ADVERTISEMENT

ಅತಿವೃಷ್ಟಿ: ಎಕರೆಗೆ ₹50 ಸಾವಿರ ಪರಿಹಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 6:55 IST
Last Updated 19 ಅಕ್ಟೋಬರ್ 2025, 6:55 IST
ಬಬಲೇಶ್ವರ ತಹಶೀಲ್ದಾರ್‌ಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮನವಿ ಸಲ್ಲಿಸಲಾಯಿತು
ಬಬಲೇಶ್ವರ ತಹಶೀಲ್ದಾರ್‌ಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮನವಿ ಸಲ್ಲಿಸಲಾಯಿತು   

ಬಬಲೇಶ್ವರ: ಜಂಟಿ ಸಮೀಕ್ಷೆ ನೆಪದಲ್ಲಿ ಯಾವುದೇ ಸಮಯವನ್ನು ಹಾಳು ಮಾಡದೆ ತಾಲ್ಲೂಕಿನ ಪ್ರತಿಯೊಂದು ಗ್ರಾಮದ ಪ್ರತಿಯೊಬ್ಬ ರೈತರಿಗೂ ಒಣ ಬೇಸಾಯಕ್ಕೆ ₹50 ಸಾವಿರ ಹಾಗೂ ನೀರಾವರಿ ಭೂಮಿಗೆ ₹1 ಲಕ್ಷ ಹಾಗೂ ಬಹು ವಾರ್ಷಿಕ ಬೆಳೆಗಳಿಗೆ ₹ 2 ಲಕ್ಷ ಪರಿಹಾರವನ್ನು ಕೊಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಸಗರ ಅಗ್ರಹಿಸಿದರು.

ಬಬಲೇಶ್ವರದಲ್ಲಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

ವಿಪರೀತ ಮಳೆಯಿಂದಾಗಿ ತಾಲ್ಲೂಕಿನ ಕೃಷಿ ಬೆಳೆಗಳಾದ ತೊಗರಿ, ಹತ್ತಿ, ಮೆಕ್ಕೆಜೋಳ, ಸಜ್ಜಿ ಸೇರಿದಂತೆ ಸಮಸ್ತ ಬೆಳೆಗಳು ಹಾಳಾಗಿವೆ ದ್ರಾಕ್ಷಿ, ದಾಳಿಂಬ್ರಿ, ಲಿಂಬೆ, ಬಾಳೆ ಸೇರಿದಂತೆ ಎಲ್ಲ ಬೆಳೆಗಳಲ್ಲಿ ನೀರು ನಿಂತು ಹಾಳಾಗಿವೆ.  ಯಾವುದೇ ಜಂಟಿ ಸಮೀಕ್ಷೆ ವೈಮಾನಿಕ ಸಮೀಕ್ಷೆ ಎಂದು ನೆಪ ಹೇಳದೆ 15 ದಿನದ ಒಳಗಾಗಿ ಜಿಲ್ಲೆಯ ಎಲ್ಲರಿಗೂ ಪರಿಹಾರ ಬರಲೇಬೇಕೆಂದು ಒತ್ತಾಯ ಮಾಡಲಾಯಿತು.

ADVERTISEMENT

ಸಮಸ್ತ ಬೆಳೆಗಳು ಕೂಡ ನಷ್ಟಗೊಂಡಿರುವ ಹಿನ್ನೆಲೆಯಲ್ಲಿ ಯಾರಿಗೂ ತಾರತಮ್ಯ ಮಾಡದೆ ಎಲ್ಲರಿಗೂ ನಷ್ಟ ಪರಿಹಾರವನ್ನು ಹಾಕಬೇಕು ಅದೇ ರೀತಿಯಾಗಿ ಫಸಲು ಭೀಮಾ ಯೋಜನೆಯ ವಿಮೇವೂ ಕೂಡ ಆದಷ್ಟು ಬೇಗನೆ ಕೊಡಬೇಕು ಎಂದರು.

ಬಬಲೇಶ್ವರ ತಾಲ್ಲೂಕು ಘಟಕದ ಅಧ್ಯಕ್ಷ ಮಕಬುಲ್ ಕಿಜಿ ಮಾತನಾಡಿ, ಭೀಮೆ, ಕೃಷ್ಣಾ ಹಾಗೂ ದೋಣಿಯ ಪ್ರವಾಹದಿಂದಾಗಿ ಸಾಕಷ್ಟು ರೈತರ ಕೃಷಿ ಭೂಮಿಗಳ ಬೆಳೆಗಳು ಹಾಳಾಗಿರುವ ಜೊತೆಗೆ ಮನೆ ಮಠಗಳು ಕೂಡ ಬಿದ್ದು ಹಲವಾರು ಪ್ರಾಣಿಗಳು ಕೂಡ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಇದಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ನೆಪ ಮಾತ್ರಕ್ಕೆ ಸಮೀಕ್ಷೆ ಮಾಡಿ ಕಣ್ಣಿಗೆ ಕಾಣಬರುವ ಕೆಲವೇ ರೈತರಿಗೆ ನಷ್ಟ ಪರಿಹಾರ ಕೊಡುವುದಾಗಿ ವರದಿ ತಯಾರಿಸಿದ್ದೀರಿ. ಆದರೆ, ತಾಲ್ಲೂಕಿನ ಎಲ್ಲಾ ಹಳ್ಳಿಯ ರೈತರಿಗೆ ಮಳೆಯಿಂದ ನಷ್ಟವಾಗಿದೆ. ಅವರೆಲ್ಲರಿಗೂ ಮತ್ತೊಮೆ ಸಮೀಕ್ಷೆ ಮಾಡಿ ಅವರಿಗೂ ಪರಿಹಾರ ಕೊಡಿ ಎಂದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್‌, ಈಗಾಗಲೇ ಮೊದಲೇ ಹಂತದಲ್ಲಿ ನಷ್ಟಗೊಂಡ ರೈತರಿಗೆ ಪರಿಹಾರಕ್ಕೆ ಗುರುತಿಸಲಾಗಿತ್ತು, ಮತ್ತೆ ಇತ್ತೀಚಿಗೆ ಹೆಚ್ಚಿನ ಮಳೆ ಉಂಟಾಗಿ ಅನೇಕ ರೈತರ ಜಮೀನುಗಳಲ್ಲಿ ನೀರು ನಿಂತು ನಷ್ಟಗೊಂಡಿರುವ ಕುರಿತು ಪ್ರಥಮ ವರದಿಯನ್ನು ಆಯಾ ಗ್ರಾಮ ಪಂಚಾಯಿತಿ ಅಥವಾ ತಲಾಟಿ ಕಚೇರಿ ಮುಂದೆ ಅಂಟಿಸಲಾಗಿದೆ. ಇನ್ನು ಯಾವ ರೈತರು ನಷ್ಟಗೊಂಡು ಉಳಿದಿದ್ದರೆ ಅಂಥವರು ದಾಖಲೆಗಳನ್ನು ಕೊಡುವಂತೆ ತಿಳಿಸಿದರು.

ಜಿಲ್ಲಾ ಸಂಚಾಲಕ ಸಂಗಪ್ಪ ಟಕ್ಕೆ, ತಾಲ್ಲೂಕು ಉಪಾಧ್ಯಕ್ಷ ರಾಜುಗೌಡ ಬಿರಾದಾರ, ಅಪ್ಪಸಾಬ್ ವಾಲಿಕಾರ, ಆರ್. ಬಿ. ಮುಲ್ಲಾ, ಮುಖಂಡರಾದ ಎಂ. ಎ. ಕನ್ನೂರ್, ವಿ. ಎಸ್. ಕೊಡಬಾಗಿ, ರೇಖಾ ಹಿಟ್ನಾಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.