ADVERTISEMENT

ದ್ವಿತೀಯ ದರ್ಜೆ ಸಹಾಯಕ ಅಮಾನತು

ವಾಡಿ: ಆರೋಗ್ಯ ಇಲಾಖೆ ಸಿಬ್ಬಂದಿ ವೇತನ ದುರ್ಬಳಕೆ ಆರೋಪ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2020, 10:00 IST
Last Updated 28 ಫೆಬ್ರುವರಿ 2020, 10:00 IST
 ವಾಡಿಯ ಸಮುದಾಯ ಆರೋಗ್ಯ ಕೇಂದ್ರ
 ವಾಡಿಯ ಸಮುದಾಯ ಆರೋಗ್ಯ ಕೇಂದ್ರ   

ವಾಡಿ: ಆರೋಗ್ಯ ಇಲಾಖೆಯ ನೌಕರರಿಗೆ ನೀಡಬೇಕಾದ ವೇತನವನ್ನು ದ್ವಿತೀಯ ದರ್ಜೆ ಸಹಾಯಕ ಸಂತೋಷ ಕಟ್ಟೆ ದುರ್ಬಳಕೆ ಮಾಡಿಕೊಂಡು ನಾಪತ್ತೆಯಾದ ಘಟನೆ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜರುಗಿದೆ.

‘ನೌಕರರ ಬಾಕಿ ವೇತನವನ್ನುಸಂತೋಷ ಕಟ್ಟೆ ದುರುಪಯೋಗ ಮಾಡಿರುವ ಕುರಿತು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ವಾಡಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. ಈಗಾಗಲೇ ಆರೋಪಿಯನ್ನು ಅಮಾನತು ಮಾಡಲಾಗಿದೆ ಎಂದು ಡಿಎಚ್‌ಒ ತಿಳಿಸಿದ್ದಾರೆ’ ಎಂದು ಸಮುದಾಯ ಆರೋಗ್ಯ ಕೇಂದ್ರದ ಮೇಲ್ವಿಚಾರಕ ರಜಿವುಲ್ಲಾ ಖಾದ್ರಿ ತಿಳಿಸಿದ್ದಾರೆ.

ಸಂತೋಷ ಕಟ್ಟೆ ಸುಮಾರು 32 ಸಿಬ್ಬಂದಿಯ 4 ತಿಂಗಳ ವೇತನ, ವೇತನ ಹೆಚ್ಚಳದ ಬಾಕಿ ಹಣ ಒಟ್ಟು ₹5.52 ಲಕ್ಷ ತನ್ನ ಖಾತೆಗೆ ವರ್ಗಾಯಿಸಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ.

ADVERTISEMENT

ಆರೋಗ್ಯ ಇಲಾಖೆಯ ವಿವಿಧ ಸ್ತರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 32 ಜನ ನೌಕರರು ವೇತನ ಕಳೆದುಕೊಂಡು ಆತಂಕಗೊಂಡಿದ್ದಾರೆ.

ಸಕಾಲಕ್ಕೆ ವೇತನ ಬಾರದಿದ್ದಾಗ ಕೇಳಿದ ಸಿಬ್ಬಂದಿಗೆ ‘ಸರ್ಕಾರಿ ಮಟ್ಟದಲ್ಲೇ ಸಮಸ್ಯೆ ಇದ್ದು, ಅನುದಾನ ಬಂದಿಲ್ಲ’ ಎಂದು ಸಂತೋಷ ಕಟ್ಟೆ ಸುಳ್ಳು ಹೇಳಿಕೊಂಡು ಬಂದಿದ್ದಾರೆ. ಬಳಿಕ ಸಿಬ್ಬಂದಿ ಕಚೇರಿಯಲ್ಲಿ ವಿಚಾರಿಸಿದಾಗ ಅವ್ಯವಹಾರ ನಡೆದಿರುವುದು ಬಯಲಿಗೆ ಬಂದಿದೆ.

ವಿವರ: ಸಿಬ್ಬಂದಿ ವೇತನ ಹಾಗೂ ವೇತನ ಹೆಚ್ಚಳದ ಬಾಕಿ ಹಣ ನೌಕರರಿಗೆ ನೀಡಲು ಸರ್ಕಾರದಿಂದ ಮಂಜೂರಾಗಿರುವ ಹಣವನ್ನು ಸಂತೋಷ್ ಕಟ್ಟೆ ವ್ಯವಸ್ಥಿತವಾಗಿ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಸಿಬ್ಬಂದಿ ವೇತನ ಹಂಚಿಕೆ ವಿವರವನ್ನು ಚಿತ್ತಾಪುರಖಜಾನೆ–1ಕ್ಕೆ ಸಲ್ಲಿಸಿ ಹಣ ಮಂಜೂರು ಮಾಡಿಸಿಕೊಳ್ಳಲಾಗಿದೆ. ಮಂಜೂರಾದ ಹಣವನ್ನು ಸಮುದಾಯ ಆರೋಗ್ಯ ಕೇಂದ್ರದ ಮೇಲ್ವಿಚಾರಕರ ಸಹಿ ಪಡೆದು ಚೆಕ್ ಮೂಲಕ ಸಿಬ್ಬಂದಿ ಖಾತೆಗೆ ವರ್ಗಾಯಿಸಬೇಕು. ಆದರೆ ಸಂತೋಷ್ ಕಟ್ಟೆ ಆರೋಗ್ಯ ಕೇಂದ್ರದ ಮುಖ್ಯಸ್ಥ ರಜಿವುಲ್ಲಾ ಖಾದ್ರಿ ಅವರ ಸಹಿಯನ್ನೇ ಪೋರ್ಜರಿ ಮಾಡಿ ಚೆಕ್‌ಗಳನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ನಗದು ಮಾಡಿಕೊಂಡಿದ್ದಾರೆ. ಆ ಮೂಲಕ ನೌಕರರಿಗೂ ಇಲಾಖೆ ಮುಖ್ಯಸ್ಥರಿಗೂ ವಂಚನೆ ಮಾಡಿದ್ದಾರೆ ಎಂದು ದೂರಲಾಗಿದೆ. ಪ್ರಕರಣ ಬೆಳಕಿಗೆ ಬರುತ್ತಲೇ ಆರೋಪಿ ಕಣ್ಮರೆಯಾಗಿದ್ದಾನೆ.

ಆರೋಪಿಯನ್ನು ಶೀಘ್ರ ಪತ್ತೆ ಹಚ್ಚಿ ನಮಗೆ ಸಿಗಬೇಕಾದ ಹಣವನ್ನು ದೊರಕಿಸಿಕೊಡಬೇಕು. ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡಬೇಕು ಎಂದು ಆರೋಗ್ಯ ಇಲಾಖೆ ನೌಕರರು ಜಿಲ್ಲಾ ಆರೋಗ್ಯ ಅಧಿಕಾರಿ ಹಾಗೂ ಕೇಂದ್ರದ ಮುಖ್ಯಸ್ಥ ರಜಿವುಲ್ಲಾ ಖಾದ್ರಿ ಅವರನ್ನು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.