
ಸಿಂದಗಿ: ‘ಶಿವಯೋಗಿ ಶಿವಾಚಾರ್ಯ’ ರಾಷ್ಟ್ರೀಯ ಪ್ರಶಸ್ತಿ ₹1 ಲಕ್ಷ ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ’ ಎಂದು ಸಾರಂಗಮಠದ ಪೀಠಾಧ್ಯಕ್ಷ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಸಾರಂಗಮಠದ ಸಭಾಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೀರಶೈವ ಧರ್ಮಗ್ರಂಥ ‘ಸಿದ್ಧಾಂತ ಶಿಖಾಮಣಿ’ ಕರ್ತೃ ಸಾಲೋಟಗಿ ಶಿವಯೋಗಿ ಶಿವವಾಚಾರ್ಯರ ಸ್ಮರಣೆಗಾಗಿ ಸಾರಂಗಮಠ-ಗಚ್ಚಿನಮಠದಿಂದ ಪ್ರತಿ ವರ್ಷ ಕೊಡಮಾಡುವ ‘ಶಿವಯೋಗಿ ಶಿವಾಚಾರ್ಯ’ ರಾಷ್ಟ್ರೀಯ ಪ್ರಶಸ್ತಿಯನ್ನು ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಎಂ. ಶಿವಕುಮಾರಸ್ವಾಮಿ ಅವರಿಗೆ ಪ್ರದಾನ ಮಾಡಿ ಅವರು ಮಾತನಾಡಿದರು.
ಮಕ್ಕಳ ಸಾಹಿತಿ ಹ.ಮ. ಪೂಜಾರ ಮಾತನಾಡಿ, ‘ಶಿಕ್ಷಕರು ಸೃಜನಶೀಲರಾಗಿರಬೇಕು. ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಪ್ರಚುರಪಡಿಸಬೇಕು’ ಎಂದು ಸಲಹೆ ನೀಡಿದರು.
ಕೆರೂರ ಚರಂತಿಮಠದ ಶಿವಕುಮಾರ ಶ್ರೀ ಮಾತನಾಡಿ, ‘ವೀರಶೈವ ಮತಸ್ಥಾಪಕರನ್ನು ಮರೆಯಲಾಗುತ್ತಿರುವುದು ಅತ್ಯಂತ ವಿಷಾದಕರ. 12ನೆಯ ಶತಮಾನದ ಬಸವಾದಿ ಶಿವಶರಣರು ಮತ್ತು ಪಂಚಪೀಠಾಧೀಶ್ವರರ ಮಧ್ಯೆ ಅವಿನಾಭಾವ ಸಂಬಂಧ ಇದ್ದಾಗ್ಯೂ ಬುದ್ಧಿಜೀವಿಗಳು ಅವಿನಾಭಾವ ಸಂಬಂಧ ಕಳಚುವ ದುಸ್ಸಾಹಸ ಮಾಡುತ್ತಿದ್ದಾರೆ’ ಎಂದು ತಿಳಿಸಿದರು.
ಪ್ರಥಮ ವಚನಕಾರ ದೇವರದಾಸಿಮಯ್ಯ, ವೀರವೀರಾಗಿಣಿ ಅಕ್ಕಮಹಾದೇವಿ, ಬಸವಣ್ಣನವರು ಅವರಿಗೆಲ್ಲ ಲಿಂಗದೀಕ್ಷೆ ನೀಡಿದವರು ವೀರಶೈವ ಧರ್ಮ ಮತಸ್ಥಾಪಕರಾದ ಪಂಚಾಚಾರ್ಯರ ಪರಂಪರೆಯಲ್ಲಿ ಬರುವ ಶಿವಾಚಾರ್ಯರು ಎಂದು ಹೇಳಿದರು.
ಮಕ್ಕಳ ಸಾಹಿತಿ, ಪದ್ಮರಾಜ ವಿದ್ಯಾವರ್ಧಕ ಸಂಸ್ಥೆ ಸಾರಂಗಮಠದ ನಿರ್ದೇಶಕ ಹ.ಮ.ಪೂಜಾರ ಅವರಿಗೆ ಅಭಿನಂದನಾ ಸಮಾರಂಭ ಜರುಗಿತು. ಕೆರೂರ ಚರಂತಿಮಠದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ವಿರಚಿತ ವೀರಶೈವ ಪರಂಪರೆ ಗ್ರಂಥವನ್ನು ಶಾಸಕ ಅಶೋಕ ಮನಗೂಳಿ ಬಿಡುಗಡೆಗೊಳಿಸಿದರು.
ಸಾರಂಗಮಠದ ಉತ್ತರಾಧಿಕಾರಿ ವಿಶ್ವಪ್ರಭುದೇವ ಶಿವಾಚಾರ್ಯರು, ಎಮ್ಮಿಗನೂರ ವಾಮದೇವ ಮಹಾಂತ ಶಿವಾಚಾರ್ಯರು, ಕೊಟ್ಟೂರು ಸಿದ್ಧಲಿಂಗ ಶಿವಾಚಾರ್ಯರು, ಸಿಂದಗಿ ಊರಿನ ಹಿರಿಯಮಠದ ಶಿವಾನಂದ ಶ್ರೀಗಳು, ಶಾಸಕ ಅಶೋಕ ಮನಗೂಳಿ ಇದ್ದರು. ಪ್ರೊ.ರವಿ ಗೋಲಾ, ಪೂಜಾ ಹಿರೇಮಠ ನಿರ್ವಹಣೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.