ADVERTISEMENT

ಅಂಬೇಡ್ಕರ್‌ ಸಂವಿಧಾನ ಕೈತಪ್ಪದಂತೆ ಎಚ್ಚರವಹಿಸಿ: ಸತೀಶ ಜಾರಕಿಹೊಳಿ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 3:55 IST
Last Updated 23 ಜುಲೈ 2025, 3:55 IST
ವಿಜಯಪುರ ನಗರದ ಕಂದಗಲ್ ಹುನುಮಂತರಾಯ ರಂಗಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ.ಬಿ.ಕೃಷ್ಣಪ್ಪ ಬಣ)ಮಂಗಳವಾರ ಆಯೋಜಿಸಿದ್ದ ಸಂವಿಧಾನ ಮತ್ತು ಅಂಬೇಡ್ಕರ್ ಸಾಮಾಜಿಕ ಸಮಾನತೆಗಾಗಿ ಜನ ಆಂದೋಲನ ಸಮಾವೇಶದಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿದರು –ಪ್ರಜಾವಾಣಿ ಚಿತ್ರ
ವಿಜಯಪುರ ನಗರದ ಕಂದಗಲ್ ಹುನುಮಂತರಾಯ ರಂಗಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ.ಬಿ.ಕೃಷ್ಣಪ್ಪ ಬಣ)ಮಂಗಳವಾರ ಆಯೋಜಿಸಿದ್ದ ಸಂವಿಧಾನ ಮತ್ತು ಅಂಬೇಡ್ಕರ್ ಸಾಮಾಜಿಕ ಸಮಾನತೆಗಾಗಿ ಜನ ಆಂದೋಲನ ಸಮಾವೇಶದಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿದರು –ಪ್ರಜಾವಾಣಿ ಚಿತ್ರ   

ವಿಜಯಪುರ: ‘ಡಾ.ಬಿ.ಆರ್‌.ಅಂಬೇಡ್ಕರ್‌ ಬರೆದಿರುವ ಸಂವಿಧಾನ ಬದಲಾಯಿಸಬೇಕು ಎಂಬ ಕೂಗು ಆಗಾಗ ಕೇಳಿಬರುತ್ತಿದೆ. ಹಾಗಾಗುವುದಕ್ಕೆ ಯಾವುದೇ ಕಾರಣಕ್ಕೂ ಬಿಡಬಾರದು, ಸಂವಿಧಾನ ಕೈತಪ್ಪಿ ಹೋಗದಂತೆ ನಾವೆಲ್ಲರೂ ಈ ನಿಟ್ಟಿನಲ್ಲಿ ಒಗ್ಗಟ್ಟಾಗಬೇಕು’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಎಂದರು.

ನಗರದ ಕಂದಗಲ್ ಹುನುಮಂತರಾಯ ರಂಗಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ.ಬಿ.ಕೃಷ್ಣಪ್ಪ ಬಣ) ಮಂಗಳವಾರ ಆಯೋಜಿಸಿದ್ದ ಸಂವಿಧಾನ ಮತ್ತು ಅಂಬೇಡ್ಕರ್ ಸಾಮಾಜಿಕ ಸಮಾನತೆಗಾಗಿ ಜನ ಆಂದೋಲನ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದಲ್ಲಿ ಬಹಳಷ್ಟು ದಲಿತ ಸಂಘಟನೆಗಳು ಇವೆ. ಸಂವಿಧಾನ ಉಳಿಸುವುದು ನಮ್ಮೆಲ್ಲ ಸಂಘಟನೆಗಳ ಗುರಿಯಾಗಿರಬೇಕು’ ಎಂದರು.

ADVERTISEMENT

‘ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆದರೂ ಸಮಾಜದಲ್ಲಿ ಸಮಾನತೆ ಬಂದಿಲ್ಲ. ಅದರ ಜಾರಿಗೆ ಎಲ್ಲರೂ ಮುಂದಾಗಬೇಕು’ ಎಂದು ಹೇಳಿದರು.

‘ಜಗತ್ತಿನಲ್ಲೇ ಅತ್ಯುತ್ತಮ ಸಂವಿಧಾನ ರಚಿಸಿದ್ದೇನೆ. ಆದರೆ, ಕೆಟ್ಟವರ ಕೈಗೆ ಸಿಕ್ಕರೆ ಅದು ಜಾರಿಗೆ ಬರುವುದಿಲ್ಲ, ಒಳ್ಳೆಯವರ ಕೈಗೆ ಸಿಗಬೇಕು, ಆಗ ಜಾರಿಯಾಗಲಿದೆ ಎಂದು ಸ್ವತಃ ಅಂಬೇಡ್ಕರ್ ಹೇಳಿದ್ದರು’ ಎಂದು ನೆನಪಿಸಿಕೊಂಡರು.

‘ಸಂವಿಧಾನ ರಚನಾ ಸಮಿತಿಯಲ್ಲಿ ಏಳೆಂಟು ಜನ ಇದ್ದರೂ ಯಾರೂ ಸಭೆಗಳಿಗೆ ಬರುತ್ತಿರಲಿಲ್ಲ. ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆದಿದ್ದಾರೆ’ ಎಂದು ಪ್ರತಿಪಾದಿಸಿದರು.

‘ಅಂಬೇಡ್ಕರ್ ಹೇಳಿರುವ ಶಿಕ್ಷಣ, ಸಂಘಟನೆ, ಹೋರಾಟದ ಜೊತೆಗೆ ರಾಜಕೀಯ ಸೇರಿಸಿಕೊಳ್ಳಬೇಕು. ನಿಮ್ಮ ನಿಮ್ಮ ಸಮುದಾಯವನ್ನು ನೀವೇ ಗಟ್ಟಿಗೊಳಿಸಬೇಕು, ಪ್ರತಿ ಊರಲ್ಲಿ ಒಬ್ಬೊಬ್ಬ ಅಂಬೇಡ್ಕರ್ ಬೆಳೆಯಬೇಕು, ಆಗ ನಮ್ಮ ಹಕ್ಕು, ನ್ಯಾಯ, ರಾಜಕೀಯ ಶಕ್ತಿ ಪಡೆಯಲು ಸಹಾಯವಾಗಲಿದೆ’ ಎಂದು ಹೇಳಿದರು. 

‘ಬುದ್ದ, ಬಸವ, ಅಂಬೇಡ್ಕರ್ ನಮಗೆ ಪ್ರೇರಣೆಯಾಗಬೇಕು, ಎಲ್ಲ ಮಹಾನ್‌ ನಾಯಕರ ವಿಚಾರಗಳನ್ನು ತಿಳಿದುಕೊಂಡು ಗಟ್ಟಿಯಾಗಬಹುದು’ ಎಂದರು. 

ಮಾಜಿ ಶಾಸಕ ಪ್ರೊ. ರಾಜು ಅಲಗೂರ, ಪ್ರಜಾಪ್ರಭುತ್ವ ಯಶಸ್ವಿಯಾಗಲು ಅಂಬೇಡ್ಕರ್ ಸಂವಿಧಾನ ಕಾರಣ. ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚಿಸಿಲ್ಲ ಎಂದು ಅಪಪ್ರಚಾರ ಮಾಡಲಾಗುತ್ತಿರುವುದು ಖಂಡನೀಯ ಎಂದರು. 

‘ಸಚಿವ ಸತೀಶ ಜಾರಕಿಹೊಳಿ ಅವರಂತ ಹಿಂದುಳಿದ ನಾಯಕರು ವಿಜಯಪುರ ಜಿಲ್ಲೆಗೆ ಅಗತ್ಯ ಇತ್ತು. ದುರಾದೃಷ್ಟ ಯಾರೊಬ್ಬರೂ ಇಲ್ಲ. ಆದರೆ, ನೆರೆಯ ಬೆಳಗಾವಿ ಜಿಲ್ಲೆಯಲ್ಲಿ ಅವರಿದ್ದಾರೆ. ನೊಂದವರು, ದಲಿತರು, ಹಿಂದುಳಿದದವರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದರು.

ಮಾಜಿ ಶಾಸಕ ಶರಣಪ್ಪ ಸುಣಗಾರ, ರಾಜ್ಯದ ಚುಕ್ಕಾಣಿ ಹಿಡಿಯುವ ಅವಕಾಶ ಸತೀಶ ಜಾರಕಿಹೊಳಿ ಅವರಿಗೆ ಲಭಿಸಲಿ ಎಂದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪ ಬಣ) ರಾಜ್ಯ ಸಂಘಟನಾ ಸಂಚಾಲಕ ರಮೇಶ ಆಸಂಗಿ ಅವರನ್ನು ಸಚಿವರು ಸನ್ಮಾನಿಸಿದರು.

ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಕಾಂಗ್ರೆಸ್ ಮುಖಂಡ ಹಮೀದ್ ಮುಶ್ರೀಫ್, ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ, ರಮೇಶ ಆಸಂಗಿ, ಸುಜಾತಾ ಚಲುವಾದಿ, ಹೆಣ್ಣೂರ ಶ್ರೀನಿವಾಸ, ಮಹಾಂತೇಶ ಬಿರಾದಾರ, ಸುರೇಶ ಗೊಣಸಗಿ, ಚಂದ್ರಶೇಖರ ಕೊಡಬಾಗಿ, ಡಾ. ಪ್ರಭುಗೌಡ ಪಾಟೀಲ ಲಿಂಗದಳ್ಳಿ, ಡಿಎಸ್‌ಎಸ್‌ ಪ್ರಮುಖರಾದ ದಶರಥ ಸಿಂಗೆ, ರೇಣುಕಾ ಮಾದರ, ಯಶೋಧಾ ಮೇಲಿನಕೇರಿ, ಶರಣು ಸಿಂದೆ, ಪ್ರಕಾಶ ಗುಡಿಮನಿ, ಲಕ್ಕಪ್ಪ ಬಡಿಗೇರ, ಪರಶುರಾಂ ದಿಂಡವಾರ, ಸುರೇಶ ನಡಗಡ್ಡಿ, ಅಶೋಕ ಚಲವಾದಿ, ವಿನಾಯಕ ಗುಣಸಾಗರ, ಅನೀಲ ಕೊಡತೆ, ಬಿ.ಎಸ್‌.ತಳವಾರ, ಸುಭದ್ರಾ ಮೇಲಿನಮನಿ, ಚಂದ್ರಕಲಾ ಮಸಳಿಕೇರಿ, ರಾಜಕುಮಾರ ಸಿಂದಗೇರಿ, ಲಕ್ಷ್ಮಣ ಹಾಲಿಹಾಳ, ಸಾಯಿನಾಥ ಬನಸೋಡೆ, ರವಿಚಂದ್ರ ಚಲವಾದಿ ಇದ್ದರು.

ದಲಿತರು ಅಲ್ಪಸಂಖ್ಯಾತರು ಹಿಂದುಳಿದವರ ಸಬಲೀಕರಣಕ್ಕಾಗಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದು ಇದರ ಸದುಪಯೋಗ ಪಡೆದು ಸದೃಢರಾಗಬೇಕು.
ಸತೀಶ ಜಾರಕಿಹೊಳಿ, ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.