ADVERTISEMENT

ವಿಜಯಪುರ | ಜಿ.ಪಂ. ನೂತನ ಅಧ್ಯಕ್ಷೆಯಾಗಿ ಸುಜಾತಾ ಕಳ್ಳಿಮನಿ ಪದಗ್ರಹಣ

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 15:03 IST
Last Updated 3 ಜುಲೈ 2020, 15:03 IST
ವಿಜಯಪುರ ಜಿಲ್ಲಾ ಪಂಚಾಯ್ತಿ ನೂತನ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಅವರು ಶುಕ್ರವಾರ ತಮ್ಮ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಪೂಜಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಧರ್ಮಗುರುಗಳನ್ನು ಸನ್ಮಾನಿಸಿದರು
ವಿಜಯಪುರ ಜಿಲ್ಲಾ ಪಂಚಾಯ್ತಿ ನೂತನ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಅವರು ಶುಕ್ರವಾರ ತಮ್ಮ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಪೂಜಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಧರ್ಮಗುರುಗಳನ್ನು ಸನ್ಮಾನಿಸಿದರು   

ವಿಜಯಪುರ: ಜಿಲ್ಲಾ ಪಂಚಾಯ್ತಿ ನೂತನ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಅವರು ಶುಕ್ರವಾರ ಪದಗ್ರಹಣ ಮಾಡಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಪೂಜಾ ಸಮಾರಂಭದಲ್ಲಿ ಬುದ್ದ, ಬಸವ, ಅಂಬೇಡ್ಕರ್ ಅವರಿಗೆ ಗೌರವ ನಮನ ಸಲ್ಲಿಸಿದರು.

‘ಜಿಲ್ಲೆಯ ಜನತೆಯ ಆಶೀರ್ವಾದ, ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರ ಪ್ರಯತ್ನ ಮತ್ತು ಜಿ.ಪಂ. ಸದಸ್ಯರ ಬೆಂಬಲದಿಂದ ನನಗೆ ಒದಗಿಬಂದ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಸಾಮಾಜಿಕ ನ್ಯಾಯದ ಅಡಿಯಲ್ಲಿ ಕೆಲಸ ಮಾಡುವುದಲ್ಲದೆ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ’ ಎಂದರು.

ADVERTISEMENT

ಬೌದ್ಧ ಧರ್ಮಗುರು ಭಂತೆ ವರಜ್ಯೋತಿ ಮಾತನಾಡಿ, ‘ಅಧಿಕಾರ ಶಾಶ್ವತವಲ್ಲ. ಆದರೆ, ನಾವು ಮಾಡುವ ಒಳ್ಳೆಯ ಕೆಲಸಗಳು ಶಾಶ್ವತವಾಗಿರುತ್ತವೆ. ಅಧಿಕಾರ ಬಂದಾಗ ಸಮಾಜದ ಎಲ್ಲ ವರ್ಗಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಏಳಿಗೆಗಾಗಿ ಶ್ರಮಿಸುವುದು ಅಗತ್ಯ’ ಎಂದು ಹೇಳಿದರು.

‘ಹಿಂದುಳಿದ ವರ್ಗದಿಂದ ಬಂದಿರುವ ಸುಜಾತಾ ಕಳ್ಳಿಮನಿ ಅವರು ಕೆಳವರ್ಗಗಳ ಸಮಸ್ಯೆಗಳನ್ನು ಅರಿತವರಾಗಿದ್ದು, ಅಹಿಂದ ಹೋರಾಟದ ಹಿನ್ನೆಲೆ ಹೊಂದಿದವರಾಗಿದ್ದಾರೆ. ಈಗ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಪದವಿಗೇರಿರುವ ಅವರು ತಾವು ಪ್ರತಿನಿಧಿಸುವ ವರ್ಗಗಳಿಗೆ ನ್ಯಾಯ ದೊರಕಿಸಿಕೊಡುವುದರ ಜೊತೆಗೆ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ತಮ್ಮ ಅಧಿಕಾರಾವಧಿಯಲ್ಲಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ಶುಭ ಹಾರೈಸಿದರು.

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಸದಸ್ಯರಾದ ಅಪ್ಪಣ್ಣ ಐಹೊಳ್ಳಿ, ಕಲ್ಲಪ್ಪ ಮಟ್ಟಿ, ಬಸವರಾಜ ಅಸ್ಕಿ, ರಾಮು ರಾಠೋಡ, ಮಹಾದೇವ ಪೂಜಾರಿ ಗಡ್ಡದ, ಅಣ್ಣಾಸಾಹೇಬ ಪಾಟೀಲ, ಸಂತೋಷ ಚವ್ಹಾಣ, ಪ್ರಸಾದ ಚವ್ಹಾಣ, ಹಣಮಂತ ಖಂಡೇಕರ, ಮೋಹನ ಮೇಟಿ, ಮುಖಂಡರಾದ ಸೋಮನಾಥ ಕಳ್ಳಿಮನಿ, ನಾಗರಾಜ ಲಂಬು, ಅನಿಲ ಹೊಸಮನಿ, ವೆಂಕಟೇಶ ವಗ್ಯಾನವರ, ಸಂತೋಷ ಶಹಾಪುರ ಹಾಗೂ ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು, ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.