
ವಿಜಯಪುರ: ‘ಎಂ.ಬಿ.ಪಾಟೀಲರೇ ಜಲಸಂಪನ್ಮೂಲ ಸಚಿವರಾಗಿ ಗಳಿಸಿರುವ ಹೆಸರನ್ನು ವಿಜಯಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ವಿಷಯದಲ್ಲಿ ಜಿಲ್ಲೆಗೆ ಅನ್ಯಾಯ ಮಾಡಿ ಕಳೆದುಕೊಳ್ಳಬೇಡಿ’ ಎಂದು ಸಮಾಜವಾದಿ ಮುಖಂಡ ಸಿದ್ದನಗೌಡ ಪಾಟೀಲ ಮನವಿ ಮಾಡಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿಯಲ್ಲಿ ಶುಕ್ರವಾರ ಪಾಲ್ಗೊಂಡು, ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
‘ಸಚಿವ ಎಂ.ಬಿ. ಪಾಟೀಲರೇ ನೀವು ಕೈಗಾರಿಕಾ ಸಚಿವರಾಗಿ ಕಾರ್ಯನಿರ್ವಹಿಸಿ. ಆದರೆ, ಕೈಗಾರಿಕೋದ್ಯಮಿಗಳ ಮಂತ್ರಿ ಆಗಬೇಡಿ, ನೀವು ಬಂಡವಾಳಶಾಹಿಗಳ ಗುಲಾಮರಾಗಬೇಡಿ’ ಎಂದು ಹೇಳಿದರು.
‘ಜಿಲ್ಲೆಯ ರಾಜಕಾರಣಿಗಳ ಒಳ ಒಪ್ಪಂದದಿಂದ ಸರ್ಕಾರಿ ಆಸ್ಪತ್ರೆ ಕಳೆದುಕೊಳ್ಳುವ ಸಂಭವ ಎದುರಾಗಿದೆ. ಈ ಹೋರಾಟವು ಜಿಲ್ಲೆಯ ಸಚಿವರು, ಶಾಸಕರಿಗೆ ರಾಜಕೀಯವಾಗಿ ಪೆಟ್ಟು ಕೊಡುವ ರೀತಿ ಜಿಲ್ಲೆಯಾದ್ಯಂತ ಹೋರಾಟ ಸಂಘಟಿಸುವ ಅಗತ್ಯವಿದೆ’ ಎಂದರು.
‘ಈ ಹೋರಾಟ ಯಾವುದೇ ರಾಜಕಾರಣಿಗಳ ವಿರುದ್ಧವಲ್ಲ. ಜಿಲ್ಲೆಯ ಸಚಿವರು, ಶಾಸಕರು ಆಸ್ಪತ್ರೆ ಕೊಳ್ಳಲು ಹುನ್ನಾರ ಮಾಡುತ್ತಿದ್ದಾರೆ ಎಂಬ ಭಾವನೆ ಜಿಲ್ಲೆಯ ಜನರ ಮನದಲ್ಲಿ ಮನೆ ಮಾಡಿದೆ. ಕೂಡಲೇ ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ ಮಾಡಬೇಕು’ ಎಂದು ಆಗ್ರಹಿಸಿದರು.
‘ಅಧಿವೇಶನ ಮುಗಿದ ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಎಂ.ಬಿ. ಪಾಟೀಲರಿಗೆ ಭೇಟಿ ಆಗಿ ಮತ್ತೊಮ್ಮೆ ಮನವಿ ಮಾಡುತ್ತೇವೆ’ ಎಂದು ತಿಳಿಸಿದರು.
‘ಸರ್ಕಾರಿ ಜಿಲ್ಲಾ ಆಸ್ಪತ್ರೆಯನ್ನು ಬಂಡವಾಳ ಶಾಹಿಗಳ ಕಪಿಮುಷ್ಠಿಗೆ ಹೋಗಲು ಹೋರಾಟಗಾರರು ಬಿಡುವುದಿಲ್ಲ’ ಎಂದರು.
‘ಹೋರಾಟಗಾರರು ಪೇಮೆಂಟ್ ಗಿರಾಕಿಗಳು’ ಎಂಬ ಶಾಸಕ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಹೋರಾಟದ ದಿಕ್ಕು ತಪ್ಪಿಸಲು ಆಡಿರುವ ಅಡ್ಡಾದಿಡ್ಡಿ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬಾರದು, ಹುಚ್ಚರ ಮಾತಿಗೆ ಹ್ಹೂ.. ಎನ್ನುವುದು ಒಳಿತು’ ಎಂದರು.
ಹಂಪಿ ವಿವಿಯ ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ ಮಾತನಾಡಿ, ‘ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ಸುದೀರ್ಘ ಹೋರಾಟ ನಡೆಯುತ್ತಿದ್ದರೂ ಸರ್ಕಾರ ಇದುವರೆಗೂ ಸ್ಪಂದಿಸದೇ ಇರುವುದು ನಾಚಿಕೆಗೇಡಿನ ಸಂಗತಿ’ ಎಂದರು.
ಹಿರಿಯ ಪತ್ರಕರ್ತ ಸನತ್‌ಕುಮಾರ್ ಬೆಳಗಲಿ ಮಾತನಾಡಿ, ‘ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಬೇಕು ಎಂಬ ಜನರ ಬೇಡಿಕೆಗೆ ಸರ್ಕಾರ ನಕಾರಾತ್ಮಕವಾಗಿ ಸ್ಪಂದನೆ ಮಾಡಿದರೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಸಚಿವರು ಪುನಃ ಶಾಸಕರಾಗಿ ಆಯ್ಕೆ ಆಗುವುದು ಕಷ್ಟವಾಗಲಿದೆ’ ಎಂದು ಎಚ್ಚರಿಕೆ ನೀಡಿದರು.
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ‘ನೂರು ದಿನ ಪೂರೈಸುವುದರೊಳಗೆ ಬೇಡಿಕೆ ಈಡೇರಿಸಬೇಕು’ ಎಂದು ಆಗ್ರಹಿಸಿದರು.
ಧಾರವಾಡದ ವಾಲ್ಮಿಯ ಮಾಜಿ ನಿರ್ದೇಶಕ ರಾಜೇಂದ್ರ ಪೋದ್ದಾರ ಮಾತನಾಡಿ, ‘ಸರ್ಕಾರ ಜನ ವಿರೋಧಿಯಾದರೆ ಜನರ ಮತ ಮತ್ತು ತೆರಿಗೆಗೆ ಏನು ಬೆಲೆಯಿದೆ. ರಾಜಕಾರಣಿಗಳು ಮತ್ತು ಅಧಿಕಾರಿಗಳು ಜನಪರವಾಗಿ ನಿಂತು ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆ ಮಾಡಬೇಕು’ ಎಂದು ಆಗ್ರಹಿಸಿದರು.
ಸಚಿವರ ಮನೆ ಎದುರು ಧರಣಿ:
ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, ‘ಚಳವಳಿ ಇಲ್ಲಿಗೆ ನಿಲ್ಲುವುದಿಲ್ಲ, ನಿರಂತರವಾಗಿರುತ್ತದೆ. ಡಿ.26ಕ್ಕೆ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಮನೆ ಮುಂದೆ ಧರಣಿ ಮಾಡುತ್ತೇವೆ, ಬಳಿಕ ಉಪವಾಸ ಸತ್ಯಾಗ್ರಹ ಆರಂಭಿಸುತ್ತೇವೆ’ ಎಂದರು.
ಹೋರಾಟ ಸಮಿತಿಯ ಸದಸ್ಯರಾದ ಬಿ. ಭಗವಾನ್ ರೆಡ್ಡಿ ಅನಿಲ ಹೊಸಮನಿ, ಲಲಿತಾ ಬಿಜ್ಜರಗಿ, ಬಾಬುರಾವ್ ಬೀರಕಬ್ಬಿ, ಸುರೇಶ ಜೀಬಿ, ವಿನೋದ ಖೇಡ, ಸುರೇಶ ಬಿಜಾಪುರ, ಭರತಕುಮಾರ ಎಚ್.ಟಿ, ವಿ.ಸಿ. ನಾಗಠಾಣ, ಜಂಬುನಾಥ ಕಂಚಾಣಿ, ಶ್ರೀಶೈಲ ಸಜ್ಜನ, ಅಕ್ರಂ ಮಾಶಾಳಕರ, ಮಲ್ಲಿಕಾರ್ಜುನ ಬಟಗಿ, ಮಲ್ಲಿಕಾರ್ಜುನ ಎಚ್. ಟಿ, ವಿ.ಎ. ಪಾಟೀಲ, ಜಗದೇವ ಸೂರ್ಯವಂಶಿ, ಸಿ.ಬಿ. ಪಾಟೀಲ, ಗಿರೀಶ ಕಲಘಟಗಿ, ಲಕ್ಷ್ಮಣ ಕಂಬಾಗಿ, ಗೀತಾ ಎಚ್., ಅಶೋಕ ವಾಲಿಕಾರ, ಸುಶೀಲಾ ಮಿಣಜಗಿ, ಚಂದ್ರಶೇಖರ ಬಗಲಿ, ಸುಭಾಸ ಹೊನ್ನಕಟ್ಟಿ, ಸಲೀಂ ಹೊಕ್ರಾಣಿ, ಸುರೇಶ ಬಿರಾದಾರ, ಜಬೀನ ಅಥಣಿ, ಲಾಯಪ್ಪ ಇಂಗಳೆ, ಪ್ರಕಾಶ ಸಬರದ, ನೀಲಾಂಬಿಕಾ ಬಿರಾದಾರ, ಸುರೇಶ ಪಾಟೀಲ, ಜ್ಯೋತಿ ಮಿಣಜಗಿ, ದಸ್ತಗಿರ ಉಕ್ಕಲಿ, ಪ್ರಕಾಶ ಬಗಲಿ ಉಪಸ್ಥಿತರಿದ್ದರು.
ವಿಜಯಪುರ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಸಕಲ ಸೌಲಭ್ಯ ಇದೆ. ಆದರೂ ಯಾಕೆ ಈ ತಾರತಮ್ಯ ಜಿಲ್ಲೆಗೆ ಏಕೆ ಮೋಸ ಮಾಡುತ್ತಿದ್ದೀರಿ ಸರ್ಕಾರಿ ವೈದ್ಯಕೀಯ ಕಾಲೇಜು ಮಾಡಲು ಸರ್ಕಾರಕ್ಕೆ ಏನು ತೊಂದರೆಸಿದ್ದನಗೌಡ ಪಾಟೀಲ ಸಮಾಜವಾದಿ ಮುಖಂಡ
ವಿಜಯಪುರ ಜಿಲ್ಲೆಯ ಸಚಿವರು ಮತ್ತು ಶಾಸಕರು ಜನರ ಬೇಡಿಕೆ ಬಗ್ಗೆ ಮುಖ್ಯಮಂತ್ರಿಗೆ ಮನವರಿಕೆ ಮಾಡಲು ವಿಫಲರಾಗಿದ್ದಾರೆ. ಇದು ಜಿಲ್ಲೆಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಎದ್ದು ತೋರಿಸುತ್ತದೆ-ಡಾ.ಮಲ್ಲಿಕಾ ಘಂಟಿವಿಶ್ರಾಂತ ಕುಲಪತಿಹಂಪಿ ವಿವಿ
ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ನಡೆಯುತ್ತಿರುವ ಹೋರಾಟಕ್ಕೂ ನಮಗೂ ಸಂಬಂಧವಿಲ್ಲ ಎಂಬಂತೆ ಸಚಿವರು ಶಾಸಕರು ವರ್ತಿಸುತ್ತಿದ್ದಾರೆ. ನಿಮಗೆ ಕಾಲೇಜು ತರಲು ಆಗದಿದ್ದರೆ ಸಾಮೂಹಿಕ ರಾಜೀನಾಮೆ ನೀಡಿ ಹೋರಾಟದಲ್ಲಿ ಪಾಲ್ಗೊಳ್ಳಿಅರವಿಂದ ಕುಲಕರ್ಣಿ ರೈತ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.