ಸಿಂಧುಗೇರಿ (ಬಸವನಬಾಗೇವಾಡಿ): ದೇವರ ಹಿಪ್ಪರಗಿ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಬಸವನಬಾಗೇವಾಡಿ ತಾಲ್ಲೂಕಿನ ಗಡಿ ಗ್ರಾಮ ಸಿಂಧುಗೇರಿ ಗ್ರಾಮದಲ್ಲಿನ ಎಲ್ಲ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ತಾಲ್ಲೂಕಿನ ಗಡಿ ಗ್ರಾಮವು ಮೂಲಸೌಕರ್ಯಗಳಿಂದ ವಂಚಿತವಾಗಿದೆ.
ಸುಮಾರು 3 ಸಾವಿರ ಜನಸಂಖ್ಯೆ ಹೊಂದಿರುವ ಸಿಂಧುಗೇರಿಯಲ್ಲಿ ಎಲ್ಲ ರಸ್ತೆಗಳು ಕೆಸರು ಗದ್ದೆಗಳಂತಾಗಿ ಗ್ರಾಮಸ್ಥರು ಓಡಾಡಲಾಗದಷ್ಟು ದಯನೀಯ ಸ್ಥಿತಿಯಲ್ಲಿವೆ. ಹಾಳಾದ ರಸ್ತೆಗಳೇ ಈ ಗ್ರಾಮದ ದೊಡ್ಡ ಸಮಸ್ಯೆ. ಮಳೆಗಾಲದಲ್ಲಂತೂ ಗ್ರಾಮದ ರಸ್ತೆಗಳಲ್ಲಿ ಓಡಾಡಲಾಗದೇ ಜನರಿಗೆ ಗೃಹಬಂಧನ, ನರಕಯಾತನೆ ಕಟ್ಟಿಟ್ಟ ಬುತ್ತಿ. ಇನ್ನು ಗ್ರಾಮದಿಂದ ಸ್ಮಶಾನಕ್ಕೆ ಹೋಗುವ ರಸ್ತೆಯಂತೂ ಮೊಣಕಾಲುದ್ದ ಕೆಸರು ತುಂಬಿಕೊಂಡಿದ್ದು, ಗ್ರಾಮದಲ್ಲಿ ಯಾರಾದರೂ ನಿಧನರಾದರೆ ಗ್ರಾಮಸ್ಥರಿಗೆ ಶವ ಹೊತ್ತುಕೊಂಡು ಹೋಗಿ ಅಂತ್ಯ ಸಂಸ್ಕಾರ ಮಾಡುವುದು ದೊಡ್ಡ ಸಾಹಸ ಕಾರ್ಯವಾಗಿಬಿಟ್ಟಿದೆ.
ಶರಣ ಸೋಮನಾಳದಿಂದ ಸಿಂಧುಗೇರಿ ಗ್ರಾಮಕ್ಕೆ ಸಂಪರ್ಕಿಸುವ ಮುಖ್ಯರಸ್ತೆಯ ಸುಮಾರು 5 ಕಿ.ಮೀ. ರಸ್ತೆ ಅದೆಷ್ಟೋ ವರ್ಷಗಳಿಂದ ಡಾಂಬರ್ ಕಾಣದೇ ತಗ್ಗು ಗುಂಡಿಗಳು ತುಂಬಿಕೊಂಡಿವೆ.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಛಾವಣಿ ಕುಸಿದು ಹೋಗಿದ್ದು, ಕೇವಲ ಎರಡ್ಮೂರು ಕೊಠಡಿಗಳು ಮಾತ್ರವಿದೆ. ವಿಶೇಷವಾಗಿ ಮಹಿಳೆಯರಿಗೆ ಸಾಮೂಹಿಕ ಶೌಚಾಲಯ ನಿರ್ಮಿಸುವ ಅನಿವಾರ್ಯತೆ ಇದೆ.
ಅಂಗನವಾಡಿ ಕೇಂದ್ರ-1 ರ ಕಟ್ಟಡ ಪೂರ್ಣ ಹಾಳಾಗಿದೆ. ಶಾಸಕರು ಕೂಡಲೇ ಈ ಎಲ್ಲಾ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಿ ನಮ್ಮನ್ನು ಸಮಸ್ಯೆಗಳ ಸುಳಿಯಿಂದ ಮುಕ್ತಗೊಳಿಸಬೇಕು ಎಂದು ಹಿರಿಯರಾದ ಗೊಲ್ಲಾಳಪ್ಪ ಕಡಕೋಳ, ಬಾಬು ನಂದಗೇರಿ, ಸಂಗಣ್ಣ ದೋರನಹಳ್ಳಿ, ಬಸವರಾಜ ಬಾಗೇವಾಡಿ ಒತ್ತಾಯಿಸುತ್ತಾರೆ.
‘ಶಾಸಕ ರಾಜುಗೌಡ ಪಾಟೀಲರು ಚುನಾವಣೆ ಸಂದರ್ಭದಲ್ಲಿ ಗ್ರಾಮಕ್ಕೆ ಬಂದಾಗ ತಾವು ಚುನಾಯಿತರಾದರೆ ಗ್ರಾಮದ ಎಲ್ಲ ರಸ್ತೆಗಳನ್ನು ಅಭಿವೃದ್ಧಿ ಪಡಿಸುವುದಾಗಿ ಮಾತು ಕೊಟ್ಟಿದ್ದರು. ಚುನಾಯಿತರಾದ ಬಳಿಕ ಕೊಟ್ಟ ಮಾತು ಮರೆತಿದ್ದಾರೆ. ನಮ್ಮ ಸಮಸ್ಯೆಗಳ ಬಗ್ಗೆ ಸಾಕಷ್ಟು ಗಮನಕ್ಕೆ ತಂದರೂ ಶಾಸಕರಾಗಲಿ, ವಡವಡಗಿ ಗ್ರಾ.ಪಂ ಪಿಡಿಒ, ಅಧ್ಯಕ್ಷರು, ಸದಸ್ಯರು ಯಾರೂ ನಮ್ಮತ್ತ ಸುಳಿಯುತ್ತಿಲ್ಲ. ಉಗ್ರ ಹೋರಾಟವೊಂದೇ ಪರಿಹಾರಕ್ಕೆ ಮಾರ್ಗ’ ಎಂದು ಗ್ರಾಮದ ಯುವಕರಾದ ಪ್ರದೀಪ ಕಡಕೋಳ, ಅಭಿಷೇಕ ಅತನೂರ, ಗುರುರಾಜ ದೋರನಹಳ್ಳಿ, ಕುಮಾರ ಹರಿಜನ, ಸಂಗಮೇಶ ನಿಡಗುಂದಿ, ಶ್ರೀಶೈಲ ಹಡಪದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಂಧುಗೇರಿ ರಸ್ತೆಗಳ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು ಅನುದಾನ ಬಂದ ಬಳಿಕ ಆದ್ಯತೆ ಮೇಲೆ ರಸ್ತೆಗಳ ಅಭಿವೃದ್ಧಿ ಕಾರ್ಯ ಮಾಡುತ್ತೇನೆ. ಶೀಘ್ರದಲ್ಲೇ ಗ್ರಾಮಕ್ಕೆ ಖುದ್ಧು ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಕಾರ್ಯ ಮಾಡುತ್ತೇನೆ.ರಾಜುಗೌಡ ಪಾಟೀಲ ಶಾಸಕ ದೇವರ ಹಿಪ್ಪರಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.