ADVERTISEMENT

ಚುನಾವಣಾ ಭರವಸೆ ಈಡೇರಿಸಲು ಆದ್ಯತೆ: ಆರ್‌.ಎಸ್‌.ಪಾಟೀಲ ಕೂಚಬಾಳ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2021, 12:05 IST
Last Updated 3 ನವೆಂಬರ್ 2021, 12:05 IST
ಆರ್‌.ಎಸ್‌.ಪಾಟೀಲ ಕೂಚಬಾಳ
ಆರ್‌.ಎಸ್‌.ಪಾಟೀಲ ಕೂಚಬಾಳ   

ವಿಜಯಪುರ: ಸಿಂದಗಿ ವಿಧಾನಸಭೆ ಉಪ ಚುನಾವಣೆ ವೇಳೆ ಕ್ಷೇತ್ರದ ಮತದಾರರಿಗೆ ನೀಡಲಾಗಿರುವ ಭರವಸೆ ಈಡೇರಿಕೆಗೆ ರಾಜ್ಯ ಸರ್ಕಾರ ಪ್ರಥಮ ಆದ್ಯತೆ ನೀಡಲಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಎಸ್‌.ಪಾಟೀಲ ಕೂಚಬಾಳ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಂದಗಿ ಕ್ಷೇತ್ರದಲ್ಲಿ ಹದಗೆಟ್ಟಿರುವ ರಸ್ತೆ, ಸ್ವಚ್ಛತೆ ಸೇರಿದಂತೆ ಜನತೆಯ ನಿರೀಕ್ಷೆಗೆ ಸ್ಪಂದಿಸುವಂತೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ಸಿಂದಗಿ ಗೆಲುವಿನಿಂದ ಜಿಲ್ಲೆಯಲ್ಲಿ ಬಿಜೆಪಿ ಶಕ್ತಿ ವೃದ್ಧಿಯಾಗಿದೆ. ಮುಂಬರುವ ವಿಧಾನ ಪರಿಷತ್‌, ಜಿಲ್ಲಾ ಪಂಚಾಯ್ತಿ, ಮಹಾನಗರ ಪಾಲಿಕೆ ಚುನಾವಣೆಯನ್ನು ಇದೇ ಮಾದರಿಯಲ್ಲೇ ಒಗ್ಗಟ್ಟಿನಿಂದ ಎದುರಿಸಲಾಗುವುದು ಎಂದು ಹೇಳಿದರು.

ADVERTISEMENT

ಬಿಜೆಪಿ ಶಾಸಕರ ಸಂಖ್ಯೆ ಜಿಲ್ಲೆಯಲ್ಲಿ ನಾಲ್ಕಕ್ಕೆ ಏರಿಕೆಯಾಗಿದೆ. ಸಚಿವ ಸಂಪುಟದಲ್ಲಿಜಿಲ್ಲೆಗೆ ಪ್ರಾತಿನಿಧ್ಯ ನೀಡಬೇಕು.ಈ ಕುರಿತು ಪಕ್ಷದ ವರಿಷ್ಠರು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

ಸಿಂದಗಿ ಕ್ಷೇತ್ರದಲ್ಲಿ ನಮ್ಮ ನಿರೀಕ್ಷೆ ಮೀರಿ ಜನ ಬೆಂಬಲ ವ್ಯಕ್ತವಾಗಿದೆ. ಈ ಅಭೂತಪೂರ್ವ ಗೆಲುವಿಗೆ ಕಾರಣವಾದ ಜನರಿಗೆ, ಪಕ್ಷದ ಕಾರ್ಯಕರ್ತರು, ಮುಖಂಡರು, ಶಾಸಕರು, ಸಚಿವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಮಾರ್ಗದರ್ಶನದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದ ಅವರು ಉಸ್ತುವಾರಿಯಲ್ಲಿ ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ, ಶಶಿಕಲಾ ಜೊಲ್ಲೆ, ವಿ.ಸೋಮಣ್ಣ ಅವರ ಶ್ರಮ ಪಕ್ಷದ ಅಭ್ಯರ್ಥಿ ಗೆಲುವಿಗೆ ಮುಖ್ಯ ಕಾರಣವಾಗಿದೆ ಎಂದರು.

ಪಕ್ಷದ ಅಭ್ಯರ್ಥಿ ರಮೇಶ ಭೂಸನೂರ ಅವರು ಈ ಹಿಂದೆ ಎರಡು ಬಾರಿ ಶಾಸಕರಾಗಿ ಜನಾನುರಾಗಿಯಾಗಿದ್ದರು. ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಸೋತಿದ್ದರು. ಆದರೂ ಜನರ ಸಂಪರ್ಕದಲ್ಲಿ ಇದ್ದು, ಕಷ್ಟಕಾಲದಲ್ಲಿ ನೆರವಾದರು. ಇದು ಸಹ ಅವರ ಗೆಲುವಿಗೆ ಮುಖ್ಯ ಕಾರಣವಾಯಿತು ಎಂದು ವಿಶ್ಲೇಷಿಸಿದರು.

ಬಿಜೆಪಿ ಗೆಲ್ಲಿಸಿದ ಸಿಂದಗಿ ಕ್ಷೇತ್ರದ ಮತದಾರರಿಗೆ ಅಭಿನಂದನೆ ಸಲ್ಲಿಸಲು ಶೀಘ್ರದಲ್ಲೇ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು ಎಂದರು.

‘ದಲಿತ ಮುಖಂಡರು ಹೊಟ್ಟೆಪಾಡಿಗಾಗಿ ಬಿಜೆಪಿ ಸೇರಿಕೊಂಡಿದ್ದಾರೆ‘ ಎಂಬ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ಖಂಡನೀಯ. ಇಂತಹ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ ಎಂದರು.

ಸಿದ್ದರಾಮಯ್ಯ ಅವರು ಅಹಿಂದ ಮತದಾರರನ್ನು ಸ್ವಾರ್ಥ ರಾಜಕಾರಣಕ್ಕೆ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದರು.

ಮುಖಂಡರಾದ ಚಂದ್ರಶೇಖರ ಕವಟಗಿ, ಶಿವರುದ್ರಪ್ಪ ಬಾಗಲಕೋಟೆ, ಬಸವರಾಜ ಬಿರಾದಾರ, ವಿಜಯ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

***

ಸಿಂದಗಿ ಉಪ ಚುನಾವಣೆಯಲ್ಲಿ ಎಲ್ಲ ವರ್ಗ, ಸಮಾಜದ ಮತದಾರರೂ ಬೆಂಬಲಿಸಿದ ಪರಿಣಾಮ ಬಿಜೆಪಿ ಗೆಲುವು ಸಾಧಿಸಿದೆ

–ಆರ್‌.ಎಸ್‌.ಪಾಟೀಲ ಕೂಚಬಾಳ, ಅಧ್ಯಕ್ಷ, ಬಿಜೆಪಿ ಜಿಲ್ಲಾ ಘಟಕದ, ವಿಜಯಪುರ

***

ಸಿಂದಗಿ ಚುನಾವಣೆ ವೇಳೆ ನಮ್ಮ ಮುಖಂಡರು ಸೇರಿದಂತೆ ನಾವೂ ಭರವಸೆ ನೀಡಿದಂತೆ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಆದ್ಯತೆ ನೀಡಲಿದೆ

–ಸೋಮನಗೌಡ ಪಾಟೀಲ ಸಾಸನೂರ ಶಾಸಕ, ದೇವರಹಿಪ್ಪರಗಿ

***

ಸಿಂದಗಿ ಗೆಲುವು ಪಕ್ಷದ ಕಾರ್ಯಕರ್ತರು, ಮುಖಂಡರ ಹುಮ್ಮಸ್ಸು ಹೆಚ್ಚಿಸಿದೆ. ಮುಂಬರುವ ಎಲ್ಲ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ

–ವಿಜುಗೌಡ ಪಾಟೀಲ, ಅಧ್ಯಕ್ಷ, ಕರ್ನಾಟಕರ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.