ADVERTISEMENT

ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಿ

ತಾಲ್ಲೂಕು ಆಯುಷ್ ಆರೋಗ್ಯಾಧಿಕಾರಿ ಮಹಾಂತೇಶ ಹಿರೇಮಠ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 4:46 IST
Last Updated 30 ಸೆಪ್ಟೆಂಬರ್ 2025, 4:46 IST
ಸಿಂದಗಿ ಪಟ್ಟಣದಲ್ಲಿ ಸೋಮವಾರ ನಡೆದ ವಿಶ್ವ ಆತ್ಮಹತ್ಯೆ ತಡೆ ದಿನ, ವಿಶ್ವ ಹೃದಯ ದಿನ ಆಚರಣೆಯಲ್ಲಿ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಕುಲಕರ್ಣಿ ಮಾತನಾಡಿದರು
ಸಿಂದಗಿ ಪಟ್ಟಣದಲ್ಲಿ ಸೋಮವಾರ ನಡೆದ ವಿಶ್ವ ಆತ್ಮಹತ್ಯೆ ತಡೆ ದಿನ, ವಿಶ್ವ ಹೃದಯ ದಿನ ಆಚರಣೆಯಲ್ಲಿ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಕುಲಕರ್ಣಿ ಮಾತನಾಡಿದರು   

ಸಿಂದಗಿ: ‘ಪ್ರತಿದಿನ ಹೃದಯದ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡಬೇಕೆಂದು ವಿಶ್ವ ಹೃದಯ ದಿನ ನೆನಪಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿ ಆರೋಗ್ಯಕರ ಜೀವನಶೈಲಿ ಮೈಗೂಡಿಸಿಕೊಳ್ಳಬೇಕು’ ಎಂದು ತಾಲ್ಲೂಕು ಆಯುಷ್ ಆರೋಗ್ಯಾಧಿಕಾರಿ ಮಹಾಂತೇಶ ಹಿರೇಮಠ ಹೇಳಿದರು.

ಪಟ್ಟಣದ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಭಾಭವನದಲ್ಲಿ ತಾಲ್ಲೂಕು ಆರೋಗ್ಯ ಇಲಾಖೆ ಸಹಯೋಗದಲ್ಲಿ  ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಆತ್ಮಹತ್ಯೆ ತಡೆ ದಿನ, ವಿಶ್ವ ಹೃದಯ ದಿನದ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಸಮಯಕ್ಕೆ ಸರಿಯಾಗಿ ವೈದ್ಯಕೀಯ ಚಿಕಿತ್ಸೆ ಪಡೆಯುವುದರಿಂದ ಹೃದಯದ ರೋಗ ಕಾಪಾಡಿಕೊಳ್ಳಬಹುದು. ಅಪಾಯವನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು. ಆರೋಗ್ಯಕರ ಹೃದಯಕ್ಕಾಗಿ ಜಾಗೃತಿಯೊಂದಿಗೆ ಹೆಜ್ಜೆ ಹಾಕಬೇಕಿದೆ’ ಎಂದು ತಿಳಿಸಿದರು.

ADVERTISEMENT

‘ನಿಯಮಿತ ಆರೋಗ್ಯ ತಪಾಸಣೆ, ಸಕಾಲಿಕ ಆರೈಕೆ ಮತ್ತು ಉನ್ನತಮಟ್ಟದ ತಂತ್ರಜ್ಞಾನಗಳ ಮೂಲಕ ಹೃದ್ರೋಗವನ್ನು ಆರಂಭದಲ್ಲೇ ಪತ್ತೆ ಹಚ್ಚಬಹುದು. ಉತ್ತಮ ಆರೋಗ್ಯಕ್ಕೆ ಸಮತೋಲನ ಆಹಾರ, ದೈಹಿಕ ಚಟುವಟಿಕೆಗಳು ಅವಶ್ಯ’ ಎಂದರು.

ಆರೋಗ್ಯ ಇಲಾಖೆಯ ಎನ್‌ಸಿಡಿ ವಿಭಾಗದ ವೈದ್ಯಾಧಿಕಾರಿ ರಶ್ಮಿಪ್ರಿಯ ನಾಯಕ ಮಾತನಾಡಿದರು.
ಸಂಗಮ ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಸಿಂತಿಯಾ ಡಿ ಮೆಲ್ಲೊ ಪ್ರಾಸ್ತಾವಿಕವಾಗಿ ಮಾತನಾಡಿದರು. 85 ಮಹಿಳೆಯರಿಗೆ ಆರೋಗ್ಯ ತಪಾಸಣೆ ಹಾಗೂ ಆಪ್ತ ಸಮಾಲೋಚನೆ ಶಿಬಿರ ನಡೆಯಿತು.

ಆರೋಗ್ಯ ಇಲಾಖೆ ನಿರೀಕ್ಷಣಾಧಿಕಾರಿ ವೀರೇಂದ್ರ ಪವಾಡೆ, ತೇಜಸ್ವಿನಿ ಹಳ್ಳದಕೇರಿ, ಬಸವರಾಜ ಬಿಸನಾಳ, ಮಲಕಪ್ಪ ಹಲಗಿ, ಕಲಾವತಿ ಸಿಂಗೆ ಇದ್ದರು.

‘ನಿತ್ಯ 45 ನಿಮಿಷ ನಡಿಗೆ ಅವಶ್ಯ’

‘ಮಾನವನ ಹೃದಯವು ದಿನಕ್ಕೆ ಒಂದು ಲಕ್ಷ ಸಲ ಮಿಡಿಯುತ್ತದೆ. ನಾವು ಅದನ್ನು ಕಾಪಾಡಿದರೆ ಅದು ನಮ್ಮನ್ನು ಜೀವನಪೂರ್ತಿ ಕಾಪಾಡುತ್ತದೆ. ಸರಿಯಾದ ಆಹಾರ ವ್ಯಾಯಾಮ ಒತ್ತಡ ನಿಯಂತ್ರಣ ಮತ್ತು ಧೂಮಪಾನದಿಂದ ದೂರವಿದ್ದರೆ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ. ಪ್ರತಿ ದಿನ 45 ನಿಮಿಷ ನಡಿಗೆ ಅತ್ಯವಶ್ಯ’  ಎಂದು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಕುಲಕರ್ಣಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.