ADVERTISEMENT

ಸೌಹಾರ್ದತೆ ಸಾರಿದ ಶಿಕ್ಷಕ; ಕಳೆದ 5 ವರ್ಷಗಳಿಂದ ರಂಜಾನ್ ಮಾಸದಲ್ಲಿ ಉಪವಾಸ ಆಚರಣೆ

ಅಮರನಾಥ ಹಿರೇಮಠ
Published 29 ಮಾರ್ಚ್ 2025, 5:27 IST
Last Updated 29 ಮಾರ್ಚ್ 2025, 5:27 IST
ವಿಜಯಕುಮಾರ ಮದ್ದರಕಿ  
ವಿಜಯಕುಮಾರ ಮದ್ದರಕಿ     

ದೇವರಹಿಪ್ಪರಗಿ: ರಂಜಾನ್ ಮಾಸದಲ್ಲಿ ಮುಸ್ಲಿಮರು ಉಪವಾಸ ವ್ರತಾಚರಣೆ ಮಾಡುವುದು ಸಾಮಾನ್ಯ. ಆದರೆ, ಹಿಂದೂ, ದೈಹಿಕ ಶಿಕ್ಷಕರೊಬ್ಬರು ಸತತ ಐದು ವರ್ಷಗಳಿಂದ ರಂಜಾನ್ ಮಾಸದಲ್ಲಿ ಉಪವಾಸ ವ್ರತಾಚರಣೆ ಕೈಗೊಂಡು ಸೌಹಾರ್ದತೆ ಸಾರುತ್ತಿದ್ದಾರೆ.

ತಾಲ್ಲೂಕಿನ ಆಲಗೂರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ವಿಜಯಕುಮಾರ ಮದ್ದರಕಿ ಅವರು, ರಂಜಾನ್ ಮಾಸದಲ್ಲಿ ಕಠಿಣ ಉಪವಾಸ ಕೈಗೊಂಡು ಸಾರ್ಥಕತೆ ಕಂಡುಕೊಂಡಿದ್ದಾರೆ.

ತಾಳಿಕೋಟಿ ತಾಲ್ಲೂಕಿನ ಸಾಸನೂರ ಗ್ರಾಮದ ಇವರು, 1997ರಲ್ಲಿ ಆಲಗೂರ ಶಾಲೆಗೆ ದೈಹಿಕ ಶಿಕ್ಷಕರಾಗಿ ಸೇವೆ ಆರಂಭಿಸಿ, ಕಳೆದ 27 ವರ್ಷಗಳಿಂದ ನಿರಂತರವಾಗಿ ಇದೇ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ, ಇದೀಗ ಆಲಗೂರ ಗ್ರಾಮದ ಖಾಯಂ ನಿವಾಸಿಯಾಗಿದ್ದಾರೆ.

ADVERTISEMENT

ಈಶ್ವರ, ಅಲ್ಲಾ ಒಂದೇ ಎನ್ನುವ ತಮ್ಮ ಭಾವದ ಮೂಲಕ ಏಕತೆಯ ಅಭಿಪ್ರಾಯ ವ್ಯಕ್ತಪಡಿಸುವ ಇವರ ಮನೆಯಲ್ಲಿ ಪತ್ನಿ ಅನಿತಾ ಕಳೆದ ಮೂರು ವರ್ಷಗಳಿಂದ ಹಾಗೂ ಬೆಂಗಳೂರಿನಲ್ಲಿ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಅಳಿಯ ಅನಿಲ ಸಾಸನೂರ ಕೂಡ ಎಂಟು ವರ್ಷಗಳಿಂದ ರಂಜಾನ್ ಮಾಸದಲ್ಲಿ ಉಪವಾಸ ವ್ರತಾಚರಣೆ ಮಾಡುತ್ತಿದ್ದಾರೆ.

‘ರಂಜಾನ್ ಮಾಸದ ಉಪವಾಸ ವ್ರತಾಚರಣೆಗೆ ಯಾರೂ ಪ್ರೇರಣೆ ನೀಡಿಲ್ಲ. ನಮ್ಮ ಆರೋಗ್ಯ ಮತ್ತು ಭಾವೈಕ್ಯತೆ ಕಾರಣದಿಂದ ಈ ನಿರ್ಧಾರ ಕೈಗೊಂಡು ಪ್ರತಿ ವರ್ಷ ಆಚರಣೆ ಮಾಡುತ್ತಿದ್ದೇವೆ’ ಎನ್ನುತ್ತಾರೆ ಶಿಕ್ಷಕ ವಿಜಯಕುಮಾರ.

ಆಲಗೂರಿನ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ವಿಜಯಕುಮಾರ ಪತ್ನಿ, ಅಳಿಯನಿಂದಲೂ ಉಪವಾಸ ವ್ರತಾಚರಣೆ ಹಿಂದೂ, ಮುಸ್ಲಿಮರಿಂದ ಮೆಚ್ಚುಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.