ADVERTISEMENT

ಗ್ರಾಮ ಪಂಚಾಯ್ತಿ ನೌಕರರ ಪ್ರತಿಭಟನೆ

ನೇರ ನೇಮಕಾತಿ, ಬಾಕಿ ವೇತನ ಪಾವತಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 13:34 IST
Last Updated 15 ಜುಲೈ 2021, 13:34 IST
ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘದ ವಿಜಯಪುರ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ, ಸಿಇಒ ಗೋವಿಂದ ರೆಡ್ಡಿ, ಉಪ ಕಾರ್ಯದರ್ಶಿ ದೇವರಮನಿ ಅವರಿಗೆ ಮನವಿ ಸಲ್ಲಿಸಿದರು 
ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘದ ವಿಜಯಪುರ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ, ಸಿಇಒ ಗೋವಿಂದ ರೆಡ್ಡಿ, ಉಪ ಕಾರ್ಯದರ್ಶಿ ದೇವರಮನಿ ಅವರಿಗೆ ಮನವಿ ಸಲ್ಲಿಸಿದರು    

ವಿಜಯಪುರ: ಗ್ರಾಮ ಪಂಚಾಯ್ತಿ ಬಿಲ್ ಕಲೆಕ್ಟರ್‌, ಗುಮಾಸ್ತ ಹುದ್ದೆಯಿಂದ ಗ್ರೇಡ್ 2 ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ ನೇರ ನೇಮಕ ಮಾಡಿಕೊಳ್ಳಬೇಕು, 15ನೇ ಹಣಕಾಸು ಯೋಜನೆಯಡಿ ವಾಟರ್‌ಮನ್‌, ಸ್ವೀಪರ್‌ಗಳಿಗೆ ವೇತನ ಪಾವತಿಸುವುದು ಸೇರಿದಂತೆ ವಿವಿಧ ನೌಕರರ ಬೇಡಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘ(ಸಿಐಟಿಯು ಸಂಯೋಜಿತ)ದ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೋವಿಂದ ರೆಡ್ಡಿ, ಜಿ.ಪಂ. ಉಪಕಾರ್ಯದರ್ಶಿ ದೇವರಮನಿ ಅವರಿಗೆ ಈ ಸಂಬಂಧ ಗುರುವಾರ ಮನವಿ ಸಲ್ಲಿಸಿದರು.

ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ಕೋವಿಡ್‌ ಸಂದರ್ಭದಲ್ಲಿ ಕೆಲಸ ನಿರ್ವಹಿಸಿದವರಿಗೆ ಆರ್ಥಿಕ ಸಹಾಯ ನೀಡಬೇಕು. ಇಎಫ್ಎಂಎಸ್‍ಗೆ ಸೇರದೆ ಇರುವ ಉಳಿದ ಸಿಬ್ಬಂದಿಯನ್ನು ತಕ್ಷಣ ಸೇರಿಸಬೇಕು. ವಾಟರ್ ಮನ್‌, ಸಿಪಾಯಿ, ಸ್ವಚ್ಛಗೊಳಿಸುವವರಿಗೆ ಬಡ್ತಿ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ಗ್ರಾಮ ಪಂಚಾಯಿತಿಯು ಬಿಲ್ ಕಲೆಕ್ಟರ್, ಗುಮಾಸ್ತ ಹುದ್ದೆಯಿಂದ ಗ್ರೇಡ್-2 ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ ನೇರ ನೇಮಕಾತಿ ಆದೇಶವನ್ನು ಸರ್ಕಾರ ಹಿಂಪಡೆದಿರುವುದರಿಂದ 20-25 ವರ್ಷಗಳಿಂದ ಸೇವೆ ಮಾಡಿ ನಿವೃತ್ತಿಯ ಅಂಚಿನಲ್ಲಿರುವ ಸಾವಿರಾರು ನೌಕರರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಅಣ್ಣಾರಾಯ ಈಳಗೇರ ಮಾತನಾಡಿ, ಸಿಬ್ಬಂದಿ ಬಡ್ತಿ ವಿಷಯದಲ್ಲಿ ಗ್ರೇಡ್ 2ರಲ್ಲಿ ದ್ವಂದ್ವ ನೀತಿಯನ್ನು ಅನುಸರಿಸುತ್ತಿದ್ದು, ಇದನ್ನು ಕೂಡಲೇ ಸರಿಪಡಿಸಿ ಬಡ್ತಿ ನೀಡಬೇಕು ಎಂದು ಒತ್ತಾಯಿಸಿದರು.

ಎರಡು ವರ್ಷಗಳಿಂದ ಗ್ರಾಮ ಪಂಚಾಯ್ತಿ ಸಿಬ್ಬಂದಿಗಳಿಗೆ ಸರಿಯಾಗಿ ವೇತನ ನೀಡುತ್ತಿಲ್ಲ. ಸರ್ಕಾರ 15ನೇ ಹಣಕಾಸಿನಲ್ಲಿ ವೇತನ ನೀಡುವಂತೆ ಮಾರ್ಗಸೂಚಿ ನೀಡಿದರೂ ಕೂಡ ಆ ಪ್ರಕಾರ ವೇತನ ನೀಡಲಾಗುತ್ತಿಲ್ಲ. ವಸೂಲಿ ಕ್ಲಾರ್ಕ್ ಸಿಬ್ಬಂದಿಗಳಿಗೆ ವೇತನ ನೀಡುವಂತೆ ನಿರ್ದೆಶನ ನೀಡಿದರೂ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಲ್ಲಿಯ ಆಡಳಿತ ಪ್ರತಿನಿಧಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರದ ಆದೇಶವನ್ನು ಕಸದ ಬುಟ್ಟಿಗೆ ಹಾಕಿದ್ದಾರೆ. ಈ ಬಗ್ಗೆ ತಕ್ಷಣವೇ ಜಿಲ್ಲಾ ಪಂಚಾಯ್ತಿ ಸಿಇಒ ಕ್ರಮ ಕೈಗೊಳ್ಳಬೇಕು ಎಂದರು.

ಗ್ರಾಮ ಪಂಚಾಯತಿ ಮಟ್ಟದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುತ್ತಿರುವ ಕೆಲಸಗಳು ಕಾರ್ಮಿಕರಿಂದ ಮಾಡಿದ್ದಾರೆಯೇ ಅಥವಾಯಂತ್ರಗಳಿಂದ ಮಾಡಿಸಿದ್ದಾರೆ ಎಂಬುವುದನ್ನು ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.

ಒಬ್ಬ ಪಿಡಿಓಗೆ ಎರಡು ಪಂಚಾಯ್ತಿಗೆ ಜವಾಬ್ದಾರಿ ನೀಡಿದ್ದು, ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಅವ್ಯವಹಾರ ಮಾಡಿದ ಪಿಡಿಓಗಳ ವಿರುದ್ಧ ಕ್ರಮ ತೆಗೆದುಕೊಂಡರೆ ಅಭಿವೃದ್ಧಿ ಕೆಲಸ ಕುಂಠಿತಗೊಳ್ಳುವುದು ಎಂದು ಅವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳುತ್ತಿದ್ದು, ಇದನ್ನು ಸರಿಪಡಿಸಬೇಕು ಎಂದರು.

ಮನವಿ ಸ್ವೀಕರಿಸಿದ ಸಿಇಒ ಹಾಗೂ ಸಹಾಯಕ ಕಾರ್ಯದರ್ಶಿ ಅವರು, ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು.

ವಿಠ್ಠಲ ಹೊನಮೋರೆ,ಎಂ.ಕೆ.ಚಳ್ಳಗಿ, ಎಂ.ಎಸ್.ಕೊಂಡಗೂಳಿ, ಶ್ರೀಶೈಲ ಬಾವಿ, ಅಬ್ದುಲ್ ರಜಾಕ್‌ ತಮದಡ್ಡಿ, ಸಂಗಪ್ಪ ಸೀತಿಮನಿ, ಚಂದ್ರಶೇಖರ ವಾಲಿಕಾರ, ಶೇಖು ಲಮಾಣಿ, ಬಸವರಾಜ ಹುಬ್ಬಳ್ಳಿ, ಶೇಖರ ಪವಾರ ಗೊಳಸಂಗಿ, ಎಂ.ಎಸ್.ಶೇಖರಣಿ, ಅಯ್ಯನಗೌಡ ಬಾಗೇವಾಡಿ, ಚಂದ್ರಶೇಖರ ವಾಲೀಕಾರ, ನಾರಾಯಣ ಬಡಿಗೇರ, ಎಂ.ಕೆ.ಚಳ್ಳಗಿ,ಶಿವಾನಂದ ಬಿರಾದಾರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

***

ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳಲ್ಲಿ ಯಾವುದೇ ರೀತಿಯ ಅವ್ಯವಹಾರ ಆಗದಂತೆ ತಡೆಯಬೇಕು

ಅಣ್ಣಾರಾಯ ಈಳಗೇರ

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.