ADVERTISEMENT

ಮಸ್ಲಿಂ ಸಂಘಟನೆಗಳಿಂದ ಮೆರವಣಿಗೆ

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2019, 10:26 IST
Last Updated 17 ಡಿಸೆಂಬರ್ 2019, 10:26 IST
ವಿಜಯಪುರದಲ್ಲಿ ಮುಸ್ಲಿಂ ಮುತ್ತಹೀದಾ ಕೌನ್ಸಿಲ್ ನೇತೃತ್ವದಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳು ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಮುಸ್ಲಿಂ ಧರ್ಮಗುರು ಸೈಯ್ಯದ್ ತನ್ವೀರ್‌ಪೀರಾ ಹಾಶ್ಮಿ ಮಾತನಾಡಿದರು
ವಿಜಯಪುರದಲ್ಲಿ ಮುಸ್ಲಿಂ ಮುತ್ತಹೀದಾ ಕೌನ್ಸಿಲ್ ನೇತೃತ್ವದಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳು ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಮುಸ್ಲಿಂ ಧರ್ಮಗುರು ಸೈಯ್ಯದ್ ತನ್ವೀರ್‌ಪೀರಾ ಹಾಶ್ಮಿ ಮಾತನಾಡಿದರು   

ವಿಜಯಪುರ: ಪೌರತ್ವ ತಿದ್ದುಪಡಿ ಮಸೂದೆ–2019 ವಾಪಸಹ ಪಡೆಯುವಂತೆ ಆಗ್ರಹಿಸಿ ಮುಸ್ಲಿಂ ಮುತ್ತಹೀದಾ ಕೌನ್ಸಿಲ್ ನೇತೃತ್ವದಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳ ವತಿಯಿಂದ ಮಂಗಳವಾರ ನಗರದಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಇಲ್ಲಿಯ ಜಾಮೀಯಾ ಮಸೀದಿಯಿಂದ ಆರಂಭಗೊಂಡ ಮೆರವಣಿಗೆಯು ವಿವಿಧ ಮಾರ್ಗಗಳ ಮೂಲಕ ಸಾಗಿ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದ ಬಳಿ ಸಭೆಯಾಗಿ ಮಾರ್ಪಟ್ಟಿತು. ಮೆರವಣಿಗೆಯುದ್ದಕ್ಕೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ಪೌರತ್ವ ತಿದ್ದುಪಡೆ ಮಸೂದೆ ವಾಪಸು ಪಡೆಯಬೇಕು ಎಂಬ ಫಲಕಗಳನ್ನು ಪ್ರದರ್ಶಿಸಿದರು.

ನೇತೃತ್ವ ವಹಿಸಿದ್ದ ಮುಸ್ಲಿಂ ಧರ್ಮಗುರು ಸೈಯ್ಯದ್ ತನ್ವೀರ್‌ಪೀರಾ ಹಾಶ್ಮಿ ಮಾತನಾಡಿ, ‘ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಮಸೂದೆಯು ದೇಶದ ಪವಿತ್ರ ಸಂವಿಧಾನದ ಆಶಯವನ್ನು ಸಂಪೂರ್ಣವಾಗಿ ಗಾಳಿಗೆ ತೂರಿದೆ. ಧರ್ಮಾಧಾರಿತವಾಗಿ ಪೌರತ್ವ ನೀಡಲು ನಮ್ಮ ಸಂವಿಧಾನ ಅವಕಾಶವಿಲ್ಲ. ಜಾತ್ಯತೀಯ ನೆಲೆಗಟ್ಟಿನಲ್ಲಿ ಎಲ್ಲ ಅಂಶಗಳನ್ನು ದಾಖಲು ಮಾಡಲಾಗಿದ್ದು, ಅಷ್ಟೊಂದು ಶ್ರೇಷ್ಠ ರೀತಿಯಲ್ಲಿ ಅಂಬೇಡ್ಕರ್‌ ಸಂವಿಧಾನವನ್ನು ರೂಪಿಸಿದ್ದಾರೆ. ಆದರೆ, ಸದ್ಯ ಅದನ್ನು ಹಾಳು ಮಾಡುವ ಕೆಲಸ ನಡೆಯುತ್ತಿದೆ’ ಎಂದು ದೂರಿದರು.

ADVERTISEMENT

‘ಭಾರತೀಯ ಮುಸ್ಲಿಂರಿಗೆ ಪದೇಪದೇ ದೇಶಭಕ್ತಿ ಹಾಗೂ ಮುಸ್ಲಿಮರು ಈ ದೇಶದ ನಿವಾಸಿಗಳು ಎಂಬುದನ್ನು ಸಾಬೀತು ಪಡಿಸುವ ರೀತಿಯಲ್ಲಿ ಒತ್ತಡ ಹೇರಲಾಗುತ್ತಿದೆ. ಭಾರತೀಯ ಮುಸ್ಲಿಮರು ಈ ಪವಿತ್ರ ನೆಲವನ್ನೇ ತಮ್ಮ ಜನ್ಮಭೂಮಿ, ಕರ್ಮಭೂಮಿಯನ್ನಾಗಿಸಿಕೊಂಡು ಬದುಕುತ್ತಿದ್ದಾರೆ. ಅಪಾರ ದೇಶಭಕ್ತಿ ನಮ್ಮಲ್ಲೂ ಇದೆ. ನಾವು ಇದೇ ದೇಶದಲ್ಲಿ ಜೀವಿಸುತ್ತಿದ್ದೇವೆ. ಇದೇ ಭೂಮಿಯಲ್ಲಿ ಮಣ್ಣಾಗುತ್ತೇವೆ. ಇದು ನಮ್ಮ ಪವಿತ್ರ ಭೂಮಿ, ಈ ಭೂಮಿಯಿಂದ ನಮ್ಮನ್ನು ಹೊರಹಾಕುವ ಶಕ್ತಿ ಯಾರಪ್ಪನಿಗೂ ಇಲ್ಲ’ ಎಂದು ಆಕ್ರೋಶ ಭರಿತವಾಗಿ ನುಡಿದರು.

ಮೌಲಾನಾ ಮೆಹಬೂಬ್ಉರ್ ರೆಹಮಾನ್ ಮದನಿ, ಮೌಲಾನಾ ಶಾಕೀರ್‌, ಪ್ರೊ.ಅಸ್ಲಂ ಮುಜಾವರ, ಮೊಹ್ಮದ್ ರಫೀಕ್ ಟಪಾಲ್, ಎಂ.ಸಿ.ಮುಲ್ಲಾ, ಮೆಹಬೂಬ್ ಖಾದ್ರಿ ಮುಶ್ರೀಫ್, ಅಕ್ರಂ ಮಾಶ್ಯಾಳಕರ, ಎಲ್.ಎಲ್.ಉಸ್ತಾದ್‌, ಅಬ್ದುಲ್ ರಜಾಕ್ ಹೊರ್ತಿ, ಸಜ್ಜಾದೆಪೀರಾ ಮುಶ್ರೀಫ್, ಯೂಸೂಫ್ ಖಾಜಿ, ಅಡಿವೆಪ್ಪ ಸಾಲಗಲ್ಲ, ಜೀತೇಂದ್ರ ಕಾಂಬಳೆ, ಭೀಮಶಿ ಕಲಾದಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.