ADVERTISEMENT

‘ಬೇಡ’ ದೀಕ್ಷೆ ತೊಟ್ಟಿದ್ದ ಸಿದ್ದೇಶ್ವರ ಶ್ರೀ: ಕರ್ಜಗಿ

ಎಸಿಟಿ-ಶಾರದಾ ಪಬ್ಲಿಕ್ ಶಾಲೆ ಕಲಾ ಸೌರಭ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 13:14 IST
Last Updated 23 ಜನವರಿ 2023, 13:14 IST
ವಿಜಯಪುರ ನಗರ ಎಸಿಟಿ-ಶಾರದಾ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಕಲಾ ಸೌರಭವನ್ನು ಭಾನುವಾರ ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ ಉದ್ಘಾಟಿಸಿದರು
ವಿಜಯಪುರ ನಗರ ಎಸಿಟಿ-ಶಾರದಾ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಕಲಾ ಸೌರಭವನ್ನು ಭಾನುವಾರ ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ ಉದ್ಘಾಟಿಸಿದರು   

ವಿಜಯಪುರ: ಸಂತತ್ವ ಎಂಬುದು ಎಲ್ಲ ಕಡೆ ಇದು ಗಟ್ಟಿಯಾಗಿ ಉಳಿದಿಲ್ಲ, ಎಲ್ಲರಿಗೂ ಬೇಕುಗಳಿವೆ. ಆದರೆ, ಸಿದ್ದೇಶ್ವರ ಶ್ರೀಗಳೊಬ್ಬರೇ ನನಗೆ ಯಾವುದೂ ಬೇಕಿಲ್ಲ ಎಂದು ನಿರಾಕರಿಸಿ ‘ಬೇಡ’ ದೀಕ್ಷೆ ತೊಟ್ಟಿದ್ದರು ಎಂದು ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ ಹೇಳಿದರು.

ನಗರ ಎಸಿಟಿ-ಶಾರದಾ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಕಲಾ ಸೌರಭವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಭಕ್ತರು ದೊಡ್ಡ ಮಠ ಕಟ್ಟೊಣ ಎಂದರು, ಆದರೇ ಸಿದ್ದೇಶ್ವರ ಶ್ರೀಗಳು ಬೇಡ ಎಂದರು. ಮಹಲ್‌ ಕಟ್ಟೋಣ ಎಂದರು, ಬೇಡ ಎಂದರು. ಕಾರು ಕೊಡುತ್ತೇವೆ ಎಂದರು, ಬೇಡ ಎಂದರು, ನಿಮ್ಮ ಆಯುಷ್ಯ ಹೆಚ್ಚಳಕ್ಕೆ ಔಷಧ ಕೊಡುತ್ತೇವೆ ಎಂದು ಪ್ರಧಾನಿ ಹೇಳಿದರು, ಅದಕ್ಕೂ ಬೇಡ ಎಂದರು. ನಿಮ್ಮ ನೆನಪಿಗೆ ಒಂದು ಸ್ಮಾರಕ ಮಾಡೋಣ ಅಂದರೂ ಬೇಡ ಎಂದು ಬಯಲಲ್ಲಿ ಬಯಲಾಗಿ, ಮಹಾಂತರಾದರು. ಪ್ರತಿಯೊಬ್ಬರ ಹೃದಯಲ್ಲಿ ಉಳಿದ್ದಾರೆ ಎಂದರು.

ADVERTISEMENT

ವಿಜಯಪುರ ನೆಲದ ಪುಣ್ಯ ಮತ್ತು ಈ ಮಣ್ಣಿನ ಕಣ ಕಣಗಳ ಪ್ರಾರ್ಥನೆಯಿಂದ ಸಿದ್ದೇಶ್ವರ ಸ್ವಾಮೀಜಿ ಎಂಬ ಬಹುದೊಡ್ಡ ಚೇತನ ಪವಾಡವನ್ನು ಸೃಷ್ಟಿಸಿ, ಜನ ಮಾನಸದಲ್ಲಿ ಉಳಿದಿದ್ದಾರೆ ಎಂದರು.

ರಾಮಕೃಷ್ಣ ಪರಮಹಂಸ, ರಮಣ ಮಹರ್ಷಿಗಳ ಬಗ್ಗೆ ಜಗತ್ತು ಈಗ ಮಾತನಾಡುತ್ತಿರುವಂತೆ ಮುಂದೊಂದು ದಿನ ಸಿದ್ದೇಶ್ವರ ಶ್ರೀಗಳ ಬಗ್ಗೆ ಜನ ಪವಾಡ ಪುರುಷ ಎಂದು ಮಾತನಾಡಿಕೊಳ್ಳುವುದು ನಿಶ್ಚಿತ ಎಂದು ಹೇಳಿದರು.

ಚಿತ್ರದುರ್ಗದ ವನಶ್ರೀ ಗಾಣಿಗ ಪೀಠದ ಬಸವಕುಮಾರ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ವಚನ ಸಾಹಿತ್ಯ, ದಾಸ ಸಾಹಿತ್ಯ, ನೀತಿಕತೆಗಳ ಸಾಹಿತ್ಯವನ್ನು ಓದಿಸಬೇಕು ಎಂದರು.

ರಾಗ, ದ್ವೇಶಗಳಿಂದ ಜಗತ್ತು ಉದ್ಧಾರವಾಗಿಲ್ಲ; ಹೊರತಾಗಿ ನಾಶವಾಗುತ್ತಿದೆ, ಅಸೂಯೆ ಯಾರನ್ನೂ ಉಳಿಸುವುದಿಲ್ಲ ಆದ್ದರಿಂದ ಮಕ್ಕಳಿಗೆ ಸಂಸ್ಕಾರವನ್ನು ಕಲಿಸಿಕೊಟ್ಟು ಪೂಜ್ಯ ಶ್ರೀ ಸಿದ್ಧೇಶವರ ಯೋಗಿಗಳ ತತ್ವವನ್ನು ಮನವರಿಕೆ ಮಾಡಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್. ಡಿ. ಆನಂದಕುಮಾರ ಮಾತನಾಡಿ, ಮಕ್ಕಳಿಗೆ ತಿಳಿವಳಿಕೆ, ಮಾರ್ಗದರ್ಶನ ಅತ್ಯಗತ್ಯ ಮತ್ತು ಅವರಲ್ಲಿ ಶಿಸ್ತು, ಸಂಸ್ಕಾರ, ಸಂಸ್ಕೃತಿಯ ಅರಿವನ್ನು ಮೂಡಿಸಿ ಅವರು ತಪ್ಪು ದಾರಿಯಲ್ಲಿ ನಡೆಯದಂತೆ ನೋಡಿಕೊಳ್ಳಬೇಕು ಎಂದರು.

ಜ್ಞಾನಯೋಗಾಶ್ರಮದ ಶಿವಪ್ರಸಾದ ಸ್ವಾಮೀಜಿ ಮಾತನಾಡಿ, ಬದುಕು ವೈಭವದಿಂದ ಕೂಡಬೇಕಾದರೆ ಸತ್ವಯುಕ್ತ ಆಹಾರವನ್ನು ಸೇವಿಸಬೇಕು, ಮಗು ಸಂಸ್ಕಾರವಂತಾಗಬೇಕಾದರೆ ಅದಕ್ಕೆ ತಾಯಿ ಸಂಸ್ಕಾರ ಅಗತ್ಯವಾಗಿದೆ ಎಂದರು.

ಶಾಲೆಯ ನಾಟ್ಯಕಲಾ ಶಿಕ್ಷಕರಾದ ಮುತ್ತುರಾಜ ಸಂಕಣ್ಣನವರ ಕತೆ ಮತ್ತು ನಿರ್ದೇಶನದಲ್ಲಿ ಮೂಡಿಬಂದ ಸ್ತ್ರೀಶಕ್ತಿ ನಾಟ್ಯ ರೂಪಕ ಮತ್ತು ಸಿದ್ಧೇಶವರ ಸ್ವಾಮೀಜಿಯವರ ಜೀವನ ಚರಿತ್ರೆಯನ್ನು ಪ್ರತಿಬಿಂಬಿಸುವ ಜ್ಞಾನಯೋಗಿ ನಾಟ್ಯ ರೂಪಕ ಪ್ರದರ್ಶಿಸಿದರು. ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಸಂಸ್ಥೆಯ ಅಧ್ಯಕ್ಷ ಸಂ. ಗು. ಸಜ್ಜನ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್. ಡಿ. ಆನಂದಕುಮಾರ್‌, ಸಜ್ಜನ ಗಾಣಿಗರ ಸೇವಾ ಸಂಘದ ಪದಾಧಿಕಾರಿಗಳಾದ ಎಂ.ಎಂ. ಸಜ್ಜನ,ಎ.ಜಿ. ಸಜ್ಜನ, ಡಾ.ಆರ್.ಎನ್. ಸಜ್ಜನ, ಎ.ಎಸ್. ಸಜ್ಜನ, ಎಸ್.ಎಸ್. ಸಜ್ಜನ ಮತ್ತು ಪ್ರಾಚಾರ್ಯರಾದ ಜಿಮೇಶ ಪೌಲ್ ಹಾಗೂ ಉಪಪ್ರಾಚಾರ್ಯ ಮಹೇಂದ್ರ ಎಂ.ಎನ್. ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.