ADVERTISEMENT

ಮುದ್ದೇಬಿಹಾಳ: ಲಾಭ ತಂದ ಸಾವಯವ ಕೃಷಿ

ಪ್ರಜಾವಾಣಿ ವಿಶೇಷ
Published 18 ಆಗಸ್ಟ್ 2023, 5:01 IST
Last Updated 18 ಆಗಸ್ಟ್ 2023, 5:01 IST
ಮುದ್ದೇಬಿಹಾಳ ತಾಲ್ಲೂಕಿನ ನೇಬಗೇರಿಯ ತಮ್ಮ ಜಮೀನಿನಲ್ಲಿ ಬೆಳೆದಿರುವ ಅಂಜೂರ ಹಣ್ಣಿನ ಗಿಡಗಳನ್ನು ತೋರಿಸುತ್ತಿರುವ ಬಸನಗೌಡ ಬ್ಯಾಲ್ಯಾಳ ರೈತ ದಂಪತಿ
ಮುದ್ದೇಬಿಹಾಳ ತಾಲ್ಲೂಕಿನ ನೇಬಗೇರಿಯ ತಮ್ಮ ಜಮೀನಿನಲ್ಲಿ ಬೆಳೆದಿರುವ ಅಂಜೂರ ಹಣ್ಣಿನ ಗಿಡಗಳನ್ನು ತೋರಿಸುತ್ತಿರುವ ಬಸನಗೌಡ ಬ್ಯಾಲ್ಯಾಳ ರೈತ ದಂಪತಿ   

ಶಂಕರ ಈ.ಹೆಬ್ಬಾಳ

ಮುದ್ದೇಬಿಹಾಳ: ತಾಲ್ಲೂಕಿನ ನೇಬಗೇರಿಯ ರೈತ ಬಸನಗೌಡ ಬ್ಯಾಲ್ಯಾಳ ತಮಗಿರುವ ಐದು ಎಕರೆ  ಜಮೀನಿನಲ್ಲಿ ಸಾವಯುವ ಕೃಷಿಯೊಂದಿಗೆ ಸಮಗ್ರ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.

ನಾಲ್ಕು ಎಕರೆ ಜಮೀನಿನಲ್ಲಿ ಅಂಜೂರ ಹಣ್ಣಿನ ಗಿಡಗಳನ್ನು ಬೆಳೆದಿದ್ದಾರೆ. ಜಮೀನಿನ ಬದುವಿನಲ್ಲಿ 250 ತೆಂಗಿನ ಗಿಡಗಳನ್ನು ಹಚ್ಚಿದ್ದಾರೆ. ಸಾಗವಾನಿ, ಪೇರು, ರೇಷ್ಮೆ ಗಿಡಗಳನ್ನು ಬೆಳೆಸಿದ್ದಾರೆ.  

ADVERTISEMENT

ಅರ್ಧ ಎಕರೆ ಜಮೀನಿನಲ್ಲಿ ಬೃಹತ್ ಕೃಷಿ ಹೊಂಡ ನಿರ್ಮಿಸಿದ್ದು, ಇದಕ್ಕೆ ಒಮ್ಮೆಗೆ ಕಾಲುವೆ ನೀರು ತುಂಬಿಸಿದರೆ ವರ್ಷಪೂರ್ತಿ ಇವರ ಬೆಳೆಗಳಿಗೆ ಸಾಕಾಗುತ್ತದೆ.

ಜೊತೆಗೆ ಕೋಳಿ, ಮೇಕೆಗಳನ್ನು ಸಾಕಿದ್ದಾರೆ. ಕೋಳಿಗಳಿಗಾಗಿ ವಿಶೇಷ ಗೂಡುಗಳನ್ನು ನಿರ್ಮಿಸಲಾಗಿದೆ. ನಿತ್ಯವೂ 10ಕ್ಕೂ ಹೆಚ್ಚು ಜವಾರಿ ಮೊಟ್ಟೆಗಳನ್ನು ಕೋಳಿಗಳು ಇಡುತ್ತಿವೆ. 20ಕ್ಕೂ ಹೆಚ್ಚು ಮೇಕೆಗಳಿವೆ. ಎರಡು ಆಕಳುಗಳಿದ್ದು, ಸಾವಯವ ಗೊಬ್ಬರ ಮಾಡಲು ಮೂರು ಕೊಟ್ಟಿಗೆಗಳನ್ನು ಮಾಡಿಕೊಂಡಿದ್ದಾರೆ. 

ಟೊಮೆಟೊ ಗಿಡಗಳನ್ನೂ ಕೂಡಾ ಸಾವಯವ ಕೃಷಿಯಿಂದಲೇ ಇವರ ಜಮೀನಿನಲ್ಲಿ ಬೆಳೆದಿರುವುದು
ಕಂಡು ಬರುತ್ತಿದೆ. ಹೊಲದಲ್ಲಿ ಪ್ಲಾಸ್ಟಿಕ್ ಕಸವೇ ಕಾಣುವುದಿಲ್ಲ. ಬಿದ್ದ ಮಳೆ ನೀರು ಹೊಲದಲ್ಲಿ ಇಂಗಿ
ಹೆಚ್ಚಾದ ನೀರು ಗುಂಡಾವರ್ತಿ ಮುಖಾಂತರ ಜಮೀನುಗಳಿಗೆ ಹೋಗುವಂತೆ ಮಾಡಿದ್ದಾರೆ. ಇದರಿಂದ ಜಮೀನಿನಲ್ಲಿ ಸಾಕಷ್ಟು ತೇವಾಂಶ ಹಿಡಿದಿಡುತ್ತದೆ.

ಅಂಜೂರ ಹಣ್ಣುಗಳು ಇನ್ನೆರಡು ತಿಂಗಳಲ್ಲಿ ಕೈಗೆ ಬರುತ್ತದೆ. ಬಳ್ಳಾರಿ ಜಿಲ್ಲೆ ಕುರುಗೋಡಿನಿಂದ 750 ಅಂಜೂರ ಗಿಡಗಳನ್ನು ತೆಗೆದುಕೊಂಡು ಬಂದಿರುವುದಾಗಿ ಹೇಳುವ ರೈತ ಬಸನಗೌಡರು, ಇದು ಔಷಧೀಯ ಗುಣವುಳ್ಳದ್ದಾಗಿದ್ದು, ಹೆಚ್ಚಿನ ಲಾಭ ತಂದುಕೊಡುವ ನಿರೀಕ್ಷೆ ಇಟ್ಟುಕೊಂಡಿರುವುದಾಗಿ ಹೇಳಿದರು.

ಮುದ್ದೇಬಿಹಾಳ ತಾಲ್ಲೂಕಿನ ನೇಬಗೇರಿಯ ರೈತ ಬಸನಗೌಡ ಬ್ಯಾಲ್ಯಾಳ ಅವರ ಜಮೀನಿನಲ್ಲಿ ಅರ್ಧ ಎಕರೆ ಪ್ರದೇಶದಲ್ಲಿರುವ ಕೃಷಿ ಹೊಂಡ

ಆಸರೆಯಾದ ಯೋಜನೆ: ಕಳೆದ ವರ್ಷ ತೋಟಗಾರಿಕೆ ಇಲಾಖೆಯಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ₹ 2.80 ಲಕ್ಷ  ಸಹಾಯಧನ ಪಡೆದುಕೊಂಡು ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ. ಅದಕ್ಕೆ ಕಾಲುವೆ ನೀರು ತುಂಬಿಸಿ ಬೆಳೆಗಳಿಗೆ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ.

‘ಸಾವಯವ ಕೃಷಿ ಮಾಡಿದರೆ ವಿಷಮುಕ್ತ ಬೆಳೆಯನ್ನು ಜನರಿಗೆ ಕೊಡಲು ಸಾಧ್ಯವಿದೆ. ರೈತರ ಮೇಲೆ ಸಮಾಜ ಹೊಂದಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ಕಡೆಗೆ ಗಮನ ಹರಿಸಬೇಕು. ಸಾವಯವ ಕೃಷಿ ಖರ್ಚು ಕಡಿಮೆ, ಲಾಭವೂ ಇದೆ. ಆದರೆ, ರೈತರು ಸ್ವಲ್ಪ ತಾಳ್ಮೆಯಿಂದ ಕೃಷಿ ಚಟುವಟಿಕೆ ಮಾಡಿದರೆ ಸಮಾಜಕ್ಕೆ ಹಿತಕಾರಿಯಾಗಬಹುದು’ ಎನ್ನುತ್ತಾರೆ ಸಾವಯವ ಕೃಷಿಕ ಬಸನಗೌಡ ಬ್ಯಾಲ್ಯಾಳ (ಸಂಪರ್ಕ ಸಂಖ್ಯೆ 9620890685)

*

ಸಾವಯುವ ಕೃಷಿಯಿಂದಲೇ ಬೆಳೆ ಬೆಳೆದು ಲಾಭ ಮಾಡಿಕೊಳ್ಳುವುದರ ಜೊತೆಗೆ ಭೂಮಿ ಆರೋಗ್ಯದ ಜೊತೆಗೆ ಸಮಾಜದ ಆರೋಗ್ಯ ಕಾಪಾಡಲು ಸಾಧ್ಯವಿದೆ. 

- ಬಸನಗೌಡ ಬ್ಯಾಲ್ಯಾಳ, ಸಾವಯವ ಕೃಷಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.