ADVERTISEMENT

ಬಾಕಿ ವೇತನ ನೀಡಲು ಆಗ್ರಹ

ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದಿಂದ ಧರಣಿ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2020, 12:45 IST
Last Updated 18 ನವೆಂಬರ್ 2020, 12:45 IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ವಿಜಯಪುರ ಜಿಲ್ಲಾ ಪಂಚಾಯಿತಿ ಎದುರು ಬುಧವಾರ ಧರಣಿ ನಡೆಸಿದರು 
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ವಿಜಯಪುರ ಜಿಲ್ಲಾ ಪಂಚಾಯಿತಿ ಎದುರು ಬುಧವಾರ ಧರಣಿ ನಡೆಸಿದರು    

ವಿಜಯಪುರ: 18 ತಿಂಗಳಿಂದ ಬಾಕಿಯಿರುವ ಹೆಚ್ಚುವರಿ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಜಿಲ್ಲಾ ಪಂಚಾಯಿತಿ ಎದುರು ಬುಧವಾರ ಧರಣಿ ನಡೆಸಿದರು.

10 ತಿಂಗಳಿಂದ ಬಾಕಿಯಿರುವ ತತ್ತಿ ಬಿಲ್, ಮಾತೃಪೂರ್ಣ ಯೋಜನೆಯ ಹೆಚ್ಚುವರಿ ವೇತನ, ಅಂಗನವಾಡಿ ಕೇಂದ್ರದ ಬಾಡಿಗೆ, ಸೇವಾ ಹಿರಿತನದ ಆಧಾರದ ಮೇಲೆ ವೇತನ, ಪ್ರತಿ ತಿಂಗಳು ನಡೆಯುವ ಸಭೆಯಲ್ಲಿ ಭಾಗವಹಿಸುವ ಕಾರ್ಯಕರ್ತೆಯರಿಗೆ ಟಿಎ ಮತ್ತು ಡಿಎ ನೀಡಬೇಕು ಎಂದು ಆಗ್ರಹಿಸಿದರು.

ಧರಣಿ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿ ಮಾತನಾಡಿದಮಹಿಳಾ ಮ್ತತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು, ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಚ್ಚುವರಿ ವೇತನವನ್ನು ರಾಜ್ಯಮಟ್ಟದ ಅಧಿಕಾರಿಗಳ ಜೊತೆ ಚರ್ಚಿಸಿ ಶೀಘ್ರದಲ್ಲಿ ಕಾರ್ಯಕರ್ತೆರ ಖಾತೆಗೆ ಜಮಾ ಮಾಡುವುದಾಗಿ ಭರವಸೆ ನೀಡಿದರು.

ADVERTISEMENT

ಬೇಡಿಕೆಗಳ ಬಗ್ಗೆ ಚರ್ಚಿಸಲು 15 ದಿನಗಳ ಒಳಗಾಗಿ ಎಲ್ಲ ಸಿಡಿಪಿಒ ಜೊತೆಯಲ್ಲಿ ಮತ್ತು ಸಂಘದ ಮುಖಂಡರ ಜೊತೆ ಸಭೆ ನಡೆಸಿ ಸಮಸ್ಯೆಗಳನ್ನು ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದರು.

ರೈತ ಕೃಷಿ-ಕಾರ್ಮಿಕ ಸಂಘದ ರಾಜ್ಯ ಉಪಾಧ್ಯಕ್ಷ ಬಿ.ಭಗವಾನ್ ರೆಡ್ಡಿ, ಅಂಗನವಾಡಿ ಕಾರ್ಯಕರ್ತೆಯರಿಗೆ ಇಲ್ಲಿಯವರೆಗೆ ನ್ಯಾಯಯುತವಾಗಿ ಸಿಗಬೇಕಾದಂತಹ ಹೆಚ್ಚುವರಿ ವೇತನ ನೀಡದೇ ಇರುವ ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿದರು.

ದೇಶದಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯ ಮತ್ತು ಆರೈಕೆಯಲ್ಲಿ ಹಾಗೂ ಅಶಕ್ತ ಮಕ್ಕಳಿಗೆ ಪೌಷ್ಠಿಕ ಆಹಾರ ಒದಗಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಬಹುಮುಖ್ಯವಾಗಿದೆ. ಸರ್ಕಾರವು ಇವರ ಸೇವೆಗೆ ತಕ್ಕಂತೆ ಸೌಲಭ್ಯಗಳನ್ನು ನೀಡದೇ ಮಾಲೀಕರ ಪರ ನೀತಿಗಳನ್ನು ಜಾರಿಗೊಳಿಸುವ ಮೂಲಕ ಈ ನೌಕರರಿಗೆ ಅನ್ಯಾಯವೆಸಗುತ್ತಿದೆ ಎಂದು ಆರೋಪಿಸಿದರು.

ಎಐಯುಟಿಯುಸಿಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಚ್.ಟಿ. ಮಾತನಾಡಿ, ಕಾರ್ಯಕರ್ತೆಯರ ಸಮಸ್ಯೆಗಳ ಕುರಿತು ಕಳೆದ ಜೂನ್ 29 ರಂದು ಮನವಿ ಸಲ್ಲಿಸಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಇಲ್ಲಿಯವರೆಗೆ ಯಾವುದೇ ಸಮಸ್ಯೆಯನ್ನೂ ಕೂಡ ಪರಿಹರಿಸದೇ ಇರುವ ಇಲಾಖೆಯ ದಿವ್ಯ ನಿರ್ಲಕ್ಷ್ಯವನ್ನು ಖಂಡಿಸಿದರು.

ಎಐಯುಟಿಯುಸಿಯ ಜಿಲ್ಲಾ ಸಮಿತಿ ಸದಸ್ಯರಾದ ಕಾಶೀಬಾಯಿ ಜಿ.ಟಿ., ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಂಘಟನಾಕಾರರಾದ ಶಶಿಕಲಾ ಮ್ಯಾಗೇರಿ ಮತ್ತು ಗಿರಿಜಾ ಮಠಪತಿ, ಲಕ್ಷ್ಮಿ ಲಕ್ಷಶೆಟ್ಟಿ, ಆರ್.ಟಿ.ಕ್ಯಾಡಿ, ನಿಂಗಮ್ಮ ಮಠ, ಸಾವಿತ್ರಿ ನಾಗರತ್ತಿ, ಸವಿತಾ ತೇರದಾಳ, ರೇಣುಕಾ ಹಡಪದ, ಸರಸ್ವತಿ ಮದ್ರಕಿ, ಶಿವಮ್ಮ ಹಚ್ಡದ, ಬೇಬಿ ಲಮಾಣಿ, ಸುವರ್ಣ ಕಾಳೆ, ಗಿರೆವ್ವ ಗುಳಬಾಳ, ಶಶಿಕಲಾ ಗುಡ್ಡದ, ಪುಷ್ಪಾ ಹೊಸಮಠ, ಗಂಗಮ್ಮ ಮುಪ್ಪೈನ ಮಠ, ದಿಲ್‍ಶಾದ್ ಬಿ. ಅವಟಿ, ಭಾರತಿ ಭೀಮಪ್ಪ ಮಾದರ ಭಾಗವಹಿಸಿದ್ದರು.

*****

ಡಿಸೆಂಬರ್ ಅಂತ್ಯದೊಳಗೆ ಬೇಡಿಕೆ ಈಡೇರಿಸದಿದ್ದರೆ ಅಂಗನವಾಡಿ ಕಾರ್ಯಕರ್ತೆಯರ ಕುಟುಂಬ ಸಮೇತ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗುವುದು

ಮಲ್ಲಿಕಾರ್ಜುನ ಎಚ್.ಟಿ. ಜಿಲ್ಲಾಧ್ಯಕ್ಷ,ಎಐಯುಟಿಯುಸಿಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.