ADVERTISEMENT

ಜ್ಞಾನವೇ ಬ್ರಾಹ್ಮಣರ ಅದಮ್ಯ ಶಕ್ತಿ, ವಿಶ್ವವೇ ಗುರುತಿಸಿದೆ: ಆರ್.ವಿ. ದೇಶಪಾಂಡೆ

​ಪ್ರಜಾವಾಣಿ ವಾರ್ತೆ
Published 10 ಮೇ 2022, 11:14 IST
Last Updated 10 ಮೇ 2022, 11:14 IST
ವಿಜಯಪುರದಲ್ಲಿ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ಆಯೋಜಿಸಿದ್ದ ವಿಪ್ರ ಸಂಗಮ ಸಮಾರಂಭವನ್ನು ಮಾಜಿ ಸಚಿವ ಆರ್ ವಿ ದೇಶಪಾಂಡೆ ಉದ್ಘಾಟಿಸಿದರು
ವಿಜಯಪುರದಲ್ಲಿ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ಆಯೋಜಿಸಿದ್ದ ವಿಪ್ರ ಸಂಗಮ ಸಮಾರಂಭವನ್ನು ಮಾಜಿ ಸಚಿವ ಆರ್ ವಿ ದೇಶಪಾಂಡೆ ಉದ್ಘಾಟಿಸಿದರು   

ವಿಜಯಪುರ: ಜ್ಞಾನವೇ ಬ್ರಾಹ್ಮಣರ ಅದಮ್ಯ ಶಕ್ತಿ, ಈ ಕಾರಣಕ್ಕಾಗಿ ವಿಶ್ವವೇ ಬ್ರಾಹ್ಮಣರನ್ನು ಗುರುತಿಸಿದೆ. ಬ್ರಾಹ್ಮಣರ ಬುದ್ದಿಶಕ್ತಿ ವಿಶ್ವವ್ಯಾಪಿಯಾಗಿ ಮನ್ನಣೆ ಪಡೆದಿದೆ. ಆದರೆ, ಸಂಘಟನೆ ಕೊರತೆಯೇ ಬ್ರಾಹ್ಮಣರ ದೌರ್ಬಲ್ಯವಾಗಿದೆ ಎಂದು ಮಾಜಿ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.

ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ವಿಪ್ರ ಸಂಗಮ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ವಿಪ್ರ ಸಮಾಜದ ಸಂಘಟನೆ ಬಲಗೊಳ್ಳಬೇಕು, ಶಕ್ತಿಯ ಪ್ರದರ್ಶನವಾಗಬೇಕು, ಸಂಘಟನೆಯಲ್ಲಿ ಮಹಿಳಾ ಶಕ್ತಿಯನ್ನು ಹೆಚ್ಚಾಗಿ ತೊಡಗಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10 ರಷ್ಟು ಮೀಸಲಾತಿ ಕಲ್ಪಿಸಿದೆ. ಈ ಕಾರ್ಯ ಎಲ್ಲ ರಾಜ್ಯಗಳಲ್ಲೂ ಅನುಷ್ಠಾನಗೊಳಿಸಬೇಕು ಎಂದರು.

ಆರೋಗ್ಯ ಹಾಗೂ ಶಿಕ್ಷಣಕ್ಕೆ ಆದ್ಯತೆ ದೊರಕಬೇಕು, 21 ನೇ ಶತಮಾನ ಬುದ್ದಿಶಕ್ತಿಯ ಶತಮಾನ, ಹೀಗಾಗಿ ಏನೇ ತೊಂದರೆಯಾದರೂ ಮಕ್ಕಳಿಗೆ ಶಿಕ್ಷಣ ಕೊಡಿಸಿ, ಸಾಲವಾದರೂ ಚಿಂತೆಯಿಲ್ಲ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಿ ಎಂದು ತಿಳಿ ಹೇಳಿದರು.

ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ. ಗೋವಿಂದ ಕುಲಕರ್ಣಿ ಮಾತನಾಡಿ, ಸಂಘ ದೇಶಾದ್ಯಂತ 20 ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಒಂದು ಕೋಟಿ ಸದಸ್ಯರನ್ನು ಹೊಂದಿದೆ ಎಂದರು.

ಶೇ 10 ರಷ್ಟು ಸಂಖ್ಯೆಯಲ್ಲಿರುವ ಬ್ರಾಹ್ಮಣರಿಗೆ ಸರ್ಕಾರ ಬದಲಿಸುವ ಶಕ್ತಿ ಇದೆ. ಸಮಾಜವು ಮತಬ್ಯಾಂಕ್ ಆಗಿ ಪರಿವರ್ತನೆಗೊಳ್ಳಬೇಕಿದೆ ಎಂದರು.

ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಬ್ರಾಹ್ಮಣರನ್ನು ಎಲ್ಲರೂ ಪ್ರಾಮಾಣಿಕರು ಎಂದು ಗುರುತಿಸುತ್ತಾರೆ. ಹಿರಿಯರು ಮಾಡಿಟ್ಟ ಆಸ್ತಿಯನ್ನು ಉಳಿಸಿಕೊಳ್ಳುವುದು ಅವಶ್ಯವಾಗಿದೆ ಎಂದರು.

ಸರ್ವಜ್ಞ ವಿದ್ಯಾವಿಹಾರ ಕುಲಪತಿ ಪಂ.ಮಧ್ವಾಚಾರ್ಯ ಮೊಕಾಶಿ ಮಾತನಾಡಿ, ಸಮಾಜ ಸೇವೆಯ ಜೊತೆಗೆ ಬ್ರಾಹ್ಮಣ್ಯವನ್ನು ಕಾಪಾಡಿಕೊಂಡು ಹೋಗುವುದು ಅಗತ್ಯವಾಗಿದೆ. ಸಮಾಜ ಸಂಘಟನೆಯ ಜೊತೆಗೆ ಧರ್ಮ ಸಂಘಟನೆ ಸಹ ಆಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಮೂವರಿಗೆ ಇ-ಶ್ರಮ ಕಾರ್ಡ್‌ ವಿತರಿಸಲಾಯಿತು.

ಜಿಲ್ಲಾ ಪುರೋಹಿತರ ಹಾಗೂ ಅರ್ಚಕರ ಸಂಘದ ಕಾರ್ಯದರ್ಶಿ ಕೃಷ್ಣಭಟ್ ಗಲಗಲಿ, ಚಿದಂಬರ ಸೇವಾ ಸಮಿತಿ ಅಧ್ಯಕ್ಷ ಪಿ ಬಿ ಹಂಗರಗಿ, ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘದ ರಾಜ್ಯ ಅಧ್ಯಕ್ಷ ಸಿ ಎ ಗೋಪಿನಾಥ, ರಾಜ್ಯ ಕಾರ್ಯದರ್ಶಿ ಬಿ ಆರ್ ಪ್ರದೀಪ, ಮಹಾಸಂಘದ ರಾಜ್ಯ ಕೋಶಾಧ್ಯಕ್ಷ ವಿಶ್ವನಾಥ ಜೋಶಿ, ಸಂಘದ ಜಿಲ್ಲಾಧ್ಯಕ್ಷ ಮುಕುಂದ ಕುಲಕರ್ಣಿ, ಉಪಾಧ್ಯಕ್ಷ ಬಿ. ಆರ್. ನಾಯಕ, ಕರ್ನಾಟಕ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಅಧ್ಯಕ್ಷ ಆನಂದ ಜೋಶಿ, ಪ್ರಶಾಂತ ದೇಶಪಾಂಡೆ, ಪವನ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.