ADVERTISEMENT

ಸಿದ್ದೇಶ್ವರ ಬ್ಯಾಂಕ್‌ ಚುನಾವಣೆ; ರಂಗೇರಿದ ಪ್ರಚಾರ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 12:57 IST
Last Updated 5 ನವೆಂಬರ್ 2020, 12:57 IST
ವಿಜಯಪುರ ನಗರದ ಶ್ರೀ ಸಿದ್ದೇಶ್ವರ ಬ್ಯಾಂಕಿನ ಹಾಲಿ ಅಧ್ಯಕ್ಷ ಹರ್ಷಗೌಡ ಪಾಟೀಲ ನೇತೃತ್ವದಲ್ಲಿ ಗುರುವಾರ ಇಂಡಿ ಪಟ್ಟಣದಲ್ಲಿ ಪ್ರಚಾರ ನಡೆಸಲಾಯಿತು
ವಿಜಯಪುರ ನಗರದ ಶ್ರೀ ಸಿದ್ದೇಶ್ವರ ಬ್ಯಾಂಕಿನ ಹಾಲಿ ಅಧ್ಯಕ್ಷ ಹರ್ಷಗೌಡ ಪಾಟೀಲ ನೇತೃತ್ವದಲ್ಲಿ ಗುರುವಾರ ಇಂಡಿ ಪಟ್ಟಣದಲ್ಲಿ ಪ್ರಚಾರ ನಡೆಸಲಾಯಿತು   

ವಿಜಯಪುರ: ನಗರದ ಶ್ರೀಸಿದ್ದೇಶ್ವರ ಸಹಕಾರ ಬ್ಯಾಂಕಿಗೆ ನ.8ರಂದು ನಡೆಯಲಿರುವ ನಿರ್ದೇಶಕರ ಆಯ್ಕೆ ಚುನಾವಣೆಗೆ ಪ್ರಚಾರ ಬಿರುಸುಗೊಂಡಿದೆ.

ಒಟ್ಟು 19 ಸ್ಥಾನಗಳಿಗೆ ನಡೆಯುವ ಚುನಾವಣಾ ಕಣದಲ್ಲಿ 37 ಜನ ಆಕಾಂಕ್ಷಿಗಳಿದ್ದಾರೆ. ಅವಿರೋಧ ಆಯ್ಕೆಗೆ ನಡೆದ ಕಸರತ್ತು ವಿಫಲವಾದ ಬಳಿಕ ಹಳೇ ಪೆನಾಲ್‌ನ ಅಭ್ಯರ್ಥಿಗಳು ಜಿಲ್ಲೆಯಾದ್ಯಂತ ಪ್ರಚಾರ ಕೈಗೊಂಡಿದ್ದಾರೆ.

ಹಾಲಿ ಅಧ್ಯಕ್ಷ ಹರ್ಷಗೌಡ ಪಾಟೀಲ ನೇತೃತ್ವದಲ್ಲಿ ಗುರುವಾರ ಇಂಡಿ, ಸಿಂದಗಿ ಮತ್ತು ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿ ಸಭೆಗಳನ್ನು ನಡೆಸುವ ಮೂಲಕ ಮತಯಾಚಿಸಿದರು.

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ಹರ್ಷಗೌಡ ಪಾಟೀಲ, ನೂರಕ್ಕೆ ನೂರರಷ್ಟುಬ್ಯಾಂಕಿನ ಮತದಾರರು ಹಳೇ ಪೆನಾಲ್‌ ಮೇಲೆ ವಿಶ್ವಾಸವಿಟ್ಟಿದ್ದಾರೆ. ಕಳೆದ ಎರಡು ಅವಧಿಯಲ್ಲಿ ನಾವು ಮಾಡಿರುವ ಕೆಲಸವೇ ನಮಗೆ ಶ್ರೀರಕ್ಷೆಯಾಗಿದೆ ಎಂದು ಹೇಳಿದರು.

‘2010ರಲ್ಲಿ ಬ್ಯಾಂಕಿನ ದುಡಿಯುವ ಬಂಡವಾಳ ₹ 263.48 ಕೋಟಿ ಇತ್ತು. ಇದೀಗ ಬ್ಯಾಂಕಿನ ದುಡಿಯುವ ಬಂಡವಾಳ ₹ 632 ಕೋಟಿಯಾಗಿದೆ. ಈ ಸಾಧನೆಯ ಆಧಾರದ ಮೇಲೆ ಜನರ ಬಳಿ ಮತ ಕೇಳಲು ಹೋಗುತ್ತಿದ್ದೇವೆ’ ಎಂದರು.

30 ಮತಗಟ್ಟೆ: ಬ್ಯಾಂಕಿಗೆ ನ.8ರಂದು ಬೆಳಿಗ್ಗೆ 9ರಿಂದ ಸಂಜೆ 4 ರ ವರೆಗೆ ನಗರದ ಎಸ್‌.ಎಸ್‌.ಹೈಸ್ಕೂಲ್‌ ಆವರಣದಲ್ಲಿ ಮತದಾನ ನಡೆಯಲಿದೆ. ಒಟ್ಟು 3347 ಅರ್ಹ ಮತದಾರರು ಇದ್ದು, 200 ಮತದಾರರಿಗೆ ಒಂದರಂತೆ ಒಟ್ಟು 30 ಮತಗಟ್ಟೆಗಳನ್ನು ತೆರೆಯಲಾಗಿದೆ ಎಂದು ಚುನಾವಣಾಧಿಕಾರಿ ಕಾಳಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮತಗಟ್ಟೆ ಆವರಣದಲ್ಲೇ 30 ಕೌಂಟರ್‌ ತೆರೆಯಲಾಗುವುದು, ಬ್ಯಾಂಕಿನಿಂದ ನೀಡಿರುವ ಗುರುತಿನ ಚೀಟಿಯನ್ನು ಕೌಂಟರ್‌ನಲ್ಲಿ ಹಾಜರಿ ಪಡಿಸಿದ ಬಳಿಕ ಮತಗಟ್ಟೆಯೊಳಗೆ ಪ್ರವೇಶ ನೀಡಲಾಗುವುದು ಎಂದು ಹೇಳಿದರು.

ಪ್ರತಿ ಮತದಾರರಿಗೆ ಆರು ಬ್ಯಾಲೆಟ್‌ ಪೇಪರ್‌ ನೀಡಲಾಗುವುದು. ಬೇರೆ, ಬೇರೆ ವೋಟ್‌ ಹಾಕಬೇಕಾಗುತ್ತದೆ ಎಂದರು.

ಕಣದಲ್ಲಿ 37 ಅಭ್ಯರ್ಥಿಗಳು:ಬ್ಯಾಂಕಿನ ಒಟ್ಟು 19 ನಿರ್ದೇಶಕ ಸ್ಥಾನಗಳಲ್ಲಿ13 ಸಾಮಾನ್ಯ ಕ್ಷೇತ್ರಗಳಿಗೆ ಆಯ್ಕೆ ಬಯಸಿ 22 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಉಳಿದಂತೆ ಎರಡು ಮಹಿಳಾ ಕ್ಷೇತ್ರಕ್ಕೆ ಮೂವರು, ಒಂದು ಎಸ್‌ಸಿ ಸ್ಥಾನಕ್ಕೆ 6, ಒಂದು ಎಸ್‌ಟಿ ಸ್ಥಾನಕ್ಕೆ 2, ಒಂದು ಒಬಿಸಿ ‘ಅ’ ಸ್ಥಾನಕ್ಕೆ 2, ಒಂದು ಒಬಿಸಿ ‘ಬ’ ಸ್ಥಾನಕ್ಕೆ 2 ಜನ ಸ್ಪರ್ಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.