ADVERTISEMENT

ಎರಡೂವರೆ ವರ್ಷದಿಂದ ಕೆಲಸವಿಲ್ಲ; ಸಂಕಷ್ಟದಲ್ಲಿ ಸಾಕ್ಷರತಾ ಪ್ರೇರಕರು..!

ಹೊಸ ಯೋಜನೆ ಘೋಷಣೆಯಾಗಿಲ್ಲ

ಡಿ.ಬಿ, ನಾಗರಾಜ
Published 8 ಸೆಪ್ಟೆಂಬರ್ 2018, 15:22 IST
Last Updated 8 ಸೆಪ್ಟೆಂಬರ್ 2018, 15:22 IST
ತಾಂಬಾ ಗ್ರಾಮ ಪಂಚಾಯ್ತಿ ವತಿಯಿಂದ ನಿರ್ವಹಿಸಲ್ಪಡುತ್ತಿದ್ದ ಲೋಕ ಶಿಕ್ಷಣ ಕೇಂದ್ರಕ್ಕೆ ಬೀಗ ಹಾಕಲಾಗಿದೆಪ್ರಜಾವಾಣಿ ಚಿತ್ರ
ತಾಂಬಾ ಗ್ರಾಮ ಪಂಚಾಯ್ತಿ ವತಿಯಿಂದ ನಿರ್ವಹಿಸಲ್ಪಡುತ್ತಿದ್ದ ಲೋಕ ಶಿಕ್ಷಣ ಕೇಂದ್ರಕ್ಕೆ ಬೀಗ ಹಾಕಲಾಗಿದೆಪ್ರಜಾವಾಣಿ ಚಿತ್ರ   

ವಿಜಯಪುರ:ನಿರಕ್ಷರಿಗಳ ಬಾಳಲ್ಲಿ ಅಕ್ಷರದ ಬೆಳಕು ಮೂಡಿಸಿದ್ದ ಸಾಕ್ಷರತಾ ಪ್ರೇರಕರ ಬದುಕು ಸಂಕಷ್ಟದ ಮಡುವಿನಲ್ಲಿ ಮುಳುಗಿದೆ. ಎರಡೂವರೆ ವರ್ಷಗಳಿಂದ ಯಾವೊಂದು ಯೋಜನೆ ವ್ಯಾಪಕ ಪ್ರಮಾಣದಲ್ಲಿ ಅನುಷ್ಠಾನಗೊಳ್ಳದಿರುವುದರಿಂದ ಇವರಿಗೆ ಕೆಲಸವೂ ಇಲ್ಲವಾಗಿದೆ. ಇದರ ಪರಿಣಾಮ ಸಿಗುತ್ತಿದ್ದ ಗೌರವ ಧನವೂ ಸ್ಥಗಿತಗೊಂಡಿದೆ. ಬದುಕು ಭಾರವಾಗಿದೆ.

ಜಿಲ್ಲೆಯ ಸಾಕ್ಷರತಾ ಪ್ರಮಾಣ ಹೆಚ್ಚಳದಲ್ಲಿ ಪ್ರೇರಕರು ಪರಿಣಾಮಕಾರಿ ಪಾತ್ರ ನಿರ್ವಹಿಸಿದ್ದರು. ಜಿಲ್ಲಾ–ತಾಲ್ಲೂಕು ಸಂಯೋಜಕರ ಅಣತಿಯಂತೆ ಹಳ್ಳಿ, ಹಳ್ಳಿ ಸುತ್ತಿ ಅಕ್ಷರ ಕಲಿಸುವ ಸ್ವಯಂಸೇವಕರಲ್ಲಿ ಸೇವಾ ಮನೋಭಾವದ ಬೀಜ ಬಿತ್ತಿ, ಲಕ್ಷ ಲಕ್ಷ ಸಂಖ್ಯೆಯ ನಿರಕ್ಷರಿಗಳನ್ನು ಅಕ್ಷರಸ್ಥರನ್ನಾಗಿಸಿ, ಓದು–ಬರಹ ಕಲಿಸಿದ್ದರು. ನಿರಕ್ಷರಿ ವಯಸ್ಕರ ಸಾಕ್ಷರ ಬದುಕು ರೂಪಿಸಿದ್ದರು. ನಿಗದಿತ ಗುರಿ ಸಾಧನೆಗೈದಿದ್ದರು.

ಜಿಲ್ಲೆಯಾದ್ಯಂಥ ಇನ್ನೂ ಲಕ್ಷ, ಲಕ್ಷ ಸಂಖ್ಯೆಯ ನಿರಕ್ಷರಿಗಳಿದ್ದರೂ, ಕೇಂದ್ರ–ರಾಜ್ಯ ಸರ್ಕಾರ ಸಾಕ್ಷರತಾ ಯೋಜನೆಗೆ ಉತ್ತೇಜನ ನೀಡದ ಪರಿಣಾಮ, ದಶಕಗಳಿಂದ ಸಾಕ್ಷರತಾ ಅಭಿಯಾನದಲ್ಲೇ ತಮ್ಮನ್ನು ತೊಡಗಿಸಿಕೊಂಡಿದ್ದ ಪ್ರೇರಕರು, ಇದೀಗ ತಮ್ಮ ಬದುಕಿಗೆ ಪ್ರೇರಣೆ ಸಿಗದೆ ಅತಂತ್ರರಾಗಿದ್ದಾರೆ.

ADVERTISEMENT

ಎರಡ್ಮೂರು ವರ್ಷಗಳ ಹಿಂದೆ ಜಿಲ್ಲೆಯ ಎಲ್ಲೆಡೆ ಸಾಕ್ಷರತಾ ಕೇಂದ್ರ, ವಯಸ್ಕರ ಶಿಕ್ಷಣ ಕಲಿಕಾ ಕೇಂದ್ರಗಳಲ್ಲಿ ಅತ್ಯುತ್ಸಾಹದಿಂದ ಸೆ 8ರಂದು ನಡೆಯುತ್ತಿದ್ದ ವಿಶ್ವ ಸಾಕ್ಷರತಾ ದಿನಾಚರಣೆ, ಸಾಕ್ಷರತಾ ಪ್ರೇರಕರು ಕೆಲಸದಿಂದ ಹೊರಗುಳಿದಿರುವ ಪರಿಣಾಮ ಈ ವರ್ಷವೂ ಎಲ್ಲಿಯೂ ಆಚರಣೆಯಾಗಲಿಲ್ಲ.

ಕತ್ತಲಲ್ಲಿ ಪ್ರೇರಕರು

‘ಲಕ್ಷ, ಲಕ್ಷ ಸಂಖ್ಯೆಯಲ್ಲಿ ವಯಸ್ಕ ನಿರಕ್ಷರಿಗಳ ಬಾಳಲ್ಲಿ ಅಕ್ಷರದ ಬೆಳಕು ಮೂಡಿಸಿದವರು ನಾವು. ಎಸ್‌ಎಸ್‌ಎಲ್‌ಸಿ ಪಾಸಾದವರಿಂದ ಸ್ನಾತಕೋತ್ತರ ಪದವಿ ಪಡೆದವರೂ ಈ ಯೋಜನೆಯಡಿ ಸಾಕ್ಷರತಾ ಪ್ರೇರಕರಾಗಿ ದಶಕಗಳಿಂದ ದುಡಿಯುತ್ತಿದ್ದೆವು.

ಜಿಲ್ಲೆಯ ವ್ಯಾಪ್ತಿಯಲ್ಲಿ ಒಂದು ಗ್ರಾಮ ಪಂಚಾಯ್ತಿಗೆ ಇಬ್ಬರಂತೆ ಒಟ್ಟು 398 ಸಾಕ್ಷರತಾ ಪ್ರೇರಕರು ಕಾರ್ಯ ನಿರ್ವಹಿಸುತ್ತಿದ್ದೆವು. ನಮ್ಮ ಮೇಲಿನ ಹಂತದಲ್ಲಿ ಐದು ತಾಲ್ಲೂಕಿನಿಂದ ಐವರು ತಾಲ್ಲೂಕು ಸಂಯೋಜಕರು, ಜಿಲ್ಲಾ ಸಂಯೋಜಕರಾಗಿ ನಾಲ್ವರು ಸ್ವಯಂಸೇವಾ ಸಂಸ್ಥೆ ಮೂಲಕ ದುಡಿಯುತ್ತಿದ್ದರು. ಆದರೆ 2016ರ ಏಪ್ರಿಲ್‌ನಿಂದೀಚೆಗೆ ಇಡೀ ಯೋಜನೆಗೆ ಸಮರ್ಪಕ ಅನುದಾನ ದೊರಕದಿದ್ದರಿಂದ, ಇದೀಗ ಎಲ್ಲರೂ ಖಾಲಿ ಕೈಯಲ್ಲಿ ಕೂತಿದ್ದೇವೆ’ ಎಂದು ಚಡಚಣ ತಾಲ್ಲೂಕಿನ ಹಲಸಂಗಿಯ ಸಾಕ್ಷರತಾ ಪ್ರೇರಕ ರಂಜಾನ್‌ ಸೌದಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.