ವಿಜಯಪುರ: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಶುಕ್ರವಾರ ಧಾರಾಕಾರ ಮಳೆ ಸುರಿಯಿತು. ಇಂಡಿ ತಾಲ್ಲೂಕಿನ ಆಳೂರ ಗ್ರಾಮದಲ್ಲಿತೋಟದ ವಸತಿಯಲ್ಲಿ ಸಿಡಿಲು ಬಡಿದು ಎರಡು ಎತ್ತುಗಳು ಸಾವನಪ್ಪಿವೆ.
ಆಳೂರ ಗ್ರಾಮದ ಬಾಳಪ್ಪ ಸೋಮನಿಂಗ ನಾಟೀಕಾರ ಅವರು ಎತ್ತುಗಳನ್ನು ಮರದ ಕೆಳಗೆ ಕಟ್ಟಿದ್ದರು. ಈ ವೇಳೆ ಸಿಡಿಲು ಬಡಿದಿದೆ. ಮನೆಯ ಸದಸ್ಯರಂತೆ ಜೋಪಾನ ಮಾಡಿದ ಎತ್ತುಗಳು ಸಾವಿಗೀಡಾಗಿದ್ದನ್ನು ಕಂಡು ಮಕ್ಕಳು ಆಕ್ರಂದಿಸಿದರು.
ವಿಜಯಪುರ, ಚಡಚಣ,ಹೊರ್ತಿ, ಸಾವಳಸಂಗ, ಇಂಚಗೇರಿ, ಕನ್ನೂರ, ನಾಲತವಾಡದಲ್ಲಿ ಒಂದು ತಾಸಿಗೂ ಹೆಚ್ಚು ಹೊತ್ತು ಬಿರುಸಿನ ಮಳೆಯಾಗಿದೆ. ಗಾಳಿ, ಗುಡುಗು, ಸಿಡಿಲಿನ ಆರ್ಭಟ ತಗ್ಗಿತ್ತು. ಶುಕ್ರವಾರ ಮಧ್ಯಾಹ್ನ 3ಕ್ಕೆ ಆರಂಭವಾದ ಮಳೆ ರಾತ್ರಿ ವರೆಗೂ ನಿರಂತರವಾಗಿ ಜಿಟಿಜಿಟಿ ಮಳೆ ಸುರಿಯಿತು. ಚರಂಡಿಗಳು ಉಕ್ಕಿ ರಸ್ತೆ ಮೇಲೆ ನೀರು ಹರಿದು ಪರಿಣಾಮ ನಗರದ ಕೆಲವೆಡೆ ವಾಹನ ಸಂಚಾರಕ್ಕೆ ಅಡಚಣೆಯಾಯಿತು.
ಜಿಲ್ಲೆಯಲ್ಲಿ ಒಂದು ವಾರದಿಂದ ಪ್ರತಿದಿನ ಸಂಜೆ ಅಲ್ಲಲ್ಲಿ ಮಳೆಯಾಗುತ್ತಲೇ ಇದೆ. ಬಿಸಿಲಿನಿಂದ ಬಸವಳಿದಿದ್ದ ಪರಿಸರ ಮಳೆಯಿಂದ ತಂಪಾಗಿದೆ. ಈರುಳ್ಳಿ, ಕಲ್ಲಂಗಡಿ ಹಾಗೂ ಒಣದ್ರಾಕ್ಷಿ ಬೆಳೆಗಾರರಿಗೆ ಮಳೆಯಿಂದ ತೊಂದರೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.