ADVERTISEMENT

ಗೊಂದಲದ ಗೂಡಾದ ಸಿಂದಗಿ ಪುರಸಭೆ ವಸತಿ ಯೋಜನೆ

ಆಶ್ರಯ ಸಮಿತಿ ಪ್ರಥಮ ಸಭೆ ಇಂದು

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 5:58 IST
Last Updated 25 ಜೂನ್ 2025, 5:58 IST

ಸಿಂದಗಿ: ಪಟ್ಟಣದ ಪುರಸಭೆಗೆ 2024 ಜನವರಿ 30 ರಂದು ನಾಮನಿರ್ದೇಶನಗೊಂಡ ಆಶ್ರಯ ಸಮಿತಿ ಸದಸ್ಯರ ಪ್ರಥಮ ಸಭೆ ಜೂನ್ 25 ರಂದು ಬೆಳಿಗ್ಗೆ 11ಕ್ಕೆ ಪುರಸಭೆ ಸಭಾಭವನದಲ್ಲಿ ಶಾಸಕ ಅಶೋಕ ಮನಗೂಳಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ವಸತಿ ಯೋಜನೆ ಕಾರ್ಯ ವೈಖರಿ ಗೊಂದಲದ ಗೂಡಾಗಿದೆ. ವಸತಿ ಯೋಜನೆ ವಿಭಾಗಕ್ಕೆ ಯಾವುದೇ ಸಿಬ್ಬಂದಿ ನೇಮಕವಾಗಿಲ್ಲ.

2021-22ನೇ ಸಾಲಿನ ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮದಡಿಯಲ್ಲಿನ 750 ಹೆಚ್ಚುವರಿ ಮನೆಗಳ ಫಲಾನುಭವಿಗಳ ಆಯ್ಕೆಯಲ್ಲಿ ಅವ್ಯವಹಾರ ನಡೆದಿದೆ ಎಂದು 2024 ಆಗಸ್ಟ್‌ನಲ್ಲಿ ದೂರು ದಾಖಲಾಗಿತ್ತು. ಪ್ರತಿಭಟನೆಯೂ ನಡೆದಿತ್ತು.

ADVERTISEMENT

ಡಾ.ಬಿ.ಆರ್.ಅಂಬೇಡ್ಕರ್ ನಗರ ವಸತಿ ಯೋಜನೆಯಡಿ ಪರಿಶಿಷ್ಟ ಜಾತಿಯ ಫಲಾನುಭವಿಗಳ ಬದಲಾಗಿ ಇತರೆ ಸಾಮಾನ್ಯ ವರ್ಗದವರಿಗೆ ಮತ್ತು ಹೊರ ಜಿಲ್ಲೆಯ ಫಲಾನುಭವಿಗಳನ್ನು ಆಯ್ಕೆ ಮಾಡಿರುತ್ತಾರೆ ಎಂದು ಶಿವಾನಂದ ಆಲಮೇಲ ಅವರು 2024 ಆಗಸ್ಟ್ 3 ರಂದು ಜಿಲ್ಲಾಧಿಕಾರಿ  ಕಾರ್ಯಾಲಯದ ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕರಿಗೆ ದೂರು ಸಲ್ಲಿಸಿದ್ದರು.

2024 ಆಗಸ್ಟ್ 30ರಂದು ಬಿಜೆಪಿ ಎಸ್‌ಸಿ ಮೋರ್ಚಾ ನೇತೃತ್ವದಲ್ಲಿ ಕಾರ್ಯಕರ್ತರು ಪುರಸಭೆ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಪ್ರತಿಭಟನೆ ನಡೆಸಿದ್ದರು.

ಶಿವಾನಂದ ಆಲಮೇಲ ಲಿಖಿತ ದೂರು ನೀಡಿದ್ದ ಹಿನ್ನೆಲೆಯಲ್ಲಿ ನಗರಮಟ್ಟದ ತಾಂತ್ರಿಕ ಕೋಶದ ಸಿಬ್ಬಂದಿ ತಂಡ ರಚನೆ ಮಾಡಿ ತನಿಖೆ ನಡೆಸಿ ವರದಿ ಸಲ್ಲಿಸಿತ್ತು. ತನಿಖಾ ತಂಡದ ವರದಿಯನ್ನು ಪರಿಶೀಲಿಸಿ 750 ಹೆಚ್ಚುವರಿ ಮನೆಗಳ ಜಿಪಿಎಸ್ ಹಾಗೂ ದಾಖಲೀಕರಣ ಸಮಯದಲ್ಲಿ ಲೋಪದೋಷಗಳು ಎಸಗಿರುವ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ತನಿಖೆ ನಡೆಸಿ ಎಲ್ಲ ದಾಖಲಾತಿಗಳನ್ನು ಪರಿಶೀಲಿಸಿ ಅಂತಿಮ ವರದಿ ನೀಡುವವರೆಗೆ 750 ಹೆಚ್ಚುವರಿ ಮನೆಗಳ ಅನುದಾನವನ್ನು ತಡೆ ಹಿಡಿಯುವಂತೆ ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಜಿಲ್ಲಾಧಿಕಾರಿ 2024ರ ಆಗಸ್ಟ್ 26 ಸೂಚನೆ ನೀಡಿದ್ದರು.

ಈವರೆಗೂ 750 ಹೆಚ್ಚುವರಿ ಮನೆಗಳು ಹಂಚಿಕೆಯಾಗಿಲ್ಲ. ಆಯ್ಕೆಯಾದ ಫಲಾನುಭವಿಗಳು ಕಾದು ಕುಳಿತಿದ್ದಾರೆ. ಎಷ್ಟು ಮನೆಗಳು ಅರ್ಹತೆ ಪಡೆದಿವೆ. ಎಷ್ಟು ಅನರ್ಹತೆ ಪಡೆದಿವೆ ಎಂಬುದು ಆಶ್ರಯ ಸಮಿತಿ ಸಭೆಯಲ್ಲಿ ಬಹಿರಂಗಗೊಳ್ಳಬೇಕಿದೆ.

ಗೊಂದಲದ ಗೂಡಾದ ಸಿಂದಗಿ ಪುರಸಭೆ ವಸತಿ ಯೋಜನೆ ಕಾರ್ಯವೈಖರಿಯು ಆಶ್ರಯ ಸಮಿತಿ ಅಧ್ಯಕ್ಷರ ಎದುರಿರುವ ಗಂಭೀರ ಸವಾಲಾಗಿದೆ. ಪ್ರಥಮ ಸಭೆಯಲ್ಲಿ ಪಾಲ್ಗೊಳ್ಳುವ ಆಶ್ರಯ ಸಮಿತಿ ನೂತನ ಸದಸ್ಯರ ಜವಾಬ್ದಾರಿಯೂ ಅಷ್ಟೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.