ವಿಜಯಪುರ:ಅಶ್ವಾರೂಢನಾಗಿ, ಖಡ್ಗಧಾರಿಯಾಗಿ, ಸ್ವಾಭಿಮಾನದ ಪ್ರತೀಕದಂತಿರುವ ಛತ್ರಪತಿ ಶಿವಾಜಿ ಮಹಾರಾಜರ ಪಂಚಲೋಹದ ಮೂರ್ತಿ ಆಕರ್ಷಣೆಯ ಕೇಂದ್ರಬಿಂದುವಾಗಿದೆ.
ವಿಜಯಪುರದ ಪ್ರಮುಖ ರಸ್ತೆಯ ಮಧ್ಯದಲ್ಲೇ ಶಿವಾಜಿ ವೃತ್ತವಿದೆ. ಇಲ್ಲಿ 11 ಅಡಿ ಎತ್ತರದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಪ್ರತಿಷ್ಠಾಪನೆಗೊಂಡಿದ್ದು, ವಿಜಯಪುರಿಗರ ಹೆಮ್ಮೆಯ ಸಂಕೇತವಾಗಿದೆ.
ಶಿವಾಜಿ ಮಹಾರಾಜರು ತಮ್ಮ ಬಾಲ್ಯವನ್ನು ವಿಜಯಪುರದಲ್ಲೇ ಕಳೆದಿದ್ದರು ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ನಗರವೂ ಸೇರಿದಂತೆ ಜಿಲ್ಲೆಯಲ್ಲಿರುವ ಮರಾಠ ಸಮಾಜ ಛತ್ರಪತಿ ಶಿವಾಜಿ ಮಹಾರಾಜರ ಹೆಸರಿನಲ್ಲಿ ವೃತ್ತ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಲ ವರ್ಷ ಒಗ್ಗಟ್ಟಿನ ಹೋರಾಟ ನಡೆಸಿದ ಫಲವಾಗಿ 1974ರಲ್ಲಿ ಶಿವಾಜಿ ಚೌಕ್ ಸ್ಥಾಪನೆಗೊಂಡಿತು. ಆಗಿನ ಸಚಿವ ಎಂ.ವೈ.ಘೋರ್ಪಡೆ ಈ ವೃತ್ತಕ್ಕೆ ಚಾಲನೆ ನೀಡಿದ್ದರು.
ವೃತ್ತ ನಿರ್ಮಾಣದ ಬಳಿಕ ಅಲ್ಲಿ ಶಿವಾಜಿಯ ಪ್ರತಿಮೆ ಪ್ರತಿಷ್ಠಾಪನೆಗೆ 28 ವರ್ಷ ಉರುಳಬೇಕಾಯಿತು. ಇದಕ್ಕಾಗಿ ಮರಾಠ ಸಮಾಜ ಶಿವಾಜಿರಾವ್ ಕದಂ ನೇತೃತ್ವದಲ್ಲಿ ಹಲ ಹೋರಾಟ, ನಿರಂತರ ಒತ್ತಡ ಹಾಕಿತು.
ಮರಾಠರ ಒತ್ತಡ ಹೆಚ್ಚಿದಾಗ ಎಸ್.ಎಂ.ಕೃಷ್ಣ ನೇತೃತ್ವದ ಕರ್ನಾಟಕ ಸರ್ಕಾರ ₹ 5 ಲಕ್ಷ, ವಿಲಾಸ್‌ರಾವ್ ದೇಶಮುಖ್ ನೇತೃತ್ವದ ನೆರೆಯ ಮಹಾರಾಷ್ಟ್ರ ಸರ್ಕಾರ ಶಿವಾಜಿ ಮೂರ್ತಿ ನಿರ್ಮಾಣಕ್ಕಾಗಿ ₹ 5 ಲಕ್ಷ ಅನುದಾನ ಬಿಡುಗಡೆ ಮಾಡಿತು.
ಮುಂಬೈನ ಸಾಗರ್ ಆರ್ಟ್ಸ್‌ನ ಕಲಾವಿದ ಸಾರಂಗ್ ಶಿವಾಜಿಯ ಸುಂದರ ಪಂಚಲೋಹದ ಪ್ರತಿಮೆ ನಿರ್ಮಿಸಿದರು. ಈ ಮೂರ್ತಿಯನ್ನು ವಿಜಯಪುರದ ಐತಿಹಾಸಿಕ ಭೂತನಾಳ ಕೆರೆಯಿಂದ ಸಿದ್ಧೇಶ್ವರ ದೇಗುಲ, ದೇಗುಲದಿಂದ ಶಿವಾಜಿ ಚೌಕ್‌ವರೆಗೆ ಭವ್ಯ ಮೆರವಣಿಗೆ, ಬೈಕ್ ಜಾಥಾದೊಂದಿಗೆ ತಂದು ಪ್ರತಿಷ್ಠಾಪನೆ ಮಾಡಲಾಗಿತ್ತು.
ಬಸನಗೌಡ ಪಾಟೀಲ ಯತ್ನಾಳ ಕೇಂದ್ರ ಸಚಿವರಿದ್ದ ಸಂದರ್ಭ, ಮರಾಠ ಸಮಾಜದ ಆಗ್ರಹದ ಮೇರೆಗೆ ಮೂರ್ತಿ ಅನಾವರಣ ಸಮಾರಂಭ ಆಯೋಜನೆಗೊಂದಿತ್ತು. 2002ರ ಸೆ.2ರಂದು ಆಗಿನ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಶಿವಾಜಿ ಪ್ರತಿಮೆ ಅನಾವರಣಗೊಳಿಸಿದ್ದರು.
ಈ ಸಮಾರಂಭಕ್ಕೆ ಆಗ ಕೇಂದ್ರ ಸಚಿವರಾಗಿದ್ದ ಸುಷ್ಮಾ ಸ್ವರಾಜ್, ಎಚ್.ಎನ್.ಅನಂತ್‌ಕುಮಾರ್, ಸ್ಥಳೀಯ ಮುಖಂಡರಾದ ಎಂ.ಎಲ್.ಉಸ್ತಾದ್, ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ವಿಜಾಪುರ ನಗರಸಭೆಯ ಅಧ್ಯಕ್ಷ ಗೂಳಪ್ಪ ಶಟಗಾರ ಸಾಕ್ಷಿಯಾಗಿದ್ದರು ಎಂದು ವಿಜಯಪುರ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯ, ಮರಾಠ ಸಮಾಜದ ಮುಖಂಡ ರಾಹುಲ ಜಾಧವ ‘ಪ್ರಜಾವಾಣಿ’ಗೆ ವೃತ್ತದ ವೃತ್ತಾಂತ ವಿವರಿಸಿದರು.
ಅಪ್ಪಾಸಾಹೇಬ ಪಟ್ಟಣಶೆಟ್ಟಿ ವಿಜಯಪುರ ಶಾಸಕರಾಗಿದ್ದ ಸಂದರ್ಭ, ₹ 5 ಲಕ್ಷ ವೆಚ್ಚದಲ್ಲಿ 2007ರಲ್ಲಿ ವೃತ್ತದ ಸೌಂದರ್ಯೀಕರಣ ಕಾಮಗಾರಿ ನಡೆಸಿ, ಅಂದ ಹೆಚ್ಚಿಸಲಾಗಿತ್ತು ಎಂದು ಅವರು ಹೇಳಿದರು.
ವಿಜಯಪುರ ಗಜಾನನ ಮಹಾಮಂಡಲದ ಗಣೇಶೋತ್ಸವದ ಗಣಪತಿ ಮೂರ್ತಿ ಪ್ರತಿ ವರ್ಷವೂ ಪ್ರತಿಷ್ಠಾಪನೆಗೊಳ್ಳುವುದು ಇದೇ ವೃತ್ತದ ಸನಿಹದಲ್ಲಿ. ಶಿವಾಜಿ ಜಯಂತಿ ಸೇರಿದಂತೆ ಮರಾಠರ ಹಬ್ಬ, ಜಾತ್ರೆ, ಉತ್ಸವ ಇಲ್ಲಿಂದಲೇ ಸಂಘಟನೆಗೊಳ್ಳುವುದು ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.