ADVERTISEMENT

ಕರ್ತವ್ಯಲೋಪ; ಪಿಎಸ್‌ಐ, ಎಎಸ್‌ಐ ಅಮಾನತು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 9:49 IST
Last Updated 27 ಸೆಪ್ಟೆಂಬರ್ 2019, 9:49 IST

ಸಿಂದಗಿ: ‘ತಾಲ್ಲೂಕಿನ ಅಸಂತಾಪುರ ಗ್ರಾಮದಲ್ಲಿ ಬಾಲಕಿಯ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದ್ದು, ಕರ್ತವ್ಯಲೋಪದಡಿ ಸಬ್‌ ಇನ್‌ಸ್ಪೆಕ್ಟರ್ ಮತ್ತು ಸಹಾಯಕ ಸಬ್‌ ಇನ್‌ಸ್ಪೆಕ್ಟರ್ ಅವರನ್ನು ಅಮಾನತುಗೊಳಿಸಲಾಗಿದೆ’ ಎಂದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ ಹೇಳಿದರು.

‘ಜುಲೈ 22 ರಂದು ಹೊಸಪೇಟೆಗೆ ಹೋಗಿ ಬರುವುದಾಗಿ ಹೇಳಿದ ತಮ್ಮ ಮಗಳು ಮರಳಿ ಮನೆಗೆ ಬಾರದ್ದರಿಂದ ನೊಂದ ತಾಯಿ ಭೀಮಾಬಾಯಿ ಸೆ.14 ರಂದು ಕಲಕೇರಿ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದರು. ದೂರು ಸ್ವೀಕರಿಸಲು ನಿರ್ಲಕ್ಷ್ಯ ವಹಿಸಿದ ಕಾರಣ ಪಿಎಸ್‌ಐ ವಿನೋದ ಪೂಜಾರಿ ಹಾಗೂ ಎಎಸ್‌ಐ ಎಸ್‌.ಬಿ.ಆಸಂಗಿ ಅವರನ್ನು ಅಮಾನತು ಮಾಡಲಾಗಿದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ತಮ್ಮ ಮಗಳಿಗೆ ಗ್ರಾಮದ ಮಡಿವಾಳಪ್ಪ ಬಡಿಗೇರ ಸೇರಿದಂತೆ ಆರು ಜನರು ಜೀವ ಬೆದರಿಕೆವೊಡ್ಡಿ, ಅಪಹರಣ ಮಾಡಿ ಕೊಲೆ ಮಾಡಿದ್ದಾರೆ. ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಭೀಮಾಬಾಯಿ ಅವರು ಸೆ.19ರಂದು ಕಲಕೇರಿ ಪೊಲೀಸ್‌ ಠಾಣೆಯಲ್ಲಿ ಮತ್ತೆ ದೂರು ನೀಡಿದರು. ಈ ಹಿನ್ನೆಲೆಯಲ್ಲಿ ಮಡಿವಾಳಪ್ಪ ಬಡಿಗೇರನನ್ನು ಬಂಧಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಆಗಸ್ಟ್‌ 1ರಂದು ತಾಲ್ಲೂಕಿನ ಮೋರಟಗಿ ಕಾಲುವೆ ಬಳಿ ಬಾಲಕಿಯೊಬ್ಬಳ ಶವ ಪತ್ತೆಯಾಗಿದ್ದು, ಅದು ತಮ್ಮ ಮಗಳದ್ದೇ ಎಂದು ಪೋಷಕರು ಒಪ್ಪಿಕೊಂಡಿದ್ದಾರೆ. ಡಿಎನ್‌ಎ ಪರೀಕ್ಷೆ ಮಾಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.