ADVERTISEMENT

ನೌಕರಿ ಕಾಯಂ ಮಾಡದಿದ್ದರೆ ಆತ್ಮಹತ್ಯೆ: 13 ಹೊರಗುತ್ತಿಗೆ ನೌಕರರಿಂದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 4:59 IST
Last Updated 14 ಅಕ್ಟೋಬರ್ 2025, 4:59 IST
ಗುರು ಹೊಡ್ಲ
ಗುರು ಹೊಡ್ಲ   

ಸಿಂದಗಿ: ಪುರಸಭೆ ಕಾರ್ಯಾಲಯದಿಂದ 13 ಪೌರ ನೌಕರ ಹುದ್ದೆಗಳಿಗೆ ಟೆಂಡರ್ ಕರೆಯಲಾಗಿದೆ. ಈ ನೇಮಕಾತಿಯಲ್ಲಿ 20-30 ವರ್ಷಗಳಿಂದ ಕೆಲಸ ಮಾಡುತ್ತಿರುವ ನಮಗೆ ಪ್ರಥಮ ಆದ್ಯತೆ ನೀಡಿ  ಕಾಯಂಗೊಳಿಸಬೇಕು. ಬೇರೆಯವರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡರೆ ಪುರಸಭೆ ಕಾರ್ಯಾಲಯದ ಎದುರು ಕುಟುಂಬ ಸಮೇತ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಪುರಸಭೆಯ 13 ಹೊರಗುತ್ತಿಗೆ ನೌಕರರು ಎಚ್ಚರಿಸಿದ್ದಾರೆ. 

ಇಷ್ಟು ಸುದೀರ್ಘ ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ ಯಾವುದೇ ಸರ್ಕಾರಿ ಸೌಲಭ್ಯಗಳು ದೊರಕಿಲ್ಲ. ಹೀಗಾಗಿ ಕುಟುಂಬ ನಿರ್ವಹಣೆ ದುಸ್ತರವಾಗಿದೆ.ಈ ಕುರಿತು ಮತಕ್ಷೇತ್ರದ ಶಾಸಕರು, ಜಿಲ್ಲಾಧಿಕಾರಿ, ಸಂಬಂಧಿಸಿದ ಇಲಾಖೆ ಮೇಲಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಪೌರ ನೌಕರರು ‘ಪ್ರಜಾವಾಣಿ’ ಗೆ ತಿಳಿಸಿದ್ದಾರೆ.

ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಕಾಯಂ ನೌಕರಿಯಲ್ಲಿ 49 ಜನ ಪೌರ ಕಾರ್ಮಿಕರಿದ್ದರೆ, ಇನ್ನೂ 50ಕ್ಕೂ ಅಧಿಕ ಪೌರ ನೌಕರರಲ್ಲಿ 36 ಜನ ಮನೆ, ಮನೆಗೆ ಕಸ ಸಂಗ್ರಹ ಮಾಡುವ ಸಿಬ್ಬಂದಿ ಇದ್ದಾರೆ. 13 ಜನರು ಘನತ್ಯಾಜ್ಯ ವಿಲೇವಾರಿ ಘಟಕದ ವಾಹನ ಚಾಲಕರು, ಬೀದಿದೀಪ ನಿರ್ವಾಹಕರು, ಸಮಾನ ಕೆಲಸ ಸಮಾನ ವೇತನ ಕೆಲಸಗಾರರು ಇದ್ದಾರೆ. ಇವರು ಕಳೆದ 20-30 ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ ನೌಕರಿ ಕಾಯಂಗೊಂಡಿಲ್ಲ.ಇದರಲ್ಲಿ ನಾಲ್ಕು ಜನ ಮೃತಪಟ್ಟಿದ್ದಾರೆ. ಒಬ್ಬರು ನಿವೃತ್ತಿಯಾಗಿದ್ದಾರೆ.

ADVERTISEMENT

13 ಜನ ಸಿಬ್ಬಂದಿಯನ್ನು ಟೆಂಡರ್ ಮುಖಾಂತರ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಬೇರೆ, ಬೇರೆ ಪ್ರಭಾವಗಳಿಂದ ಹೊಸಬರ ನೇಮಕವಾಗುವ ಸಾಧ್ಯತೆ ಇದೆ.‌ ಮೇಲಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ತುಂಬಾ ವರ್ಷಗಳಿಂದ ಕೆಲಸ ಮಾಡುತ್ತಿರುವ ನಮಗೆ ಪ್ರಾಶಸ್ತ್ಯ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕಾಯಂಗೊಳ್ಳದೆ ನಿವೃತ್ತಿಯಾದ ಪೌರ ನೌಕರ 

ಸಿಂದಗಿ ಪುರಸಭೆಯಲ್ಲಿ 2001 ರಿಂದ ನೀರು ಸರಬರಾಜು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೆ ಈಚೆಗೆ ಕೆಲಸದಿಂದ ನಿವೃತ್ತಿ ಹೊಂದಿದ್ದೇನೆ. 24 ವರ್ಷ ಕೆಲಸ ಮಾಡಿದರೂ ಕೊನೆಗೂ ನನ್ನ ನೌಕರಿ ಕಾಯಂಗೊಳ್ಳಲಿಲ್ಲ ಎಂದು ಪೌರ ನೌಕರ ಗುರು ಹೊಡ್ಲ ಅಳಲು ತೋಡಿಕೊಂಡರು.