪರ್ಕ:

ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ಇ ಕೆವೈಸಿ ಮಾಡಿರುವ ಗ್ರಾಹಕರು ಸಲ್ಲಿಸಿರುವ ಅರ್ಜಿದಾರರ ಪೈಕಿ ಸೇರಿದಂತೆಯೂ ಹೊಸದಾಗಿಯೂ ದಾಖಲೆಗಳನ್ನು ಸೇರಿಸಿ ಅರ್ಜಿ ಸಲ್ಲಿಸಿದ 70 ಜನರಲ್ಲಿ 10 ಜನರಿಗೆ ಗ್ಯಾಸ್ ಸಂಪರ್ಕ ನೀಡಿದ್ದೇವೆ. ದಾಖಲೆಗಳನ್ನು ತರುವುದರಲ್ಲಿಯೇ ಸಾರ್ವಜನಿಕರು ಹೈರಾಣಾಗುತ್ತಿದ್ದಾರೆ ಎಂದು ಸ್ಥಳೀಯ ಇಂಡೇನ್ ಗ್ಯಾಸ್ ಕಂಪನಿಯ ಮಾಲೀಕ ಸುನೀಲಕುಮಾರ ಪೋಳ ಮಾಹಿತಿ ನೀಡಿದರು.

ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಸೂಚಿಸಿರುವ ಮಾನದಂಡಗಳ ಪ್ರಕಾರ ಅರ್ಜಿ ತಂದವರಿಗೆ ಗ್ಯಾಸ್ ಸಂಪರ್ಕ ಕೊಡುವ ಕೆಲಸ ನಾವು ಮಾಡುತ್ತಿದ್ದೇವೆ ಎಂದು ಹೇಳಿದರು.
 

ಇಷ್ಟೊಂದು ಕಠಿಣ ನಿಯಮಗಳನ್ನು ರೂಪಿಸಿರುವುದರಿಂದ ನಾವು ಉಚಿತ ಗ್ಯಾಸ್ ಸಂಪರ್ಕ ಪಡೆದುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ದಾಖಲೆಗಳನ್ನು ತರುವುದಕ್ಕೆ ಅಲೆದಾಡಿ ಹಣಸಮಯ ಖರ್ಚು ಆಗುತ್ತಿದೆ.  
 - ರೇಣುಕಾ ಲಮಾಣಿ, ಗ್ಯಾಸ್ ಪಡೆದುಕೊಳ್ಳಲು ಬಂದ ಅರ್ಜಿದಾರರು
ಪ್ರಧಾನ ಮಂತ್ರಿ ಉಜ್ವಲ ಗ್ಯಾಸ್ ಯೋಜನೆಯು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತಿರುವ ಕಾರಣ ನಮಗೆ ಹೆಚ್ಚಿನ ಮಾಹಿತಿ ಇಲ್ಲ. ಕೇಂದ್ರ ಸರ್ಕಾರದ ಆಹಾರ ಮತ್ತು ನಾಗರಿಕರ ಪೂರೈಕೆ ಇಲಾಖೆಯ ಸುಪರ್ದಿಯಲ್ಲಿ ಇದು ಒಳಗೊಳ್ಳುತ್ತದೆ.
- ವಿನಯಕುಮಾರ ಪಾಟೀಲ, ಉಪ ನಿರ್ದೇಶಕ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ವಿಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.