ವಿಜಯಪುರ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ(ಆರ್‌ಸಿಯುಬಿ)ದ ವಿಜಯಪುರ ಸ್ನಾತಕೋತ್ತರ ಕೇಂದ್ರದ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಎಲ್.ಎನ್. ಮೂರ್ತಿ ಅವರನ್ನು ಅಮಾನತುಗೊಳಿಸಲಾಗಿದೆ.
ಸಂಶೋಧನಾ ವಿದ್ಯಾರ್ಥಿನಿಯೊಬ್ಬರಿಗೆ ಲೈಂಗಿಕ ಮತ್ತು ಮಾನಸಿಕ ಕಿರುಕುಳ ನೀಡಿದ ಆರೋಪದ ಮೇಲೆ ಅವರ ವಿರುದ್ಧದ ಪ್ರಾಥಮಿಕ ಸಾಕ್ಷ್ಯಗಳು ನಿಜವೆಂದು ಕಂಡುಬಂದಿದೆ.
‘ಪ್ರೊ. ಮೂರ್ತಿ ತನಗೆ ಮಾನಸಿಕ ಮತ್ತು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ’ ಎಂದು ಸಂಶೋಧನಾ ವಿದ್ಯಾರ್ಥಿನಿಯೊಬ್ಬರು 2024ರ ನವೆಂಬರ್ 4 ರಂದು ಕುಲಪತಿ ಮತ್ತು ಕುಲಸಚಿವರ ಮುಂದೆ ಮೌಖಿಕ ದೂರು ನೀಡಿದ್ದರು. ಲಿಖಿತ ದೂರು ಮತ್ತು ಸಾಕ್ಷ್ಯಗಳನ್ನು ಸಲ್ಲಿಸಲು ಅವರಿಗೆ ಏಳು ದಿನಗಳ ಕಾಲಾವಕಾಶ ನೀಡಲಾಗಿತ್ತು. ದೂರುದಾರರು ಕೈಬರಹದ ದೂರು ನೀಡಿ ರಿಜಿಸ್ಟ್ರಾರ್ ಮುಂದೆ ಸಾಕ್ಷ್ಯಗಳನ್ನು ಹಾಜರುಪಡಿಸಿದ್ದರು.
ವಿಶ್ವವಿದ್ಯಾಲಯದ ಆಂತರಿಕ ಕುಂದುಕೊರತೆ ಪರಿಹಾರ ಸಮಿತಿಯು ಸಂಶೋಧನಾ ವಿದ್ಯಾರ್ಥಿನಿ ನೀಡಿದ ದೂರಿನ ವಿಚಾರಣೆ ನಡೆಸಿ ಜುಲೈ 14 ರಂದು ರಿಜಿಸ್ಟ್ರಾರ್‌ಗೆ ವರದಿ ಸಲ್ಲಿಸಿತು.
ವರದಿಯಲ್ಲಿ, ಪ್ರೊ. ಮೂರ್ತಿ ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡಿರುವುದು ಹಾಗೂ ಸಂಶೋಧನಾ ವಿದ್ಯಾರ್ಥಿನಿಯ ಮೇಲಿನ ಲೈಂಗಿಕ ಮತ್ತು ಮಾನಸಿಕ ಕಿರುಕುಳದ ಆರೋಪಗಳು ಮೇಲ್ನೋಟಕ್ಕೆ ನಿಜವೆಂದು ಕಂಡುಬಂದ ಕಾರಣ, ರಿಜಿಸ್ಟ್ರಾರ್ ಸಂತೋಷ್ ಕಾಮಗೌಡ ಅವರು ಪ್ರೊಫೆಸರ್ ಮೂರ್ತಿ ಅವರನ್ನು ಅಮಾನತುಗೊಳಿಸಿದ್ದಾರೆ.
ಸಕ್ಷಮ ಪ್ರಾಧಿಕಾರದ ಅನುಮತಿಯೊಂದಿಗೆ ಅಮಾನತು ಅವಧಿಯಲ್ಲಿ ಮೂರ್ತಿ ಅವರನ್ನು ಪ್ರಧಾನ ಕಚೇರಿಯಿಂದ ಹೊರಹೋಗದಂತೆ ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.