ತಾಳಿಕೋಟೆ: ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಆರಂಭವಾಗಿರುವ ಪೂರ್ವ ಮುಂಗಾರು ರೈತರಲ್ಲಿ ಹರ್ಷ ಮೂಡಿಸಿರುವುದರೊಂದಿಗೆ ಹಲವೆಡೆ ಬೆಳೆಗಳಿಗೆ ಹಾನಿ ಮಾಡಿದೆ.
ತಾಳಿಕೋಟೆ ಪಟ್ಟಣದ ಹಡಗಿನಾಳ ರಸ್ತೆಯಲ್ಲಿರುವ ಕೆ.ಆರ್. ಚೌಧರಿ ಅವರ ಜಮೀನಿನಲ್ಲಿ ನೀರಾವರಿಗಾಗಿ ಮಾಡಲಾಗಿರುವ ಕಾಲುವೆ ಕಾಮಗಾರಿ ಎರಡು ವರ್ಷಗಳಿಂದ ಮುಂದುವರೆದಿದ್ದು ಮಳೆಗಾಲದಲ್ಲಿ ತೋಡಿದ ಕಾಲುವೆಗಳಲ್ಲಿ ನೀರು ಹರಿದು ಜಮೀನುಗಳಿಗೆ ಅಪಾರ ನಷ್ಟವನ್ನುಂಟು ಮಾಡಿವೆ.
ತಾಲ್ಲೂಕಿನ ಕೊಣ್ಣೂರ ಗ್ರಾಮ ವ್ಯಾಪ್ತಿಯ ಜಮೀನುಗಳಲ್ಲಿ ಮುಳವಾಡ ಏತ ನೀರಾವರಿ 3ನೇ ಹಂತದ ಕಾಮಗಾರಿಗಾಗಿ ತೋಡಿರುವ ಕಾಲುವೆ ಕೆಲಸ ಪೂರ್ಣಗೊಳ್ಳದೆ ಇರುವುದರಿಂದ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬಸವರಾಜ ದ್ಯಾಪೂರ್, ಯಮನಪ್ಪ ಹುಳಗಬಾಳ, ಬಸನಗೌಡ ದ್ಯಾಪೂರ್, ಸಿದ್ದನಗೌಡ ದ್ಯಾಪೂರ್, ಪ್ರಕಾಶ್ ಹಡಲಗೇರಿ, ದೊಡ್ಡಮ್ಮ ದ್ಯಾಪೂರ್ ಮೊದಲಾದವರ ಜಮೀನುಗಳಲ್ಲಿ ಕಾಲುವೆ ಒಡ್ಡು ಒಡೆದು ಅಪಾರ ಫಲವತ್ತಾದ ಮಣ್ಣು ನಾಶವಾಗಿದೆ ಎಂದು ತಿಳಿಸಿದ್ದಾರೆ.
ಡಿಸೆಂಬರ್ 2023ರಲ್ಲಿ ಕಾಮಗಾರಿ ಆರಂಭವಾಗಿದ್ದು ಮೊದಲನೇ ನೋಟಿಸ್ ನೀಡಲಾಗಿದೆ. ಎರಡನೆಯ ನೋಟಿಸ್ ಇನ್ನೂ ನೀಡಿಲ್ಲ. ಕಾಲುವೆ ತೆಗೆದ ದುಡ್ಡು ಇನ್ನೂ ಹಾಕಿಲ್ಲ. ಕೇಳಿದರೆ ಇನ್ನೂ ಒಂದು ತಿಂಗಳು ಆಗಲ್ಲ ಎಂದು ಹೇಳುತ್ತಿದ್ದಾರೆ. ಇತ್ತ ದುಡ್ಡೂ ಬಂದಿಲ್ಲ, ಅತ್ತ ಜಮೀನೂ ಹಾಳಾಗುತ್ತಿವೆ. ಫಲವತ್ತಾದ ಮಣ್ಣು ಹರಿದುಹೋಗಿ ಕೊಕಲು ಬಿದ್ದಿವೆ ಎಂದು ರೈತರು ಗೋಳಿಟ್ಟರು.
ಹೆಚ್ಚಿನ ಜಮೀನುಗಳು ನೀರು ನಿಂತು ಕೆರೆಯಂತಾಗಿದ್ದರೆ ಹಲವೆಡೆ ಒಡ್ಡುವಾರಿಗಳು ಒಡೆದು ಅಪಾರ ನಾಶಕ್ಕೆ ಕಾರಣವಾಗಿದ್ದು ರೈತರು ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.