
ವಿಜಯಪುರ: ‘ಕೌಶಲಗಳಿಂದಲೇ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಕೇವಲ ಪದವಿ ಇದ್ದರೆ ಸಾಕಾಗುವುದಿಲ್ಲ ಬದುಕಿನಲ್ಲಿ ಕೌಶಲವೂ ಅಗತ್ಯವಿದ್ದು, ಅದನ್ನು ರೂಢಿಸಿಕೊಳ್ಳಬೇಕು’ ಎಂದು ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಜಯಾ ಬಿ. ಕೋರಿಶೆಟ್ಟಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂಹವನ ವಿಭಾಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರೇಡಿಯೊ ಜಾಕಿ ಮತ್ತು ಪಾಡ್‌ಕಾಸ್ಟಿಂಗ್ ಕೌಶಲಗಳ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ್ ಕಾಕಡೆ ಮಾತನಾಡಿ, ‘ರೇಡಿಯೊ ಹಳೆಯ ಮತ್ತು ಹೊಸದರ ಮಿಶ್ರಣವಾಗಿದೆ. ಇದು ಪರಂಪರೆ, ಭವ್ಯತೆ, ಇತಿಹಾಸವನ್ನು ಒಳಗೊಂಡಿದೆ ಮತ್ತು ಇದರ ಕೌಶಲಗಳನ್ನು ಪಡೆದುಕೊಂಡು ಮುಂದಿನ ಪೀಳಿಗೆಗೆ ಮಾದರಿಯಾಗಬೇಕು’ ಎಂದರು.
‘ಶಿಕ್ಷಕರು ಶಬ್ದ ಮತ್ತು ಭಾಷೆಯ ಮೇಲೆ ಹಿಡಿತ ಹೊಂದಿರಬೇಕು. ಸಂಕೀರ್ಣ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಸರಳವಾಗಿ ವಿವರಿಸುವ ಕಲೆ ಶಿಕ್ಷಕರಲ್ಲಿ ಇರಬೇಕು’ ಎಂದು ತಿಳಿಸಿದರು.
‘ರೇಡಿಯೋ ಕಾರ್ಯಕ್ರಮಗಳ ಪರಿಚಯ’ ವಿಷಯದ ಕುರಿತು ಮಾತನಾಡಿದ ಧಾರವಾಡ ಆಕಾಶವಾಣಿಯ ನಿವೃತ್ತ ಹಿರಿಯ ಉದ್ಘೋಷಕ ಡಾ. ಶಶಿಧರ್ ನರೇಂದ್ರ, ‘ರೇಡಿಯೊ ಅತ್ಯಂತ ಸರಳ ಹಾಗೂ ಆಪ್ತ ಮಾಧ್ಯಮವಾಗಿದ್ದು, ಅದರಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು’ ಎಂದರು.
‘ಪರಿಕಲ್ಪನೆ ಅಭಿವೃದ್ಧಿ ಮತ್ತು ವಿಷಯ ಯೋಜನೆ’ ವಿಷಯದ ಕುರಿತು ಮಾತನಾಡಿದ ರಾಯಚೂರು ಆಕಾಶವಾಣಿಯ ನಿವೃತ್ತ ಮುಖ್ಯಸ್ಥ ಡಾ. ಬಿ. ಎಂ. ಶರಭೇಂದ್ರ ಸ್ವಾಮಿ, ಪ್ರಚಲಿತ ವಿದ್ಯಮಾನಗಳನ್ನು ಅರಿಯಲು ಆಕಾಶವಾಣಿಯನ್ನು ಕೇಳುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದರು.
‘ರೇಡಿಯೋಗಾಗಿ ಬರವಣಿಗೆ ತಂತ್ರಗಳು’ ವಿಷಯದ ಕುರಿತು ಮಾತನಾಡಿದ ಧಾರವಾಡದ ಜೆ. ಎಸ್. ಎಸ್. ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ. ಜಿನದತ್ತ ಹಡಗಲಿ, ರೇಡಿಯೊದಲ್ಲಿ ದೇಹಕ್ಕಿಂತ ಧ್ವನಿ ಮತ್ತು ಮಾತೇ ಪ್ರಮುಖವಾಗಿವೆ. ಒಬ್ಬರು ಉತ್ತಮವಾಗಿ ಬರೆಯಲು ಕನಿಷ್ಠ ಹತ್ತು ಕಥೆಗಳನ್ನು ಓದಬೇಕು ಆಗ ಮಾತ್ರ ಬರವಣಿಗೆಯ ಕೌಶಲ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಂದೀಪ್, ಸಂಶೋಧನಾ ವಿದ್ಯಾರ್ಥಿನಿಯರಾದ ಜಯಶ್ರೀ ತಳವಾರ, ಪವಿತ್ರಾ ಕಂಬಾರ, ಅತಿಥಿ ಉಪನ್ಯಾಸಕಿ ಸುಷ್ಮಾ ಪವಾರ ಇದ್ದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಪದವಿ ಪಡೆಯುವುದಷ್ಟೇ ಸಾಕಾಗುವುದಿಲ್ಲ ಅದರೊಂದಿಗೆ ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ಕೌಶಲಗಳನ್ನು ಹೊಂದಿರುವುದು ಅತ್ಯಾವಶ್ಯಕ-ಪ್ರೊ. ವಿಜಯಾ ಬಿ. ಕೋರಿಶೆಟ್ಟಿ, ಕುಲಪತಿ ಮಹಿಳಾ ವಿಶ್ವವಿದ್ಯಾಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.