ADVERTISEMENT

ವಿಜಯಪುರ: ಪ್ರಶಾಂತ್‌ ಭೂಷಣ್ ಪ್ರಕರಣ ಕೈಬಿಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 15:40 IST
Last Updated 20 ಆಗಸ್ಟ್ 2020, 15:40 IST
ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌‌ ಅವರ ಮೇಲಿನ ನ್ಯಾಯಾಂಗ ನಿಂದನೆಯ ಪ್ರಕರಣ ಕೈ ಬಿಡಬೇಕೆಂದು ಆಗ್ರಹಿಸಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು 
ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌‌ ಅವರ ಮೇಲಿನ ನ್ಯಾಯಾಂಗ ನಿಂದನೆಯ ಪ್ರಕರಣ ಕೈ ಬಿಡಬೇಕೆಂದು ಆಗ್ರಹಿಸಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು    

ವಿಜಯಪುರ: ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌‌ ಅವರ ಮೇಲಿನ ದುರುದ್ದೇಶಪೂರಿತ ನ್ಯಾಯಾಂಗ ನಿಂದನೆ ಪ್ರಕರಣವನ್ನು ಈ ಕೂಡಲೇ ಕೈ ಬಿಡಬೇಕೆಂದು ಆಗ್ರಹಿಸಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಪ್ರಗತಿಪರ ಸಂಘಟನೆಗಳ ವೇದಿಕೆ, ಸ್ಲಂಅಭಿವೃದ್ಧಿ ಒಕ್ಕೂಟ ಮತ್ತು ನಾವು ಭಾರತೀಯರು, ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ, ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗ್‍ನೈಸೇಷನ್ಜಿಲ್ಲಾ ಸಮಿತಿ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕೆ.ಎಂ.ಕೂಡ್ಲಗಿ,ಪ್ರಶಾಂತ್‌ ಭೂಷಣರವರ ಮೇಲಿನ ಈ ಕ್ರಮವು ನ್ಯಾಯಾಂಗವನ್ನೇ ಸಂಶಯದಿಂದ ನೋಡುವಂತಾಗಿದೆ. ಒಬ್ಬ ಖ್ಯಾತ ವಕೀಲರು ಮಾಡಿದ ಎರಡು ಸಾಲುಗಳ ಟ್ವೀಟ್‍ನಿಂದ ತನ್ನ ಘನತೆ ಮತ್ತು ಗೌರವಕ್ಕೆ ಬೆದರಿಕೆ ಉಂಟಾಗಿದೆ ಎಂದು ಭಾವಿಸುವಷ್ಟರ ಮಟ್ಟಿಗೆ ಸುಪ್ರೀಂ ಕೋರ್ಟ್‌ ತನ್ನದೇ ಸ್ವಂತ ಸಮಗ್ರತೆ ಮತ್ತು ನೈತಿಕತೆಯ ಮೇಲೆ ವಿಶ್ವಾಸ ಕಳೆದುಕೊಂಡಿದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಪ್ರಜೆಗಳ ಜನತಾಂತ್ರಿಕ ಹಕ್ಕುಗಳಿಗೆ ಮತ್ತು ನಾಗರಿಕ ಹಕ್ಕುಗಳಿಗೆ ಸಂಬಂಧಿಸಿದ ಹಲವಾರು ತುರ್ತು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವಾಗ, ಈ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆಯ ಪ್ರಕರಣವನ್ನು ತರಾತುರಿಯಲ್ಲಿ ಕೈಗೆತ್ತಿಕೊಂಡು ಮೂವರು ನ್ಯಾಯಾಧೀಶರ ಪೀಠ ನೀಡಿದ ತೀರ್ಪು ಉತ್ತರಕ್ಕಿಂತ ಹೆಚ್ಚಿನ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದರು.

ವಾಸ್ತವದಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರ ಮೇಲಿನ ಭ್ರಷ್ಟಾಚಾರ ಆರೋಪಗಳು ಹೊಸದೇನಲ್ಲ. ಪ್ರಶಾಂತ್ ಭೂಷಣ್ ಅವರು ಒಂಬತ್ತು ವರ್ಷಗಳ ಹಿಂದೆಯೇ ಇಂತಹ ಆರೋಪವನ್ನು ಮಾಡಿದ್ದರು ಮತ್ತು ನ್ಯಾಯಾಲಯವು ಇದರಲ್ಲಿ ಯಾವುದೇ ದುರುದ್ದೇಶವನ್ನು ಕಂಡಿರಲಿಲ್ಲ. ಹಾಗಿದ್ದರೆ ಈಗಲೇ ಏಕೆ? ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿಬಿ. ಭಗವಾನ್‍ರೆಡ್ಡಿ, ಶ್ರೀನಾಥ ಪೂಜಾರಿ, ಅಕ್ರಂ ಮಾಶಾಳಕರ, ಸದಾನಂದ ಮೋದಿ, ಕೆ.ಎಫ್. ಅಂಕಲಗಿ, ಸಿದ್ದಲಿಂಗ ಬಾಗೇವಾಡಿ, ಹಸನ್ ಪಟೇಲ್‍,ಅಡಿವೆಪ್ಪ ಸಾಲಗಲ್,ಲಕ್ಷ್ಮಣ ಹದ್ರಾಳ, ಭರತ್‍ಕುಮಾರ್ ಎಚ್.ಟಿ, ವಿದ್ಯಾವತಿ ಅಂಕಲಗಿ, ದಸ್ತಗೀರ ಉಕ್ಕಲಿ, ಎನ್.ಎಂ. ನಿಡಗುಂದಿ, ಎಂ.ಎಲ್. ಗೊರಗುಂಡಗಿ, ಎಂ. ಆರ್. ಹವಾಲ್ದಾರ್, ಎಸ್.ಎಸ್. ಜಾದವ್, ರಾಜಶೇಖರ ಕುದರಿ, ಎಸ್.ಕೆ.ಬದಾಮಿ, ಫಯಾಜ್ ಕಲಾದಗಿ, ಅನಿಲ ಸೂರ್ಯವಂಶಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.