ದೇವರಹಿಪ್ಪರಗಿ: ಕೋರವಾರ ಗ್ರಾಮದ ಶ್ರೀಮಹಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ಜರುಗಿದ ಶಿವಯೋಗಿ ಸಿದ್ಧರಾಮೇಶ್ವರ ಪುರಾಣ ಸಂಪನ್ನ ಕಾರ್ಯಕ್ರಮದ ಅಂಗವಾಗಿ ಪಲ್ಲಕ್ಕಿಯಲ್ಲಿ ಮಹಾಂತೇಶ್ವರ ಪ್ರತಿಮೆ ಹಾಗೂ ಸಿದ್ಧರಾಮೇಶ್ವರರ ಭಾವಚಿತ್ರದ ಮೆರವಣಿಗೆ ಜರುಗಿತು.
ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಆರಂಭಗೊಂಡ ಮೆರವಣಿಗೆಯಲ್ಲಿ ನೂರಾರು ಮುತೈದೆಯರು ಕುಂಭ, ಕಳಸದೊಂದಿಗೆ ಪಾಲ್ಗೊಂಡರು. ಮೆರವಣಿಗೆ ಮಠದಿಂದ ಹೊರಟು ಗ್ರಾಮದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ನಂತರ ಮಠಕ್ಕೆ ಮರಳಿತು. ಡೊಳ್ಳು, ಸಕಲ ವಾದ್ಯಗಳು ಮೆರಗು ತಂದವು. ಮೆರವಣಿಗೆಯ ನೇತೃತ್ವವನ್ನು ಸ್ಥಳೀಯ ಸಂಸ್ಥಾನಹಿರೇಮಠದ ಬಸವಲಿಂಗ ಸ್ವಾಮೀಜಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ದೇವೂರಿನ ಮರುಳಾರಾಧ್ಯ ಸ್ವಾಮೀಜಿ, ಮುಖೇಡದ ವಿರುಪಾಕ್ಷ ಸ್ವಾಮೀಜಿ, ಕೊಕಟನೂರಿನ ಮಡಿವಾಳೇಶ್ವರ ಸ್ವಾಮೀಜಿ, ಆಲಮೇಲ ಸಂಸ್ಥಾನ ಹಿರೇಮಠದ ಚಂದ್ರಶೇಖರ ಸ್ವಾಮೀಜಿ, ನೀರಲ ಶಿವಬಸವ ಸ್ವಾಮೀಜಿ, ಕೂಕನೂರ ಚನ್ನಮಲ್ಲ ಸ್ವಾಮೀಜಿ, ದೇವಣಿ ಸಿದ್ಧಲಿಂಗ ಸ್ವಾಮೀಜಿ, ಹಿರೇಆಸಂಗಿಯ ವೀರಬಸವದೇವರು ಸಹಿತ ವಿವಿಧ ಮಠಗಳ ಮಠಾಧೀಶರು ಸಾನಿಧ್ಯ ವಹಿಸಿದ್ದರು.
ಚನ್ನಬಸವ ಶಿವಾಚಾರ್ಯರ 37ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಅವಿರತವಾಗಿ 41 ದಿನಗಳ ಕಾಲ ಜರುಗಿದ ಶಿವಯೋಗಿ ಸಿದ್ಧರಾಮ ಮಹಾಪುರಾಣ ಮಂಗಲ ಕಾರ್ಯಕ್ರಮದ ಕೊನೆಯ ದಿನ ಜರುಗಿದ ಪಲ್ಲಕ್ಕಿ ಉತ್ಸವ ಹಾಗೂ ಮೆರವಣಿಗೆಯಲ್ಲಿ ಗ್ರಾಮದ ಮಹಿಳೆಯರು, ಮಕ್ಕಳು, ಪ್ರಮುಖರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.