ADVERTISEMENT

ವಿಜಯಪುರ: ‘ನನ್ನ ಗಿಡ ನನ್ನಭೂಮಿ’ ಸಂಘಟನೆಯಿಂದ ಮನೆ ಮನೆಗೆ ಮಣ್ಣಿನ ಗಣಪ ಅಭಿಯಾನ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2020, 9:55 IST
Last Updated 17 ಆಗಸ್ಟ್ 2020, 9:55 IST
ವಿಜಯಪುರದಲ್ಲಿ ಮಾರಾಟಕ್ಕೆ ಇಡಲಾಗಿರುವ ಮಣ್ಣಿನಿಂದ ತಯಾರಿಸಿದ ಗಣೇಶನ ಮೂರ್ತಿಗಳು
ವಿಜಯಪುರದಲ್ಲಿ ಮಾರಾಟಕ್ಕೆ ಇಡಲಾಗಿರುವ ಮಣ್ಣಿನಿಂದ ತಯಾರಿಸಿದ ಗಣೇಶನ ಮೂರ್ತಿಗಳು   

ವಿಜಯಪುರ: ನನ್ನ ಗಿಡ ನನ್ನ ಭೂಮಿ ಸಂಘಟನೆಯು ‘ಮನೆ ಮನೆಗೆ ಮಣ್ಣಿನ ಗಣಪ’ ಎಂಬ ಅಭಿಯಾನ ಹಮ್ಮಿಕೊಂಡಿದೆ ಎಂದು ಸಂಘಟನೆಯಸಂಚಾಲಕರಾದ ಬಸವರಾಜ ಬೈಚಬಾಳ ಹೇಳಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಸರಕ್ಕೆ ಮಾರಕವಾದ ಪ್ಲಾಸ್ಟರ್ ಆಫ್ ಪ್ಯಾರಿಸ್‌ ಮತ್ತು ವಿವಿಧ ರಾಸಾಯನಿಕಗಳಿಂದ ತಯಾರಿಸಿದ ಗಣೇಶ ಮೂರ್ತಿಗಳ ಬದಲಿಗೆ ಪರಿಸರಕ್ಕೆ ಪೂರಕವಾದ ಶುದ್ಧ ಮಣ್ಣಿನಿಂದ ತಯಾರಿಸಿದ ಗಣೇಶನ ಮೂರ್ತಿಗಳನ್ನು ಮನೆಮನೆಗೆ ತಲುಪಿಸುವುದು ಸಂಘಟನೆಯ ಉದ್ದೇಶವಾಗಿದೆ ಎಂದರು.

ಈಗಾಗಲೇ ಬೆಳಗಾವಿ ಜಿಲ್ಲೆಯ ಗೋಕಾಕ ಮತ್ತು ಕೊಣ್ಣೂರಿನಿಂದ ಸುಮಾರು ಎಂಟು ಸಾವಿರ ಮಣ್ಣಿನ ಮೂರ್ತಿಗಳನ್ನು ನಗರಕ್ಕೆ ತರಲಾಗಿದೆ. ₹170ರಿಂದ ₹ 1ಸಾವಿರ ಬೆಲೆಯ ಆಕರ್ಷಕ ಗಣಪನ ಮೂರ್ತಿಗಳು ಲಭ್ಯವಿದ್ದು, ಸಾರ್ವಜನಿಕರು ಕೊಂಡೊಯ್ಯಬಹುದು ಎಂದರು.

ADVERTISEMENT

ನಗರದ ಎಸ್.ಎಸ್.ರಸ್ತೆಶ್ರೀಸಿದ್ಧೇಶ್ವರ ಕಲಾಭವನ, ಲಿಂಗದ ಗುಡಿ ರಸ್ತೆ ಸಂಗನಬಸವ ಮಂಗಲ ಕಾರ್ಯಾಲಯ, ಜಲನಗರದನಿಂಬೆಕ್ಕ ಮಂಗಲ ಕಾರ್ಯಾಲಯ, ಜೋರಾಪುರ ಪೇಠ ಶ್ರೀಶಂಕರ ಲಿಂಗ ದೇವಸ್ಥಾನದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸಂಘಟನೆಯ ಪ್ರಮುಖರಾದ ಗಿರೀಶ ಪಾಟೀಲ, ಚಿದಾನಂದ ಔರಂಗಬಾದ, ಶರಣಬಸು ಕುಂಬಾರ, ಮಂಜು ಆಸಂಗಿಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.