ADVERTISEMENT

ಬಾಬಾ ರಾಮದೇವ್ ಹೇಳಿಕೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 10:41 IST
Last Updated 9 ಜೂನ್ 2021, 10:41 IST
ಬಾಬಾ ರಾಮದೇವ, ಪ್ರಜಾವಾಣಿ ಚಿತ್ರ
ಬಾಬಾ ರಾಮದೇವ, ಪ್ರಜಾವಾಣಿ ಚಿತ್ರ   

ವಿಜಯಪುರ: ಆಧುನಿಕ ವೈದ್ಯಕೀಯ ವಿಜ್ಞಾನ ಪದ್ಧತಿ ವಿರುದ್ಧ ಬಾಬಾ ರಾಮದೇವ್ ಅವರ ಅವೈಜ್ಞಾನಿಕ ಮತ್ತು ಮೂಢನಂಬಿಕೆಯಿಂದ ಕೂಡಿದ ಹೇಳಿಕೆಗಳನ್ನು ಖಂಡಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿಗಳ ಒಕ್ಕೂಟ(ಎಐಡಿಎಸ್‍ಓ)ದಿಂದ ಬುಧವಾರ ಆನ್‌ಲೈನ್‌ ಪ್ರತಿಭಟನೆ ನಡೆಸಲಾಯಿತು.

ರಾಮ್‍ದೇವ್ ಬಾಬಾ ಅವರ ಅವೈಜ್ಞಾನಿಕ, ಮೂಢನಂಬಿಕೆಯಿಂದ ಕೂಡಿದ ಸುಳ್ಳು ಹೇಳಿಕೆಗಳನ್ನು ಖಂಡಿಸಿ, ಈ ಕೂಡಲೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಐಡಿಎಸ್‍ಓ ವಿದ್ಯಾರ್ಥಿ ಸಂಘಟನೆ ಮುಖಂಡರು ಒತ್ತಾಯಿಸಿದರು.

ಸರ್ಕಾರದ ಸಹಕಾರದಿಂದ ಕೋವಿಡ್-19 ಚಿಕಿತ್ಸೆಗೆ ಸಂಬಂಧಿಸಿದಂತೆ ಅನೇಕ ಅವೈಜ್ಞಾನಿಕ ಔಷಧಗಳು ಪ‍್ರಚಾರ ಪಡೆಯಲು ಕಾರಣವಾಗಿದೆ. ಕೋವಿಡ್ ಯೋಧರು ಹಗಲು ರಾತ್ರಿಯನ್ನದೇ ಧಣಿವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಈ ಕಷ್ಟಕರ ಸಾಂಕ್ರಾಮಿಕ ಕಾಲದಲ್ಲಿ ಇಂತಹ ಅವೈಜ್ಞಾನಿಕ ಹೇಳಿಕೆಗಳು ಆಧುನಿಕ ಔಷಧ ಪದ್ದತಿ, ವೈದ್ಯರ ಬಗ್ಗೆ ಅವಹೇಳನಕಾರಿಯಲ್ಲದೇ ಬೇರೆನೂ ಅಲ್ಲ ಎಂದು ದೂರಿದರು.

ADVERTISEMENT

ಕೋವಿಡ್ ವೈಜ್ಞಾನಿಕ ಚಿಕಿತ್ಸೆಗೆ ಇಂತಹ ಬೆಳವಣಿಗೆಗಳು ಹಾನಿಕಾರಕ. ಸಾಮಾನ್ಯ ಪ್ರಜ್ಞೆ ಇರುವ ಜನರು ಮತ್ತು ಆರೋಗ್ಯ ಕಾರ್ಯಕರ್ತರು ಇಂತಹ ಬೆಳವಣಿಗೆಗಳ ಬಗ್ಗೆ ಚಿಂತಿತರಾಗಿದ್ದಾರೆ. ರಾಮ್‍ದೇವ್ ಅವರ ಹಿಂದೆ ಸರ್ಕಾರವೇ ಪರೋಕ್ಷವಾಗಿ ಬೆಂಬಲಕ್ಕೆ ನಿಂತಿದೆ ಮತ್ತು ಆದ್ದರಿಂದಲೇ ಅವರ ವಿರುದ್ಧ ಈವರೆಗೆ ಯಾವುದೇ ಕಠಿಣ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಿದರು.

ಇತ್ತೀಚಿನ ದಿನಗಳಲ್ಲಿ ಅಸ್ಸಾಂ, ಕರ್ನಾಟಕ ಮತ್ತು ಇತರ ರಾಜ್ಯಗಳಲ್ಲಿಯೂ ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ಮತ್ತು ಕಿರುಕುಳ ನಡೆಯುತ್ತಿರುವುದು ಖಂಡನೀಯ. ಈ ದಾಳಿಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಭದ್ರತೆಯನ್ನು ಸರ್ಕಾರ ಖಾತ್ರಿಪಡಿಸಬೇಕು ಎಂದು ಆಗ್ರಹಿಸಿದರು.

ಎಐಡಿಎಸ್‍ಓ ಜಿಲ್ಲಾ ಕಾರ್ಯದರ್ಶಿ ಸುರೇಖಾ ಕಡಪಟ್ಟಿ, ಉಪಾಧ್ಯಕ್ಷೆ ಕಾವೇರಿ ರಜಪೂತ ಮತ್ತು ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಹೋರಾಟದಲ್ಲಿ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.