ADVERTISEMENT

ಪರಿಸರ ರಕ್ಷಣೆ ಎಲ್ಲರ ಹೊಣೆ

ತರಬೇತಿ ಕಾರ್ಯಕ್ರಮ; ರವೀಂದ್ರ ಎಸ್.ಕಾರಬಾರಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 12:59 IST
Last Updated 12 ಸೆಪ್ಟೆಂಬರ್ 2019, 12:59 IST
ವಿಜಯಪುರದ ಕೃಷಿ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ತರಬೇತಿಯನ್ನು ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ರವೀಂದ್ರ ಎಸ್.ಕಾರಬಾರಿ ಉದ್ಘಾಟಿಸಿದರು
ವಿಜಯಪುರದ ಕೃಷಿ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ತರಬೇತಿಯನ್ನು ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ರವೀಂದ್ರ ಎಸ್.ಕಾರಬಾರಿ ಉದ್ಘಾಟಿಸಿದರು   

ವಿಜಯಪುರ: ‘ಇಂದು ಅನೇಕ ಮಾಲಿನ್ಯಗಳಿಂದ ವಾತಾವರಣ ಕಲುಷಿತಗೊಳ್ಳುತ್ತಿದೆ. ಪರಿಸರ ರಕ್ಷಣೆಯ ಜವಾಬ್ದಾರಿ ಪ್ರತಿಯೊಬ್ಬರ ಹೊಣೆಯಾಗಿದೆ’ ಎಂದು ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ರವೀಂದ್ರ ಎಸ್.ಕಾರಬಾರಿ ಹೇಳಿದರು.

ನಗರ ಹೊರವಲಯದ ಕೃಷಿ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ‘ಪರಿಸರ ಕಾನೂನುಗಳು ಹಾಗೂ ತ್ಯಾಜ್ಯ ನಿರ್ವಹಣಾ ನಿಯಮಗಳ ತರಬೇತಿ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಾವು ಸೇವಿಸುವ ಗಾಳಿ, ಕುಡಿಯುವ ನೀರು ಮತ್ತು ವಿಚಾರ ಮಾಡುವ ಮನಸ್ಸು ಕೂಡ ಮಲಿನವಾಗಿದೆ. ಇದೇ ರೀತಿ ಮುಂದುವರೆದರೆ ಮನುಕುಲಕ್ಕೆ ಉಳಿಗಾಲವಿಲ್ಲ. ಆದ್ದರಿಂದ ಕಾನೂನುಗಳನ್ನು ಇನ್ನಷ್ಟು ಬಿಗಿಗೊಳಿಸಿ ವಿವಿಧ ಕಾರ್ಖಾನೆಗಳ ಮೇಲೆ ನಿಯಂತ್ರಣ ಸಾಧಿಸಬೇಕಾಗಿದ್ದು, ಕಾರ್ಯಾಗಾರದಲ್ಲಿ ಭಾಗವಹಿಸಿದ ಎಲ್ಲರೂ ತಮ್ಮ ಜವಾಬ್ದಾರಿ, ಕಾರ್ಯತತ್ಪರತೆ ಮೆರೆದು ಪರಿಸರ ಉಳಿಸಲು ಶ್ರಮಿಸಬೇಕು’ ಎಂದು ತಿಳಿಸಿದರು.

ADVERTISEMENT

ಕೃಷಿ ವಿಸ್ತರಣಾಧಿಕಾರಿ ಡಾ.ಆರ್.ಬಿ.ಬೆಳ್ಳಿ ಮಾತನಾಡಿ, ‘ಕಾರ್ಖಾನೆಗಳ ನೀರಿನ ಅವೈಜ್ಞಾನಿಕ ನಿರ್ವಹಣೆಯಿಂದ ನೀರು ಮಲಿನಗೊಂಡು ಜಲಚರ, ಪ್ರಾಣಿಪಕ್ಷಿಗಳ ಜೀವಕ್ಕೆ ಮಾರಕವಾಗಿದೆ. ಕೃಷಿ ತ್ಯಾಜ್ಯವನ್ನು ಹೇಗೆ ಗೊಬ್ಬರವಾಗಿ ಮಾರ್ಪಡಿಸಿ ಬೆಳೆಗಳಿಗೆ ಪೋಷಕಾಂಶ ಒದಗಿಸುವಂತೆ ಮಾಡಲಾಗುತ್ತಿದೆಯೋ, ಅದೇ ರೀತಿ ಕಾರ್ಖಾನೆ ತ್ಯಾಜ್ಯಗಳನ್ನು ಸಂಸ್ಕರಿಸಿ, ವಿಷಕಾರಿ ವಸ್ತುಗಳನ್ನು ಹೊರಹಾಕಿ, ಅದನ್ನು ಕೃಷಿ ಯೋಗ್ಯ ಕೆಲಸಕ್ಕಾಗಿ ಬಳಸಿಕೊಳ್ಳುವಂತೆ ಮಾಡಬೇಕಾಗಿದೆ’ ಎಂದರು.

ನಿವೃತ್ತ ಮುಖ್ಯ ಪರಿಸರ ಅಧಿಕಾರಿ ಡಿ.ಆರ್.ಕುಮಾರಸ್ವಾಮಿ, ಮಾಲಿನ್ಯ ನಿಯಂತ್ರಣ ಮಂಡಳಿಯ ತಾಂತ್ರಿಕ ಅಧಿಕಾರಿ ಟಿ.ಮಹೇಶ, ಯೋಜನಾ ಅಭಿವೃದ್ಧಿ ಅಧಿಕಾರಿ ಸಿ.ರಮೇಶ ಹಾಗೂ ತರಬೇತಿ ಸಂಯೋಜಕಿ ಲತಾ ತರಬೇತಿ ನೀಡಿದರು.

ಹಿರಿಯ ಪರಿಸರ ಅಧಿಕಾರಿ ಎಸ್.ವೆಂಕಟೇಶ ಶೇಖರ್ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಪರಿಸರ ಅಧಿಕಾರಿ ಪ್ರದೀಪ ಮಮದಾಪುರ, ಡಾ.ಆದಮ್ ಪಟೇಲ್, ಖಾಲೀದ ಖಾಜಿ, ಅರವಿಂದ ಮಾಲಗಾವಿ, ವೇದಪ್ರಕಾಶ ಕುಲಕರ್ಣಿ, ರಾಜಕುಮಾರ ಬೀಲ್ಕರ್, ಅಮೃತ ನನ್ನವರೆ, ಶಾಂತವಾಡ ಜಾರಡ್ಡಿ ಇದ್ದರು.

ತನುಷಾ ನಿರೂಪಿಸಿ, ಕಾವ್ಯ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.