ADVERTISEMENT

ರೈಲ್ವೆ ಸಬ್‌ವೇ ನಿರ್ಮಾಣ ಕಾಮಗಾರಿ ಆರಂಭ

​ಪ್ರಜಾವಾಣಿ ವಾರ್ತೆ
Published 20 ಮೇ 2021, 14:23 IST
Last Updated 20 ಮೇ 2021, 14:23 IST
ವಿಜಯಪುರ ಜಿಲ್ಲೆಯ ಮಿಂಚನಾಳ ನಿಲ್ದಾಣದ ಬಳಿ ಲೆವೆಲ್‌ ಕ್ರಾಸಿಂಗ್‌ ಗೇಟ್‌ ಬಳಿ ನಡೆಯುತ್ತಿರುವ ಸಬ್‌ವೇ ನಿರ್ಮಾಣ ಕಾಮಗಾರಿ
ವಿಜಯಪುರ ಜಿಲ್ಲೆಯ ಮಿಂಚನಾಳ ನಿಲ್ದಾಣದ ಬಳಿ ಲೆವೆಲ್‌ ಕ್ರಾಸಿಂಗ್‌ ಗೇಟ್‌ ಬಳಿ ನಡೆಯುತ್ತಿರುವ ಸಬ್‌ವೇ ನಿರ್ಮಾಣ ಕಾಮಗಾರಿ   

ವಿಜಯಪುರ: ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದಿಂದ ವಿಜಯಪುರ ಜಿಲ್ಲೆಯಲ್ಲಿ ಮೂರು ಸೀಮಿತ ಎತ್ತರದ ಕೆಳಸೇತುವೆ (ಸಬ್‌ವೇ) ನಿರ್ಮಾಣ ಕಾಮಗಾರಿ ಆರಂಭವಾಗಿದೆ.

ಮಿಂಚನಾಳ ನಿಲ್ದಾಣದ ಬಳಿಯಿರುವ ಲೆವೆಲ್‌ ಕ್ರಾಸಿಂಗ್‌ ಗೇಟ್‌ ಸಂಖ್ಯೆ 92, ನಿಂಬಾಳ ಭಾಗದಲ್ಲಿ ಬರುವ ಲೆವೆಲ್‌ ಕ್ರಾಸಿಂಗ್‌ ಗೇಟ್‌ ಸಂಖ್ಯೆ 96 ಮತ್ತು 98ರ ಬದಲಿಗೆ ಈ ಸಬ್‌ವೇಗಳನ್ನು ನಿರ್ಮಿಸಲಾಗುತ್ತಿದೆ.

ಹುಬ್ಬಳ್ಳಿ ವಿಭಾಗೀಯ ಎಂಜಿನಿಯರ್‌ ವಿನಾಯಕ ಪಡಲ್ಕರ್‌ ಮತ್ತು ವಿಜಯಪುರದ ಸಹಾಯಕ ವಿಭಾಗೀಯ ಎಂಜಿನಿಯರ್‌ ಸಾವನ್‌ ಕುಮಾರ್‌ ಮಿಶ್ರಾ ಅವರ ನೇತೃತ್ವದಲ್ಲಿ ಈ ಮೂರು ಲೆವೆಲ್‌ ಕ್ರಾಸಿಂಗ್ ಗೇಟ್‌ಗಳ ಬಳಿ ಆರ್‌.ಸಿ.ಸಿ. ಬಾಕ್ಸ್‌ಗಳನ್ನು ಇತ್ತೀಚೆಗೆ ಯಶಸ್ವಿಯಾಗಿ ಅಳವಡಿಸಲಾಯಿತು.

ADVERTISEMENT

ಆರ್‌.ಸಿ.ಸಿ. ಬಾಕ್ಸ್‌ಗಳನ್ನು ಅಚ್ಚುಹಾಕಿ 3 ರಿಂದ 4 ಗಂಟೆಗಳ ಅವಧಿಯ ರೈಲು ಸಂಚಾರ ತಡೆಹಿಡಿದು ಆರ್‌.ಸಿ.ಸಿ. ಬಾಕ್ಸ್‌ಗಳನ್ನು ರೈಲ್ವೆ ಹಳಿಗಳ ಕೆಳಗೆ ಅಳವಡಿಸಲಾಗಿದೆ.

26 ಮೀಟರ್‌ ಉದ್ದವಿರುವ 2 ರಿಸ್ಟ್ರಿಕ್ಟೆಡ್‌ ಹೈಟ್‌ ಗರ್ಡರ್‌ಗಳು, 300 ಟನ್‌ ಸಾಮರ್ಥ್ಯದ 3 ಕ್ರೇನ್‌ಗಳು ಮತ್ತು ಇತರ ನಿರ್ಮಾಣ ಸಂಬಂಧಿತ ಯಂತ್ರಗಳನ್ನು ಬಳಸಿ ಈ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ.

ಈ ಮೂರು ಗೇಟ್‌ಗಳಲ್ಲಿ ಆರ್‌.ಸಿ.ಸಿ. ಬಾಕ್ಸ್‌ಗಳ ಅಳವಡಿಕೆ ಪೂರ್ಣಗೊಂಡಿದ್ದು, ಸಂಪರ್ಕ (ಅಪ್ರೋಚ್‌) ರಸ್ತೆ ಮತ್ತು ತಡೆಗೋಡೆ (ವಿಂಗ್‌ವಾಲ್‌) ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ ಮಾಲಖೇಡೆ ಅವರುಸೀಮಿತ ಎತ್ತರದ ಸಬ್‌ವೇಗಳ ನಿರ್ಮಾಣಕ್ಕಾಗಿ ಬಾಕ್ಸ್‌ಗಳ ಅಳವಡಿಕೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರೈಲುಗಳ ಕಾರ್ಯಾಚರಣೆಯಲ್ಲಿ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ವಾಹನ ಸವಾರರಿಗೆ ಅಡಚಣೆ ರಹಿತ ಸಂಚಾರವನ್ನು ಸಾಧ್ಯವಾಗಿಸಲು ರೈಲ್ವೆಯು ರಸ್ತೆ ಮೇಲ್ಸೇತುವೆ, ರಸ್ತೆ ಕೆಳಸೇತುವೆ ಮತ್ತು ಸೀಮಿತ ಎತ್ತರದ ಸಬ್‌ವೇಗಳನ್ನು ನಿರ್ಮಿಸುವ ಮೂಲಕ ಲೆವೆಲ್‌ ಕ್ರಾಸಿಂಗ್‌ ಗೇಟ್‌ಗಳನ್ನು ತೆಗೆದುಹಾಕುತ್ತಿದೆ ಎಂದರು.

ಈ ಮೂರು ಸಬ್‌ವೇಗಳ ಕಾರ್ಯ ಆಗಸ್ಟ್‌ಗೆ ಪೂರ್ಣಗೊಳ್ಳುವ ಸಾಧ್ಯತೆಯಿದ್ದು, ಸಬ್‌ವೇ ನಿರ್ಮಾಣದ ಬಳಿಕ ಈ ಲೆವೆಲ್‌ ಕ್ರಾಸಿಂಗ್‌ ಗೇಟ್‌ಗಳನ್ನು ಶಾಶ್ವತವಾಗಿ ತೆಗೆದುಹಾಕಲಾಗುವುದು. ಈ ಸೀಮಿತ ಎತ್ತರದ ಸಬ್‌ವೇಗಳನ್ನು ಅಂದಾಜು ರೂ. 9 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.