ಸೋಲಾಪುರ: ಹಬ್ಬಗಳಿಂದ ತುಂಬಿರುವ ಪವಿತ್ರ ಮತ್ತು ಧಾರ್ಮಿಕವಾಗಿ ಮಹತ್ವದ ಶ್ರಾವಣ ಮಾಸ ಜುಲೈ 25 ರಿಂದ ಪ್ರಾರಂಭವಾಗುತ್ತಿದೆ. ಪೂಜೆ, ಪಠಣ, ಧ್ಯಾನ, ಶಿವಪುರಾಣ ಕಥೆಗಳು, ಪ್ರವಚನ, ಭಜನೆ, ಸತ್ಸಂಗಗಳು ಮುಖ್ಯವಾಗಿವೆ.
ಕರ್ನಾಟಕ, ತೆಲಂಗಾಣ, ಹೈದರಾಬಾದ್, ಪುಣೆ, ಮುಂಬೈ, ಮರಾಠವಾಡಾ ಹಾಗೂ ಅನೇಕ ಭಾಗಗಳಿಂದ ಸಾವಿರಾರು ಭಕ್ತರು ಗ್ರಾಮ ದೇವತೆ ಶಿವಯೋಗಿ ಸಿದ್ಧೇಶ್ವರ ಮಂದಿರಕ್ಕೆ ದರ್ಶನಕ್ಕಾಗಿ ಬರುತ್ತಾರೆ. ಪ್ರತಿ ಸೋಮವಾರ ಲಕ್ಷಾಂತರ ಭಕ್ತರು ದರ್ಶನ ಪಡೆಯಲು ಬರುವ ನಿರೀಕ್ಷೆ ಇದೆ.
ಧಾರ್ಮಿಕ ವಿಧಿ ವಿಧಾನ: ಬೆಳಿಗ್ಗೆ 5-5:30 ಗಂಟೆಯವರೆಗೆ ಕಾಕಡ ಆರತಿ.7: 30 -9:00 ಗಂಟೆವರೆಗೆ ಹಾಗೂ ರಾತ್ರಿ 8 ಗಂಟೆಯಿಂದ 9:30 ಗಂಟೆಯವರೆಗೆ ಶಿವಯೋಗ ಸಮಾಧಿಗೆ ರುದ್ರಾಭಿಷೇಕ, ರುದ್ರಪಠಣ ,108 ಸಲ ಓಂ ನಮಃ ಶಿವಾಯ ಪಠಣ, ಆರತಿ ಹಾಗೂ ಪ್ರಸಾದ. ಬೆಳಿಗ್ಗೆ 8:30 ಗಂಟೆಯಿಂದ 10:30 ಗಂಟೆಯವರೆಗೆ ದೇವಸ್ಥಾನದಲ್ಲಿ ರುದ್ರಾಭಿಷೇಕ, ರುದ್ರ ಪಠಣ, ಓಂ ನಮಃ ಶಿವಾಯ ಪಠಣ, ಆರತಿ . ರಾತ್ರಿ 9:30 ಗಂಟೆಯಿಂದ 10:30 ಗಂಟೆಯವರೆಗೆ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವ ಹಾಗೂ ಆರತಿ ಇರಲಿದೆ. ಭಕ್ತರು ದರ್ಶನ ಪಡೆಯಲು ಅನುಕೂಲವಾಗುವಂತೆ ಸಭಾ ಮಂಟಪದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಬೆಳಿಗ್ಗೆ 4 ಗಂಟೆಯಿಂದ ರಾತ್ರಿ 11 ರವರೆಗೆ ದೇವಸ್ಥಾನದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತವೆ.
ದರ್ಶನಕ್ಕಾಗಿ ಬರುವ ಭಕ್ತರ ವಸತಿಗಾಗಿ ಯಾತ್ರಿ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿದೆ. ಯಾತ್ರಿ ನಿವಾಸದಲ್ಲಿ ಒಟ್ಟು 20 ಕೊಠಡಿಗಳಿವೆ. ಸಾಮೂಹಿಕವಾಗಿ ಇರಲು 3 ದೊಡ್ಡ ಕೊಠಡಿಗಳಿವೆ ಹಾಗೂ ಹವಾ ನಿಯಂತ್ರಿತ ಕೊಠಡಿಗಳ ಸೌಲಭ್ಯವಿದೆ. ಹವಾ ನಿಯಂತ್ರಿತ ಕೊಠಡಿಗಳಿಗೆ ಪ್ರತಿದಿನ ₹800 ಶುಲ್ಕ ಪಾವತಿಸಬೇಕು. ಬುಕಿಂಗ್ ಪ್ರಾರಂಭವಾಗಿದೆ.
ಹೋಮ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ, ವಸತಿಗಾಗಿ ಯಾತ್ರಿ ನಿವಾಸದಲ್ಲಿ ಸಾಮೂಹಿಕ ಹಾಗೂ ಹವಾ ನಿಯಂತ್ರಿತ ಕೊಠಡಿಗಳು, ಭಕ್ತರ ಸಾಮಾನುಗಳು ಇಡುವ ಸಲುವಾಗಿ ಲಾಕರ್ ರೂಮ್, 4 ಸಾವಿರ ಭಕ್ತರಿಗೆ ಪ್ರತಿದಿನ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಸಿದ್ಧೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಧರ್ಮರಾಜ ಕಾಡಾದಿ ತಿಳಿಸಿದ್ದಾರೆ.
ವಿಶೇಷ ದಾಸೋಹ
ಪ್ರತಿ ಸೋಮವಾರ ದರ್ಶನಕ್ಕೆ ಬರುವ ಭಕ್ತರಿಗೆ ಸಾಬುದಾನಿ ಖಿಚಡಿ ಭಗರ ಸಿಹಿಗೆಣಸು ಆಹಾರ ಪದಾರ್ಥಗಳನ್ನು ಅನ್ನ ಛತ್ರದಲ್ಲಿ ನೀಡಲಾಗುವುದು. ಬೆಳಿಗ್ಗೆ 11 ರಿಂದ 2 ಗಂಟೆವರೆಗೆ ಹಾಗೂ ರಾತ್ರಿ 7.30 ಇಂದ 9:30ವರೆಗೆ ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ.
ಬೆಳಿಗ್ಗೆ 9:30 ಗಂಟೆಗೆ ಯೋಗ ಸಮಾಧಿ ಹತ್ತಿರ ಆರತಿಯಾದ ನಂತರ ಶಿರಾ ಬುಂದೆ ಉಂಡಿ ಬರ್ಫಿಗಳನ್ನು ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ. ಶ್ರಾವಣ ಮಾಸದಲ್ಲಿ ಪ್ರತಿದಿನ 4ರಿಂದ 5 ಸಾವಿರ ಭಕ್ತರು ಬರುವ ನಿರೀಕ್ಷೆ ಇದೆ ಎಂದು ಸಿದ್ದೇಶ್ವರ ದೇವಸ್ಥಾನ ಸಮಿತಿಯ ಅನ್ನದಾಸೋಹ ವಿಭಾಗದ ಅಧ್ಯಕ್ಷ ವಿಶ್ವನಾಥ ಲಬ್ಬಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.