ಮುದ್ದೇಬಿಹಾಳ: ಸರ್ಕಾರಿ ನೌಕರರೆಂದರೆ ಆಲಸಿಗಳು, ಕಚೇರಿಗೆ ಹೋದರೆ ಸಿಗುವುದಿಲ್ಲ ಎಂಬ ಕೆಲವು ಅಪವಾದಗಳ ಮಧ್ಯೆಯೂ ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ರೈತರಿಗೆ ಸರ್ಕಾರದಿಂದ ದೊರೆಯಬೇಕಾದ ನ್ಯಾಯಬದ್ಧ ಪರಿಹಾರ ದೊರಕಿಸಿಕೊಡಲು ಕಂದಾಯ ಇಲಾಖೆ ನೌಕರರು ಹಗಲು- ರಾತ್ರಿ ಲೆಕ್ಕಿಸದೇ ರಜೆಯ ದಿನದಂದು ಕೆಲಸ ಮಾಡಿ ಕರ್ತವ್ಯ ಪ್ರಜ್ಞೆ ತೋರಿದ್ದಾರೆ.
ಮುದ್ದೇಬಿಹಾಳ ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಮಧ್ಯರಾತ್ರಿ 12 ನಂತರ ಹಾಗೂ ಎರಡನೇ ಶನಿವಾರ ಸಹ ಬರ ಪರಿಹಾರಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಬಲರಾಮ ಕಟ್ಟಿಮನಿ ಅವರ ಮೇಲ್ವಿಚಾರಣೆಯಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು, ಕಂದಾಯ ನಿರೀಕ್ಷಕರು ಕರ್ತವ್ಯದ ಮೇಲಿದ್ದಾರೆ.
ಕಳೆದ ಮೂರು ದಿನಗಳಿಂದ ರಾತ್ರಿಯಿಡಿ ರೈತರ ಬೆಳೆ ಪರಿಹಾರ ಎಫ್.ಐ.ಡಿ (ಫ್ರೂಟ್ಸ್ ಐಡಿ) ಮಾಡಿರುವುದನ್ನು ಅನುಮೋದಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಚಳಿ, ನಿದ್ದೆ ಲೆಕ್ಕಿಸದೇ ಮಹಿಳಾ ನೌಕರರು ಪಾಲ್ಗೊಂಡು ಈ ಕಾರ್ಯದಲ್ಲಿ ತೊಡಗಿರುವುದಕ್ಕೆ ರೈತಾಪಿ ವರ್ಗದಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
ತಾಲ್ಲೂಕಿನಲ್ಲಿ 40 ಸಾವಿರಕ್ಕೂ ಅಧಿಕ ರೈತರು ಬೆಳೆ ಪರಿಹಾರಕ್ಕೆ ನೋಂದಾಯಿಸಿದ್ದು, 26,409 ಖಾತೆಗಳು ಆಧಾರ್‌ನೊಂದಿಗೆ ಆರ್.ಟಿ.ಸಿಯಲ್ಲಿನ ಹೆಸರು ತಾಳೆಯಾಗದಿರುವುದರಿಂದ ಪರಿಶೀಲನೆ ನಡೆಸಿ ಅನುಮೋದಿಸುವ ಕೆಲಸ ಮಾಡುತ್ತಿದ್ದೇವೆ ಎಂದು ತಹಶೀಲ್ದಾರ್ ಬಲರಾಮ ಕಟ್ಟಿಮನಿ ತಿಳಿಸಿದ್ದಾರೆ.
Quote - ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್‌ಟಾಪ್ ಒದಗಿಸಿದರೆ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಗಂಗಾಧರ ಜೂಲಗುಡ್ಡ ಜಿಲ್ಲಾಧ್ಯಕ್ಷ ಗ್ರಾಮ ಆಡಳಿತ ಅಧಿಕಾರಿಗಳ ಸಂಘ ವಿಜಯಪುರ
Quote - ರೈತರಿಗೆ ಸರ್ಕಾರದ ಸೌಲಭ್ಯ ದೊರಕಿಸಿಕೊಡಲು ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿರುವ ಕಂದಾಯ ಇಲಾಖೆ ನೌಕರರ ಕಾರ್ಯ ಶ್ಲಾಘನೀಯ. ಇತರರಿಗೆ ಮಾದರಿಯಾಗಿದೆ ಮಲ್ಲಿಕಾರ್ಜುನ ಸಿದರೆಡ್ಡಿ ಅಧ್ಯಕ್ಷ ರೈತ ಹಿತರಕ್ಷಣಾ ವೇದಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.