ADVERTISEMENT

ತಾ.ಪಂಗೆ ಸೇರಿದ ಜಾಗಕ್ಕೆ ಸ್ಥಳಾಂತರ

ಸಿಂದಗಿ: ತರಕಾರಿ ವ್ಯಾಪಾರಸ್ಥರ ಐದು ದಿನಗಳ ಹೋರಾಟ ಕೊನೆಗೂ ಅಂತ್ಯ

ಶಾಂತೂ ಹಿರೇಮಠ
Published 24 ಜುಲೈ 2019, 19:42 IST
Last Updated 24 ಜುಲೈ 2019, 19:42 IST
ಸಿಂದಗಿಯ ಬಸ್ ನಿಲ್ದಾಣ ಎದುರಿಗೆ ತರಕಾರಿ ವ್ಯಪಾರಸ್ಥರನ್ನು ಸ್ಥಳಾಂತರಿಸಿರುವುದು
ಸಿಂದಗಿಯ ಬಸ್ ನಿಲ್ದಾಣ ಎದುರಿಗೆ ತರಕಾರಿ ವ್ಯಪಾರಸ್ಥರನ್ನು ಸ್ಥಳಾಂತರಿಸಿರುವುದು   

ಸಿಂದಗಿ: ಐದು ದಿನ ಹೋರಾಟ ನಡೆಸಿದ ತರಕಾರಿ ವ್ಯಾಪಾರಿಗಳು ಮಂಗಳವಾರ ಧರಣಿ ಸತ್ಯಾಗ್ರಹ ಹಿಂಪಡೆದಿದ್ದು, ತಾಲ್ಲೂಕು ಪಂಚಾಯಿತಿಗೆ ಸೇರಿದ ಜಾಗದಲ್ಲಿ ಬುಧವಾರದಿಂದ ತರಕಾರಿ ವ್ಯಾಪಾರ ಪ್ರಾರಂಭಿಸಿದ್ದಾರೆ.

ಹಳೆ ತಹಶೀಲ್ದಾರ್ ಕಚೇರಿ ಆವರಣ ಅತ್ಯಂತ ಸೂಕ್ತವೂ, ವಿಶಾಲವೂ ಆಗಿದೆ. ಹಾಗಾಗಿ, ಅದೇ ಜಾಗ ಬೇಕು ಎಂಬ ಬೇಡಿಕೆಯಿಟ್ಟು ಹೋರಾಟ ನಡೆಸಿದ್ದರು. ಹಳೆ ಬಜಾರ್‌ದಲ್ಲಿನ ತರಕಾರಿ ಮಾರ್ಕೆಟ್ ಮತ್ತು ಬಸ್ ನಿಲ್ದಾಣದ ಎದುರಿನ ತಾಲ್ಲೂಕು ಪಂಚಾಯಿತಿ ಜಾಗ ಸಾಲುವುದಿಲ್ಲ ಎಂಬ ಬೇಡಿಕೆ ಇಟ್ಟಿದ್ದರು.

ಶಾಸಕ ಎಂ.ಸಿ.ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ ಅವರು ಮಂಗಳವಾರ ಧರಣಿನಿರತರ ಮನವೊಲಿಸಿದರು.

ADVERTISEMENT

‘ನಮ್ಮ ಕುಟುಂಬದ ಮೇಲೆ ಅಲ್ಪಸಂಖ್ಯಾತರ ಋಣ ಇದೆ. ಹೀಗಾಗಿ ವ್ಯವಸ್ಥಿತವಾದ ತರಕಾರಿ ಮಾರ್ಕೆಟ್ ಅನ್ನು ಮಂಜೂರು ಮಾಡಿಸಲಾಗುವುದು’ ಎಂದು ಭರವಸೆ ನೀಡಿ, ಮಾಜಿ ಶಾಸಕ ಶರಣಪ್ಪ ಸುಣಗಾರ ಮಧ್ಯಸ್ಥಿಕೆಯಲ್ಲಿ ಬಸ್ ನಿಲ್ದಾಣದ ಎದುರಿನ ಜಾಗದಲ್ಲಿ ವ್ಯಾಪಾರ ಪ್ರಾರಂಭಿಸುವಂತೆ ತಿಳಿಸಿದ್ದರು.

ಇದೇ ಜಾಗವನ್ನು ತಮಗೆ ಶಾಶ್ವತವಾಗಿ ನೀಡುತ್ತಾರೆ ಎಂಬ ಭಾವನೆಯಿಂದ ವ್ಯಾಪಾರಿಗಳು ತಮಗೆ ಬೇಕಾಗುವಷ್ಟು ಜಾಗಕ್ಕೆ ಸುಣ್ಣದ ಗೆರೆ ಹಾಕಿ, ಸ್ಥಳ ನಿಗದಿಪಡಿಸಿಕೊಂಡಿದ್ದರು.

‘ಜಾಗಕ್ಕೆ ಸಂಬಂಧಿಸಿದಂತೆ ಬುಧವಾರ ತುರ್ತು ಸಭೆ ನಡೆಸಲಾಗಿದ್ದು, 15 ಸದಸ್ಯರು ಪಾಲ್ಗೊಂಡಿದ್ದರು. ತರಕಾರಿ ವ್ಯಾಪಾರಿಗಳು ತಾಲ್ಲೂಕು ಪಂಚಾಯಿತಿಗೆ ಸೇರಿದ ಜಾಗದಲ್ಲಿ ವ್ಯಾಪಾರ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಲಾಯಿತು. ಕೂಡಲೇ ವಿಶೇಷ ಸಾಮಾನ್ಯ ಸಭೆ ಕರೆದು ತಾಲ್ಲೂಕು ಪಂಚಾಯಿತಿ ಆಸ್ತಿಯನ್ನು ರಕ್ಷಿಸಿಕೊಳ್ಳುವ ನಿರ್ಧಾರ ಕೈಗೊಳ್ಳಲಾಯಿತು’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಕಿರಣರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಜಾಗದಲ್ಲಿ ಸದ್ಯ ತಾಲ್ಲೂಕು ಪಂಚಾಯಿತಿಯ ಸಾಮರ್ಥ್ಯ ಸೌಧ ಕಟ್ಟಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿ, ಅತಿಥಿಗೃಹ ಇವೆ. ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಉಪ ವಿಭಾಗದ ದೊಡ್ಡ ಗೋದಾಮು, ಪತ್ರಿಕಾ ಭವನಕ್ಕಾಗಿ ಪತ್ರಕರ್ತರ ಸಂಘದ ಹೆಸರಿನಲ್ಲಿ ನೋಂದಾಯಿಸಿದ ನಿವೇಶನವೂ ಇದೆ.

‘ಎಲ್ಲಾ ಗೊತ್ತಿದ್ದರೂ ಶಾಸಕರ ಪುತ್ರ ಅಶೋಕ ಮತ್ತು ಮಾಜಿ ಶಾಸಕ ಸುಣಗಾರ ಅವರು ಉದ್ದೇಶ ಪೂರ್ವಕವಾಗಿ ವ್ಯಾಪಾರಿಗಳನ್ನು ನಮ್ಮ ಜಾಗಕ್ಕೆ ಸೇರಿಸಿದ್ದಾರೆ. ವ್ಯಾಪಾರಿಗಳು ಮನಗೂಳಿ ನಿವಾಸದ ಎದುರಿನ ಜಾಗ ಕೇಳಿರುವುದೇ ಇದಕ್ಕೆಲ್ಲ ಕಾರಣವಾಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಪುರಸಭೆ ಮಾಜಿ ಸದಸ್ಯರೊಬ್ಬರು ಆರೋಪಿಸಿದರು.

‘ರಾಜಕೀಯ ವ್ಯಕ್ತಿಯೊಬ್ಬರು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೋರಾಟವನ್ನೇ ತಪ್ಪು ದಾರಿಗೆ ಒಯ್ದಿದ್ದಾರೆ. ಆ ಮೂಲಕ ಸ್ವಾರ್ಥ ಸಾಧಿಸಿಕೊಂಡಿದ್ದಾರೆ’ ಎಂದು ಹೋರಾಟದ ರೂವಾರಿ, ಪುರಸಭೆ ಮಾಜಿ ಸದಸ್ಯ ಇಕ್ಬಾಲ್‌ ತಲಕಾರಿ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.