ADVERTISEMENT

ಬೆಳಗಾವಿ ಅಧಿವೇಶನ | ಬಾರುಕೋಲು ಚಳವಳಿ: ಎ.ಎಸ್.ಪಾಟೀಲ ನಡಹಳ್ಳಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 6:06 IST
Last Updated 28 ನವೆಂಬರ್ 2025, 6:06 IST
ಫೋಟೋ:27-ಎಂ.ಬಿ.ಎಲ್‌02 ಮುದ್ದೇಬಿಹಾಳ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ  ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಫೋಟೋ:27-ಎಂ.ಬಿ.ಎಲ್‌02 ಮುದ್ದೇಬಿಹಾಳ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ  ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.   

ಮುದ್ದೇಬಿಹಾಳ: ಅತಿವೃಷ್ಟಿಯಿಂದ ಹಾನಿಯಾದ ರೈತರ ಬೆಳೆಗಳಿಗೆ ಒಣಬೇಸಾಯಕ್ಕೆ ಹೆಕ್ಟೇರ್‌ಗೆ ₹20 ಸಾವಿರ, ತೋಟಗಾರಿಕೆ ಬೆಳೆಗೆ ₹50 ಸಾವಿರ ಪರಿಹಾರ ನೀಡಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಆಗ್ರಹಿಸಿದರು.

ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಹೋರಾಟದಲ್ಲಿ ಮಾತನಾಡಿದರು.

ತೊಗರಿ, ಈರುಳ್ಳಿ, ಮೆಕ್ಕೆಜೋಳ, ಉದ್ದು, ಹೆಸರು ಬೆಳೆದಿರುವ ರೈತರಿಗೆ ಪ್ರೋತ್ಸಾಹಕ ಬೆಲೆಯನ್ನು ಸರ್ಕಾರ ನೀಡಬೇಕು. ಒಣಬೇಸಾಯಕ್ಕೆ ₹30 ಸಾವಿರ ಖರ್ಚು ಬರುತ್ತದೆ. ಆದರೆ, ಸರ್ಕಾರ ಈಗ ಕೊಡುತ್ತಿರುವ ಪರಿಹಾರ ಏನೇನೂ ಅಲ್ಲ ಎಂದು ಹೇಳಿದರು.

ADVERTISEMENT

ಗ್ರಾ.ಪಂ,ಗೆ ಒಂದರಂತೆ ಖರೀದಿ ಕೇಂದ್ರ ತೆಗೆಯಬೇಕು. ಮೆಕ್ಕೆಜೋಳ, ತೊಗರಿಗೆ ಹೆಚ್ಚಿನ ಬೆಲೆ ಹಾಕಿಕೊಡಬೇಕು. ಇದು ಮೊದಲನೇ ಹಂತದ ಹೋರಾಟ. ಇದಕ್ಕೆ ಸ್ಪಂದನೆ ನೀಡದಿದ್ದರೆ ಎರಡನೇ ಹಂತದ ಹೋರಾಟವನ್ನು ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿ ಸರ್ಕಾರಕ್ಕೆ ಬಾರುಕೋಲು ಚಳವಳಿಯ ಚಾಟಿ ಬೀಸುವ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಮುಖಂಡ ಕೆಂಚಪ್ಪ ಬಿರಾದಾರ ಮಾತನಾಡಿ, ಖುರ್ಚಿ ಕಚ್ಚಾಟದಲ್ಲಿ ರೈತರ ಹಿತವನ್ನೇ ಕಾಂಗ್ರೆಸ್ ಸರ್ಕಾರ ಕಡೆಗಣಿಸಿದೆ ಎಂದು ಟೀಕಿಸಿದರು.

ಪುರಸಭೆ ಸದಸ್ಯೆ ಎಸ್.ಎಚ್.ದೇವರಳ್ಳಿ,ಮುಖಂಡ ಗಂಗಾಧರ ನಾಡಗೌಡ,ಭರತಗೌಡ ಪಾಟೀಲ ನಡಹಳ್ಳಿ ಮಾತನಾಡಿದರು.ಪಟ್ಟಣದ ದಾಸೋಹ ನಿಲಯದಿಂದ ಅಂಬೇಡ್ಕರ್ ವೃತ್ತ, ರಾಯಣ್ಣ ವೃತ್ತ,ಬಸವೇಶ್ವರ ವೃತ್ತದ ಮೂಲಕ ತಾಲ್ಲೂಕು ಆಡಳಿತ ಸೌಧಕ್ಕೆ ಪ್ರತಿಭಟನಾಕಾರರು ಆಗಮಿಸಿದರು.ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಗ್ರೇಡ್-2 ತಹಶೀಲ್ದಾರ್ ಜಿ.ಎನ್.ಕಟ್ಟಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಹೋರಾಟದಲ್ಲಿ ಪ್ರಮುಖರಾದ ಎಂ.ಎಸ್.ಪಾಟೀಲ, ಎಂ.ಬಿ.ಅoಗಡಿ,ಮಲಕೇoದ್ರಗೌಡ ಪಾಟೀಲ,ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ,ರಾಜಶೇಖರ ಹೊಳಿ, ಸಂಗಮೇಶ ಹತ್ತಿ, ಎಸ್.ಎಸ್.ಶಿವಣಗಿ,ಭೀಮನಗೌಡ ಕೊಡಗಾನೂರ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.


ಎoಟು ಸಚಿವರು ಕಾಣೆ-ಗಮನ ಸೆಳೆದ ಪೋಸ್ಟರ್: ಬಿಜೆಪಿ ರೈತ ಮೋರ್ಚಾ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕೃಷಿ ಸಂಬಂಧಿ ಇಲಾಖೆಗಳ ಜವಾಬ್ದಾರಿ ವಹಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ, ಸಚಿವರಾದ ಎನ್.ಚಲುವರಾಯಸ್ವಾಮಿ, ಶಿವಾನಂದ ಪಾಟೀಲ, ಮಂಕಾಳ ವೈದ್ಯ, ಎಸ್.ಎಸ್.ಮಲ್ಲಿಕಾರ್ಜುನ, ಎನ್.ಎಸ್.ಬೋಸರಾಜು, ಕೃಷ್ಣ ಭೈರೇಗೌಡ ಅವರ ಚಿತ್ರಗಳ ಮೇಲೆ ‘ಕಾಣೆಯಾಗಿದ್ದಾರೆ ಹುಡುಕಿಕೊಡಿ’ಎಂದು ಬರೆದ ಪೋಸ್ಟರ್‌ಗಳ ಪ್ರದರ್ಶನ ಗಮನ ಸೆಳೆಯಿತು.

ಫೋಟೋ:27-ಎಂ.ಬಿ.ಎಲ್‌02ಎ ಮುದ್ದೇಬಿಹಾಳದಲ್ಲಿ ವಿವಿಧ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.