ADVERTISEMENT

ಸಿಂದಗಿ | ತಿರಂಗಾ ಯಾತ್ರೆ; ಎಲ್ಲೆಲ್ಲೂ ರಾರಾಜಿಸಿದ ತ್ರಿವರ್ಣ ಧ್ವಜ

​ಪ್ರಜಾವಾಣಿ ವಾರ್ತೆ
Published 17 ಮೇ 2025, 14:03 IST
Last Updated 17 ಮೇ 2025, 14:03 IST
ಸಿಂದಗಿ ಪಟ್ಟಣದಲ್ಲಿ ಶನಿವಾರ ಆಪರೇಷನ್ ಸಿಂಧೂರ ವಿಜಯೋತ್ಸವದ ಅಂಗವಾಗಿ ಪಕ್ಷಾತೀತವಾಗಿ ಆಯೋಜಿಸಿದ್ದ ದೇಶಭಕ್ತಿಯ ತಿರಂಗಾ ಯಾತ್ರೆಯಲ್ಲಿ ಮಠಾಧೀಶರು, ಮಾಜಿ ಸೈನಿಕರು ತ್ರಿವರ್ಣ ಧ್ವಜ ಹಿಡಿದು ಹೆಜ್ಜೆ ಹಾಕಿದರು
ಸಿಂದಗಿ ಪಟ್ಟಣದಲ್ಲಿ ಶನಿವಾರ ಆಪರೇಷನ್ ಸಿಂಧೂರ ವಿಜಯೋತ್ಸವದ ಅಂಗವಾಗಿ ಪಕ್ಷಾತೀತವಾಗಿ ಆಯೋಜಿಸಿದ್ದ ದೇಶಭಕ್ತಿಯ ತಿರಂಗಾ ಯಾತ್ರೆಯಲ್ಲಿ ಮಠಾಧೀಶರು, ಮಾಜಿ ಸೈನಿಕರು ತ್ರಿವರ್ಣ ಧ್ವಜ ಹಿಡಿದು ಹೆಜ್ಜೆ ಹಾಕಿದರು   

ಸಿಂದಗಿ: ಆಪರೇಷನ್ ಸಿಂಧೂರ ವಿಜಯೋತ್ಸವದ ಅಂಗವಾಗಿ ದೇಶಭಕ್ತಿ ಮೆರೆಯುವ, ಸೈನಿಕರಿಗೆ ನೈತಿಕ ಬೆಂಬಲ ಸೂಚಿಸಲು ಪಕ್ಷಾತೀತವಾಗಿ ಆಯೋಜನೆ ಮಾಡಲಾಗಿದ್ದ ತಿರಂಗಾ ಯಾತ್ರೆ ಶನಿವಾರ ಯಶಸ್ವಿಯಾಗಿ ಸಂಪನ್ನಗೊಂಡಿತು.

ಇಲ್ಲಿಯ ಸ್ವಾಮಿ ವಿವೇಕಾನಂದ ವೃತ್ತದಿಂದ ಪ್ರಾರಂಭಗೊಂಡ ಯಾತ್ರೆ ತೋಂಟದ ಡಾ.ಸಿದ್ಧಲಿಂಗ ಶ್ರೀಗಳ ಮುಖ್ಯ ರಸ್ತೆ ಮಾರ್ಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ತಲುಪಿತು.

ಮಠಾಧೀಶರು, ಮಾಜಿ ಸೈನಿಕರು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದುಕೊಂಡು ಮುಂಚೂಣಿಯಲ್ಲಿ ಸಾಗುತ್ತಿದ್ದರು. ಪಟ್ಟಣದ ರಸ್ತೆ, ರಸ್ತೆಗಳಲ್ಲಿ ತ್ರಿವರ್ಣ ಧ್ವಜಗಳು ರಾರಾಜಿಸಿದವು. ಸಹಸ್ರ, ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಂಡ ಶಾಲಾ-ಮಕ್ಕಳು, ಯುವಕರು 'ಭಾರತ್ ಮಾತಾ ಕೀ ಜೈ’, ‘ಜೈ ಜವಾನ್, ಜೈ ಕಿಸಾನ್’ ಎಂಬ ಘೋಷಣೆಗಳನ್ನು ಕೂಗಿದರು.

ADVERTISEMENT

ಯಾತ್ರೆಯಲ್ಲಿ ವಕೀಲರು, ವೈದ್ಯರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ವರ್ತಕರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಾರಂಗಮಠದ ವಟುಗಳು ಪಾಲ್ಗೊಂಡಿದ್ದರು.

ಅಂಬೇಡ್ಕರ್ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಸಾರಂಗಮಠ-ಗಚ್ಚಿನಮಠದ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ, ಬೋರಗಿ-ಪುರದಾಳ ಮಠದ ಮಹಾಲಿಂಗೇಶ್ವರ ಸ್ವಾಮೀಜಿ, ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಆಲಮೇಲ ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಸಾರಂಗಮಠದ ಉತ್ತರಾಧಿಕಾರಿ ವಿಶ್ವಪ್ರಭುದೇವ ಶಿವಾಚಾರ್ಯ ಸ್ವಾಮೀಜಿ, ಮಾಜಿ ಸೈನಿಕರ ಸಂಘ ತಾಲ್ಲೂಕು ಶಾಖೆ ಅಧ್ಯಕ್ಷ ಶ್ರೀಶೈಲ ಯಳಮೇಲಿ, ಮಾಜಿ ಶಾಸಕ ರಮೇಶ ಭೂಸನೂರ, ಗುರುಲಿಂಗಪ್ಪ ಅಂಗಡಿ ವಿಜಯಪುರ, ಸಂತೋಷ ಪಾಟೀಲ ಡಂಬಳ ಮಾತನಾಡಿ, ‘ಸೈನಿಕರಿಗೆ ಆತ್ಮಸ್ಥೈರ್ಯ ತುಂಬುವ ಜವಾಬ್ದಾರಿ ಪ್ರತಿಯೊಬ್ಬ ದೇಶವಾಸಿಗಳ ಆದ್ಯ ಕರ್ತವ್ಯ’ ಎಂದು ಒಕ್ಕೋರಲಿನಿಂದ ಹೇಳಿದರು.

ಯಾತ್ರೆಯಲ್ಲಿ ಕನ್ನೊಳ್ಳಿ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಸಿಂದಗಿ ಸದ್ಗುರು ಭೀಮಾಶಂಕರಮಠದ ದತ್ತಪ್ಪಯ್ಯ ಸ್ವಾಮೀಜಿ, ಆದಿಶೇಷ ಮಠದ ಸ್ವಾಮೀಜಿ, ರಾಘವೇಂದ್ರಮಠದ ಮುಖ್ಯ ಅರ್ಚಕ ವಿಠ್ಠಲಾಚಾರ್ಯ ಮಂಗಳವೇಡೆ, ಮಾಡಬಾಳ, ಖೈನೂರ, ಅಲ್ಲಾಪೂರ ಮಠಗಳ ಶ್ರೀ, ಮಾಜಿ ಅರೆಸೇನೆ ಪಡೆ ಸಂಘದ ಗೌರವಾಧ್ಯಕ್ಷ ಶಬ್ಬೀರಪಟೇಲ್ ಬಿರಾದಾರ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ, ಲಿಂಬೆ ಅಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಎಂ.ಎಂ.ಪಡಶೆಟ್ಟಿ, ಇದ್ದರು.

ಸಿಂದಗಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ತ್ರಿವರ್ಣ ಧ್ವಜಗಳು ರಾರಾಜಿಸಿದವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.