ಚಡಚಣ: ಪಟ್ಟಣದಲ್ಲಿ ಮಂಗಳವಾರ ಸಂಜೆ ನಡೆದ ಎಸ್. ಬಿ. ಐ ಶಾಖೆ ದರೋಡೆ ಪ್ರಕರಣ ಸಂಬಂಧಿಸಿದಂತೆ ಎಂಟು ತಂಡಗಳನ್ನು ರಚಿಸಿ ಆರೋಪಿಗಳ ಬಂಧನಕ್ಕೆ ವ್ಯಾಪಕ ಬಲೆ ಬೀಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಬುಧವಾರ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ದರೋಡೆ ಮಂಗಳವಾರ ಸಂಜೆ 6.30 ರಿಂದ 7.30ರ ಸುಮಾರಿಗೆ ನಡೆದಿದೆ. ಬ್ಯಾಂಕ್ ವ್ಯವಹಾರ ಕ್ಲೋಜ್ ಮಾಡಿಕೊಂಡು ಇನ್ನೆನ್ನು ಸಿಬ್ಬಂದಿ ಹೋಗಬೇಕು ಎನ್ನುವಷ್ಟರಲ್ಲಿ ಅಕೌಂಟ್ ಓಪನ್ ಮಾಡುವ ನೆಪದಲ್ಲಿ ಮೂರು ಜನ ದರೋಡೆಕೋರರು ಬಂದಿದ್ದಾರೆ. ಬ್ಯಾಂಕ್ ಸಿಬ್ಬಂದಿಗೆ ನಾಡ ಪಿಸ್ತೂಲ್ ತೋರಿಸಿ, ಬೆದರಿಕೆ ಹಾಕಿದ್ದಾರೆ, ನಂತರ ಸಿಬ್ಬಂದಿಯನ್ನು ಒಂದು ಕೊಠಡಿಯಲ್ಲಿ ಕಟ್ಟಿ ಹಾಕಿ ದರೋಡೆ ಮಾಡಿದ್ದಾರೆ ಎಂದರು.
ಬ್ಯಾಂಕಿನಿಂದ ಅಂದಾಜು ₹ 21 ಕೋಟಿ ಮೌಲ್ಯದ 398 ಪ್ಯಾಕ್ (20 ಕೆ.ಜಿ) ಚಿನ್ನ, ₹1.4 ಕೋಟಿ ನಗದು ದರೋಡೆ ಮಾಡಿದ್ದಾರೆ. ಈ ಪ್ರಕರಣಕ್ಕೆ ಬಳಿಸಿರುವ ವಾಹನವೊಂದು ಮಹಾರಾಷ್ಟ್ರದ ಹುಲಜಂತಿಯಲ್ಲಿ ಪತ್ತೆಯಾಗಿದೆ. ಬಿಟ್ಟು ಹೋದ ವಾಹನದಲ್ಲಿ ಸ್ವಲ್ಪ ಪ್ರಮಾಣದ ದುಡ್ಡು, ಬಂಗಾರದ ಪ್ಯಾಕೇಟ್ ಸಿಕ್ಕಿವೆ ಎಂದು ತಿಳಿಸಿದರು.
ಪ್ರಕರಣಕ್ಕೆ ಸಂಬಂದಿಸಿದಂತೆ ಬ್ಯಾಂಕ್ ಸಿಬ್ಬಂದಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿ, ಮಾಹಿತಿ ಕಲೆಹಾಕಲಾಗಿದೆ. ದರೋಡೆಕೋರರ ಬಂಧನಕ್ಕೆ 8 ತನಿಖಾ ತಂಡಗಳ ರಚಿಸಿಲಾಗಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ಮಾಡಲಾಗುತ್ತಿದೆ ಎಂದರು.
ಬ್ಯಾಂಕ್ ಪಕ್ಕದಲ್ಲಿಯೇ ಇರುವ ಎಟಿಎಂನಿಂದ ಹಣ ಪಡೆಯಲು ಹೋಗಿದ್ದ ಗ್ರಾಹಕ ಶ್ರೀಶೈಲ, ಎಟಿಎಂನಿಂದ ಹಣ ಬರದೇ ಹೋದಲ್ಲಿ ಬ್ಯಾಂಕಿನಲ್ಲಿದ್ದವರನ್ನು ವಿಚಾರಿಸಲು ಒಳ ಹೋಗುತ್ತಿದ್ದಂತೆ ದರೋಡೆಕೋರರು ಆತನಿಗೆ ಎಚ್ಚರಿಸಿ ಸುಮ್ಮನಿರುವಂತೆ ಬೆದರಿಕೆ ಒಡ್ಡಿದ್ದಾರೆ ಎಂದು ಗ್ರಾಹಕ ಶ್ರೀಶೈಲ ಹೇಳಿಕೊಂಡಿದ್ದಾನೆ.
ದರೋಡೆ ಸಂದರ್ಭದಲ್ಲಿ ಯಾವೊಬ್ಬ ಭದ್ರತಾ ಸಿಬ್ಬಂದಿ ಇಲ್ಲದಿರುವುದು ಖಚಿತವಾಗಿದೆ. ಇಷ್ಟೊಂದು ದೊಡ್ಡ ಬ್ಯಾಂಕ್ ಇದ್ದರೂ ಭದ್ರತಾ ಸಿಬ್ಬಂದಿ ಇಲ್ಲದಿರುವುದು ಬೇಜವಾಬ್ದಾರಿ ಎತ್ತು ತೋರುತ್ತಿದ್ದರೆ, ಸಾರ್ವಜನಿಕ ವಲಯದಲ್ಲಿ ಹಲವು ಶಂಕೆಗೆ ಕಾರಣವಾಗಿದೆ.
ದರೋಡೆಯಾದ ಬ್ಯಾಂಕ್ ಮುಂಭಾಗದಲ್ಲಿ ಆಗಮಿಸಿದ ಗ್ರಾಹಕರು ತಾವು ಅಡವಿಟ್ಟಿರುವ ಚಿನ್ನದ ಆಭರಣಗಳ ಪತ್ರಗಳು ತೋರಿಸಿ ತಮ್ಮ ಅಳಲು ತೋಡಿಕೊಂಡರು.
ಎಸ್.ಬಿ.ಐ ಬ್ಯಾಂಕ್ ಲಾಕರ್‌ನಲ್ಲಿ ಚಿನ್ನದ ಆಭರಣ ಅಡ ಇಟ್ಟ ವೃದ್ಧೆ ಸುಶೀಲಾ ನಾನು ಚೈನು, ತಾಳಿ ಸರ, ನೆಕ್ಲೆಸ್ ಸೇರಿದಂತೆ ಸುಮಾರು 300 ಗ್ರಾಂ ತೂಕದಷ್ಟು ಚಿನ್ನಾಭರಣ ಇಟ್ಟಿರುವೆ. ನಿನ್ನೆ ನಡೆದ ದರೋಡೆಯಿಂದ ಆತಂಕ ಒಳಗಾಗಿದ್ದೇನೆ, ನಾನು ಲಾಕರ್ ಕೀ ತಂದಿದ್ದೀನಿ, ದಯವಿಟ್ಟು ನನ್ನ ಚಿನ್ನ ತೋರಿಸಿ’ ಎಂದು ಗೋಗರೆದರು.
ಮನೆ ಖರೀದಿಗಾಗಿ ಚಿನ್ನ ಅಡವಿಟ್ಟಿರುವ ಪತ್ರದೊಂದಿಗೆ ಆಗಮಿಸಿದ ಶಿಗಣಾಪುರದ ರೈತ ರವಿಗೌಡ ಬಿರಾದಾರ, ಅಡವಿಟ್ಟಿರುವ ಚಿನ್ನಾಭರಣಕ್ಕೆ ಯಾರು ಹೊಣೆ? ಮುಂದಿನ ಕತೆ ಏನು? ಎಂದು ಕೇಳಿದಾಗ ಅಲ್ಲಿರುವ ಸಿಬ್ಬಂದಿ ನಿಮ್ಮ ಚಿನ್ನಾಭರಣಕ್ಕೆ ಬ್ಯಾಂಕ್ ಹೊಣೆಯಿರುತ್ತದೆ. ನೀವು ಯಾವುದೇ ಆತಂಕಕ್ಕೆ ಒಳಗಾಗದಿರಿ ಎಂದು ತಿಳಿಸಿದರು.
ಇದೇ ರೀತಿ ಹಲವಾರು ಗ್ರಾಹಕರು ತಮ್ಮ ಅಳಲನ್ನು ತೋಡಿಕೊಂಡ ಘಟನೆಯೂ ನಡೆಯಿತು.
ಬ್ಯಾಂಕ್ ಕ್ಯಾಷಿಯರ್ ಭಾಗ್ಯಶ್ರೀ ಗೊಟ್ಯಾಳ ಅವರು ವ್ಯವಸ್ಥಾಪಕರು ಕರೆ ಮಾಡಿ ಕ್ಲೋಜಿಂಗ್ ಸಮಯದಲ್ಲಿ ಎಷ್ಟು ಬ್ಯಾಲೆನ್ಸ್ ಇತ್ತು ಎಂದು ಕೇಳಿದರು. ನಾನು ಕ್ಲೋಸ್ ಮಾಡಿ ಹೋಗುವ ಸಮಯದಲ್ಲಿ ಸುಮಾರು ₹1 ಕೋಟಿಗೂ ಅಧಿಕ ನಗದು ಇತ್ತು ಎಂದು ತಿಳಿಸಿದ್ದೇನೆ ಎಂದರು.
ದರೋಡೆ ಪ್ರಕರಣದ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಉತ್ತರ ವಲಯದ ಐಜಿಪಿ ಚೇತನಕುಮಾರ ಸಿಂಗ್ ರಾಠೋಡ ಘಟನಾ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ, ಘಟನೆಯ ವಿವರ ಕಲೆಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.