
ಸಿಂದಗಿ: ಪಟ್ಟಣದ ತಾಲ್ಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ ಬೆಂಗಳೂರು ಹಾಗೂ ವಿಜಯಪುರ ವತಿಯಿಂದ 2025-26ನೇ ಸಾಲಿನ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜುಗಳ ಬಾಲಕ/ ಬಾಲಕಿಯರ ಕುಸ್ತಿ ಟೂರ್ನಿ ಅ.23 ರಿಂದ 25 ರವರೆಗೆ ನಡೆಯಲಿದ್ದು ಭರದಿಂದ ಸಿದ್ಧತೆ ನಡೆದಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಇಲ್ಲಿಯ ಎಚ್.ಜಿ ಪಿಯು ಕಾಲೇಜಿನ ಪ್ರಾಚಾರ್ಯರ ಕಾರ್ಯಾಲಯದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
ಈ ಭಾಗವು ಕುಸ್ತಿ ಪೈಲ್ವಾನರ ನೆಲೆಯಾಗಿದೆ. ದೇಶಿ ಕುಸ್ತಿ ಮರೆಯಾಗುತ್ತಿರುವ ಸಂದರ್ಭದಲ್ಲಿ ಅದನ್ನು ಉಳಿಸುವ ಕಾರ್ಯಕ್ಕಾಗಿ ಟೂರ್ನಿ ಜವಾಬ್ದಾರಿ ವಹಿಸಿಕೊಳ್ಳಲಾಗಿದೆ ಎಂದರು.
ಟೂರ್ನಿಯಲ್ಲಿ ಭಾಗವಹಿಸಲಿರುವ ಬೆಳಗಾವಿ ವಿಭಾಗ, ಕಲಬುರ್ಗಿ ವಿಭಾಗ, ಬೆಂಗಳೂರು ವಿಭಾಗ, ಮೈಸೂರು ವಿಭಾಗಗಳ ಪಿಯು ಕಾಲೇಜುಗಳ ಬಾಲಕ/ಬಾಲಕಿಯರಿಗಾಗಿ ಹಾಗೂ 22 ಜನ ನಿರ್ಣಾಯಕರಿಗಾಗಿ ಪ್ರತ್ಯೇಕವಾಗಿ ವಸತಿ ವ್ಯವಸ್ಥೆ ಸಿದ್ಧತೆ ಪೂರ್ಣಗೊಂಡಿದೆ. ಟೂರ್ನಿ ಬೆಳಿಗ್ಗೆಯಿಂದ ಹೊನಲು ಬೆಳಕಿನ ವ್ಯವಸ್ಥೆಯಲ್ಲಿ ರಾತ್ರಿ 10 ಗಂಟೆಯವರೆಗೆ ನಡೆಯಲಿದೆ ಎಂದರು.
ಇದೇ ಸಂದರ್ಭದಲ್ಲಿ ಸಿಂದಗಿ-ಆಲಮೇಲ ಅವಳಿ ತಾಲ್ಲೂಕುಗಳ ಹಳೆಯ ಕುಸ್ತಿ ಪೈಲ್ವಾನರು, ಯುವ ಪೈಲ್ವಾನರನ್ನು ಗೌರವಿಸಲಾಗುವುದು ಎಂದು ಶಾಸಕರು ವಿವರಿಸಿದರು.
ಟೂರ್ನಿ ಸಂಯೋಜಕ, ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಟೂರ್ನಿ ರೂಪರೇಷೆ ತಿಳಿಸಿದರು. ವಿಜಯಪುರ ಜಿಲ್ಲಾ ಪಿಯು ಕಾಲೇಜುಗಳ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಶಾಂತೇಶ ದುರ್ಗಿ, ನಿವೃತ್ತ ದೈಹಿಕ ನಿರ್ದೇಶಕ ಕೆ.ಎಚ್.ಸೋಮಾಪೂರ ಸುದ್ದಿಗೋಷ್ಠಿಯಲ್ಲಿ ಇದ್ದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ 900 ಕುಸ್ತಿ ಪಟುಗಳು ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ. ಅವರಿಗೆ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದೆ
-ಅಶೋಕ ಮನಗೂಳಿ ಮಂಡಳಿಯ ಅಧ್ಯಕ್ಷ ಶಾಸಕ
ಮೂರು ಗ್ಯಾಲರಿ ಸಿದ್ಧ ಕುಸ್ತಿ ಪಂದ್ಯಗಳನ್ನು ವೀಕ್ಷಿಸಲು ಮೂರು ಗ್ಯಾಲರಿ ಸಿದ್ಧಪಡಿಸಲಾಗುತ್ತಿದೆ. ಮಹಿಳೆಯರು ಪುರುಷರು ಕುಸ್ತಿ ಪಟುಗಳಿಗಾಗಿ ಪ್ರತ್ಯೇಕವಾಗಿ ಸಿದ್ಧತೆ ನಡೆದಿದೆ. ಸುಮಾರು 2 ಸಾವಿರದಷ್ಟು ಕ್ರೀಡಾಭಿಮಾನಗಳು ವೀಕ್ಷಿಸುವ ಸಾಧ್ಯತೆ ಇದೆ. 40*40 ಅಳತೆಯ ಎರಡು ಕುಸ್ತಿ ಅಖಾಡ ಮ್ಯಾಟ್ ಗದಗ ಬೆಂಗಳೂರು ಬೆಳಗಾವಿಯ 22 ಜನ ನಿರ್ಣಾಯಕರು ಕಾರ್ಯ ನಿರ್ವಹಿಸುವರು ಎಂದು ಟೂರ್ನಿ ಸಂಯೋಜಕ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.