ವಿಜಯಪುರ: ಜಿಲ್ಲೆಯ ಚಡಚಣದಲ್ಲಿ ಮಂಗಳವಾರ ಸಂಜೆ ನಡೆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶಾಖೆಯ ದರೋಡೆ ಪ್ರಕರಣದಲ್ಲಿ ಒಟ್ಟು ₹21.4 ಕೋಟಿ ಮೌಲ್ಯದ ಚಿನ್ನಾಭರಣ, ನಗದು ದೋಚಿಕೊಂಡು ಆರೋಪಿಗಳು ಪರಾರಿಯಾಗಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಖಚಿತ ಪಡಿಸಿದ್ದಾರೆ.
ಹೊಸ ಅಕೌಂಟ್ ತೆರೆಯುವ ನೆಪದಲ್ಲಿ ಬ್ಯಾಂಕಿಗೆ ಬಂದಿದ್ದ ಮೂವರು ಆರೋಪಿಗಳು ನಾಡ ಪಿಸ್ತೂಲ್ ತೋರಿಸಿ, ಬ್ಯಾಂಕಿನ ವ್ಯವಸ್ಥಾಪಕ, ಸಿಬ್ಬಂದಿ ಮತ್ತು ಗ್ರಾಹಕರ ಕೈಕಾಲು ಕಟ್ಟಿ, ಜೀವ ಬೆದರಿಕೆ ಹಾಕಿ 20 ಕೆ.ಜಿ. ಚಿನ್ನಾಭರಣ ಹಾಗೂ ₹1.4 ಕೋಟಿ ನಗದು ದೋಚಿಕೊಂಡು ಪರಾರಿಯಾಗಿರುವುದಾಗಿ ಬ್ಯಾಂಕಿನ ವ್ಯವಸ್ಥಾಪಕ ತಾರಕೇಶ್ವರ ದೂರು ನೀಡಿದ್ದಾರೆ ಎಂದು ತಿಳಿಸಿದರು.
ಆರೋಪಿಗಳ ಪತ್ತೆಗೆ ಎಂಟು ತಂಡಗಳನ್ನು ರಚಿಸಿದ್ದು, ಕಾರ್ಯಪ್ರವೃತ್ತವಾಗಿವೆ. ಮಹಾರಾಷ್ಟ್ರದ ಹುಲಜಂತಿಯಲ್ಲಿ ದರೋಡೆಕೋರರ ಕಾರು ಹಾಗೂ ಕದ್ದ ಸ್ವಲ್ಪ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ. ಆರೋಪಿಗಳು ಮಂಗಳವೇಡೆ ಮೂಲಕ ಪಂಢರಪುರ ಮಾರ್ಗವಾಗಿ ಪರಾರಿಯಾಗಿರುವ ಸುಳಿವು ಸಿಕ್ಕಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಅವರು ಹೇಳಿದರು.
ಬೆಳಗಾವಿ ಉತ್ತರ ವಲಯ ಐಜಿಪಿ ಚೇತನ್‌ಕುಮಾರ್ ಸಿಂಗ್ ಚಡಚಣಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.