ADVERTISEMENT

ವಿಜಯಪುರ: ವೈದ್ಯಕೀಯ ಪದವಿ ಪರೀಕ್ಷೆ ಮುಂದೂಡಲು ಆಗ್ರಹ

ಎ.ಐ.ಡಿ.ಎಸ್.ಒ ನೇತೃತ್ವದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 14:20 IST
Last Updated 24 ನವೆಂಬರ್ 2020, 14:20 IST
ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಎ.ಐ.ಡಿ.ಎಸ್.ಒ ನೇತೃತ್ವದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು 
ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಎ.ಐ.ಡಿ.ಎಸ್.ಒ ನೇತೃತ್ವದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು    

ವಿಜಯಪುರ:ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯವು ಜನವರಿ 19ರಿಂದ ನಡೆಸಲು ಉದ್ದೇಶಿಸಿರುವ ವೈದ್ಯಕೀಯ ಪರದವಿ ಪರೀಕ್ಷೆಯನ್ನು ಮುಂದೂಡಲು ಆಗ್ರಹಿಸಿ ಎ.ಐ.ಡಿ.ಎಸ್.ಒ ನೇತೃತ್ವದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಎ.ಐ.ಡಿ.ಎಸ್.ಒ ಮುಖಂಡ ಎಚ್.ಟಿ. ಭರತಕುಮಾರ ಮಾತನಾಡಿ,ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಡಿಸೆಂಬರ್ 1 ರಿಂದ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸುವುದಾಗಿ ಹೇಳಿಕೆ ನೀಡಿದ್ದರು. ಅಲ್ಲದೇ, ಆಫ್ ಲೈನ್ ತರಗತಿಗಳನ್ನು ಪುನರಾರಂಭ ಮಾಡುತ್ತೇವೆ ಎಂದಿರುವುದು ಅತ್ಯಂತ ಖಂಡನೀಯ ಎಂದರು.

ರಾಜೀವ್ ಗಾಂಧಿ ವೈದ್ಯಕೀಯ ವಿವಿ ಜನವರಿ 19ರಿಂದ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಿರುವುದು ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಆತಂಕ ಸೃಷ್ಟಿ ಮಾಡಿ, ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಹೇಳಿದರು.

ADVERTISEMENT

ಕೇವಲ ಒಂದೂವರೆ ತಿಂಗಳಿನ ಅವಧಿಯಲ್ಲಿ ವೈದ್ಯಕೀಯ ಪರೀಕ್ಷೆಗೆ ಸಿದ್ಧತೆ ನಡೆಸಿ ಬರೆಯುವುದು ಅಸಾಧ್ಯ ಅಷ್ಟೇ ಅಲ್ಲದೆ, ಅದು ಅವಾಸ್ತವಿಕ. ಕಾಲಗತಿಯಲ್ಲಿ ಎಂದು ಸಾಬೀತಾಗಿರದ ಆನ್‌ಲೈನ್‌ ಪದ್ಧತಿಯಿಂದಾಗಿ ವಿದ್ಯಾರ್ಥಿಗಳಿಗೆ ಸಮರ್ಪಕಜ್ಞಾನ ಸಿಗದೆ ಮತ್ತು ಇಂಟರ್‌ನೆಟ್‌ ಸೌಲಭ್ಯಗಳ ಕೊರತೆಯಿಂದ ವಿಶ್ವವಿದ್ಯಾಲಯ ನಡೆಸಿದ ಆನ್ ಲೈನ್ ತರಗತಿಗಳು ಫಲಪ್ರದವಾಗಿ ನಡೆದಿಲ್ಲ. ಅದಕ್ಕಿಂತ ಹೆಚ್ಚಾಗಿ, ಪ್ರಾಯೋಗಿಕ ತರಗತಿ, ಕ್ಲಿನಿಕಲ್ ತರಬೇತಿಯ ಕ್ರಮಗಳ ಮೇಲೆ ಆಧಾರವಾಗಿರುವ ವೈದ್ಯಕೀಯ ಕೋರ್ಸ್ ನಲ್ಲಿ ಇಲ್ಲಿವರೆಗೆ ಯಾವುದೇ ತರಗತಿ ನಡೆದಿಲ್ಲ ಮತ್ತು ಒಂದೂವರೆ ತಿಂಗಳಲ್ಲಿ ಅದು ನಿಯೋಜಿತ ಮಟ್ಟ ತಲುಪುವುದು ಅಸಾಧ್ಯವಾಗಿದೆ. ಆದ್ದರಿಂದ ಉದ್ದೇಶಿತ ಈ ಪರೀಕ್ಷೆಯನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು.

ಎಐಡಿಎಸ್‍ಒ ಜಿಲ್ಲಾ ಉಪಾಧ್ಯಕ್ಷರಾದ ಕಾವೇರಿ ರಜಪೂತ ಮಾತನಾಡಿ, ಪರೀಕ್ಷಾ ವೇಳಾ ಪಟ್ಟಿಯನ್ನು ಪ್ರಕಟಿಸುವ ಮೊದಲು ಅದಕ್ಕೆ ಸಂಬಂಧಪಟ್ಟವರನ್ನು ಮತ್ತು ವಿದ್ಯಾರ್ಥಿಗಳ ಅಭಿಪ್ರಾಯ ಕೇಳಬೇಕಿತ್ತು ಎಂದರು.

ಜನವರಿಯಲ್ಲಿ ನಡೆಯಬೇಕಿರುವ ಪರೀಕ್ಷೆಗಳನ್ನು ಮುಂದೂಡಬೇಕು. ಮೆಡಿಕಲ್ ಕೋರ್ಸ್ ರಚನೆಯು ಏಕರೂಪವಾಗಿ ಇರದ ಕಾರಣ ಪ್ರತಿ ವರ್ಷದ ವಿದ್ಯಾರ್ಥಿಗೆ ಅನುಗುಣವಾಗಿ ಪರೀಕ್ಷೆಯನ್ನು ಮುಂದೂಡಿ, ಮತ್ತು ಈ ಕ್ರಿಯೆಯಲ್ಲಿ ಇದಕ್ಕೆ ಸಂಬಂಧಿಸಿದ ಎಲ್ಲರ ಅಭಿಪ್ರಾಯ ಪಡೆದು ನಂತರ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.

ಸುರೇಖಾ ಕಡಪಟ್ಟಿ, ದರ್ಶನಗೌಡ ಎ, ನಿತೇಶ ರಾಥಿ, ಸ್ನೇಹಾ ಕಮಲಾಪುರೇ, ಆಯಿಶಾ ಏಬಿಯಾ, ಉಮರ್ ಫಾರುಕ್, ಖಾದಿರ್ ಅಹಮದ್ ಖಾನ್, ಗಣೇಶ, ಅಬ್ದುಲ್ ರೆಹಮಾನ್, ಹೇಲ್ರಾ, ಶಕೀಲ್, ಸಲ್ಮಾನ್, ಸಂಜೀವ, ರಾಹುಲ್, ವಸಾಯಿಫ್ ಖಾನ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.