ADVERTISEMENT

ವಿಜಯಪುರ: ಘನತ್ಯಾಜ್ಯ ಘಟಕಕ್ಕೆ ರೈತರ ಜಮೀನು ಕಬಳಿಕೆ ಆರೋಪ

ನ್ಯಾಯಕ್ಕೆ ಆಗ್ರಹಿಸಿ ರೈತರಿಂದ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2025, 5:08 IST
Last Updated 30 ನವೆಂಬರ್ 2025, 5:08 IST
ವಿಜಯಪುರ ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರಗೆ ನಾಲತವಾಡ ಹೋಬಳಿ ವ್ಯಾಪ್ತಿಯ ವೀರೇಶನಗರ ಗ್ರಾಮದ ರೈತರು ಶನಿವಾರ ಮನವಿ ಸಲ್ಲಿಸಿದರು 
ವಿಜಯಪುರ ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರಗೆ ನಾಲತವಾಡ ಹೋಬಳಿ ವ್ಯಾಪ್ತಿಯ ವೀರೇಶನಗರ ಗ್ರಾಮದ ರೈತರು ಶನಿವಾರ ಮನವಿ ಸಲ್ಲಿಸಿದರು    

ವಿಜಯಪುರ: ಘನತ್ಯಾಜ್ಯ ವಿಲೇವಾರಿ ನಿರ್ವಹಣಾ ಘಟಕ ನಿರ್ಮಿಸಲು ರೈತರ ಮಾಲ್ಕಿ ಜಮೀನು ಕಬಳಿಸಿದ್ದನ್ನು ವಿರೋಧಿಸಿ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಹೋಬಳಿ ವ್ಯಾಪ್ತಿಯ ವೀರೇಶನಗರ ಗ್ರಾಮದ ರೈತರು ಶನಿವಾರ  ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರಗೆ ಮನವಿ ಸಲ್ಲಿಸಿದರು.

ಮಾಲ್ಕಿ ಜಮೀನನ್ನು ಸರ್ಕಾರಿ ಜಮೀನು ಎಂದು ತೋರಿಸಿ ಅಲ್ಲಿ ಘಟಕ ನಿರ್ಮಿಸಲು ಅಧಿಕಾರಿಗಳಿಗೆ ದಾರಿ ತಪ್ಪಿಸಿರುವ ನಾಲತವಾಡ ಕಂದಾಯ ನಿರೀಕ್ಷಕ ವೆಂಕಟೇಶ ಅಂಬಿಗೇರ, ಅವೈಜ್ಞಾನಿಕವಾಗಿ ಸರ್ವೇ ಮಾಡಿ ರೈತರ ಜಮೀನು ಸರ್ಕಾರಿ ಜಮೀನು ಎಂದು ವರದಿ ನೀಡಿರುವ ಮುದ್ದೇಬಿಹಾಳ ಎ ಡಿ ಎಲ್ ಆರ್ ಕಚೇರಿಯ ಮೋಜಣಿದಾರ ಶಿವಾನಂದಗೌಡ ಪಾಟೀಲ ಅವರ ಮೇಲೆ ಕ್ರಮ ಜರುಗಿಸಿ ನಮ್ಮ ಕೃಷಿ ಭೂಮಿಯನ್ನು ನಮಗೆ ಬಿಟ್ಟು ಕೊಡಬೇಕು ಎಂದು ರೈತರು ಆಗ್ರಹಿಸಿದರು.

ನಾಗಬೇನಾಳ ಗ್ರಾಮ ವ್ಯಾಪ್ತಿಯ ರಿ.ಸ. ನಂಬರ್ 93ರಲ್ಲಿನ ಮಾಲ್ಕಿ ಜಮೀನನ್ನು ನಾಲತವಾಡ ಪಟ್ಟಣ ಪಂಚಾಯಿತಿಯವರು ಅತಿಕ್ರಮಿಸಿ ಅಲ್ಲಿ ಘನತ್ಯಾಜ್ಯ ವಿಲೇವಾರಿ ನಿರ್ವಹಣಾ ಘಟಕ ಕಟ್ಟಡ ಕಟ್ಟುತ್ತಿರುವುದನ್ನು ನಿಲ್ಲಿಸಿ ನೊಂದ ರೈತರಿಗೆ ನ್ಯಾಯ ಕೊಡಿಸುವಂತೆ ಕೋರಿದರು.

ADVERTISEMENT

ರೈತರಾದ ಈರಪ್ಪ ಸಂಗಪ್ಪ ಪತ್ತೇಪೂರ (ಸರ್ವೆನಂಬರ್ 93/6, 1 ಎಕರೆ 39 ಗುಂಟೆ), ಬಸಪ್ಪ ಸಂಗಪ್ಪ ಪತ್ತೇಪೂರ (ಸರ್ವೆ ನಂಬರ್ 93/7. 1 ಎಕರೆ, 39 ಗುಂಟೆ) ಹಾಗೂ 3) ಸಂಗವ್ವ ಸಾಬಣ್ಣ ಪಟ್ಟಣದ (ಸರ್ವೆನಂಬರ್ 93/1+2/ಇ, 4 ಎಕರೆ 2 ಗುಂಟೆ) ಇವರ ಜಮೀನುಗಳನ್ನು ಅತಿಕ್ರಮಿಸಿ ಈಗಾಗಲೇ ಕಂಪೌಂಡ್ ಕಟ್ಟಿರುವುದರಿಂದ ಕಳೆದ ಎರಡು ವರ್ಷ ಯಾವುದೇ ಬೆಳೆ ಬೆಳೆಯಲಾಗಿಲ್ಲ. 2024 ರ ಆಗಸ್ಟ್‌ನಲ್ಲಿ ಬೆಳೆ ಇದ್ದರೂ ಅದನ್ನು ನಾಶ ಮಾಡಿ ಕಟ್ಟಡ ಕಟ್ಟಲು ಮುಂದಾಗಿದ್ದರಿಂದ ಅಂದಿನಿಂದ ಇಂದಿನವರೆಗೆ ಬೆಳೆ ಇಲ್ಲದೆ ಹಾನಿ ಅನುಭವಿಸಿದ್ದೇವೆ ಎಂದು ಮನವಿಯಲ್ಲಿ ತಿಳಿಸಿದರು.

ರೈತರ ಮಾಲ್ಕಿ ಜಮೀನುಗಳಲ್ಲಿ ಅಕ್ರಮವಾಗಿ ಕಟ್ಟಿರುವ ಕಂಪೌಂಡ್ ತೆರವುಗೊಳಿಸಿ, ಜಮೀನನ್ನು ರೈತರಿಗೆ ಕೂಡಲೇ ಬಿಟ್ಟುಕೊಡಲು ಸಂಬಂಧಿಸಿದವರಿಗೆ ಆದೇಶ ಮಾಡಬೇಕು, ಮಾಲ್ಕಿ ಜಮೀನುಗಳಲ್ಲಿ ಕೃಷಿ ಚಟುವಟಿಕೆ ನಡೆಸಲು ಯಾರಿಂದಲೂ ಅಡ್ಡಿ ಆಗದಂತೆ ನ್ಯಾಯ ಒದಗಿಸಬೇಕು, ಬೆಳೆಹಾನಿ ಭರ್ತಿ ಮಾಡಲು ಎಕರೆಗೆ ಪ್ರತಿ ವರ್ಷಕ್ಕೆ ₹ 20 ಲಕ್ಷದಂತೆ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

ರೈತರಾದ ಈರಪ್ಪ ಪತ್ತೇಪೂರ, ಬಸಪ್ಪ‌ ಪತ್ತೆಪೂರ, ಮಹಾಂತೇಶ ಪಟ್ಟಣದ, ತಾ.ಪಂ. ಮಾಜಿ ಅಧ್ಯಕ್ಷ ಮುತ್ತಣ್ಣ ಹುಗ್ಗಿ ವಕೀಲರು, ಸಂಗಣ್ಣ ಹವಾಲ್ದಾರ, ಮಹಾಂತೇಶ ಪತ್ತೇಪೂರ, ಬಸವರಾಜ ಅಂಗಡಿ, ಸೋಮಣ್ಣ ಗೌಡರ, ಬಸಪ್ಪ ಪೂಜಾರಿ, ಚಂದ್ರಶೇಖರ ಪಾಟೀಲ, ಬಸವರಾಜ ಲೊಟಗೇರಿ, ಯಮನಪ್ಪ‌ ಕರಿಭಾವಿ, ಸಂಗಪ್ಪ ಪೂಜಾರಿ, ವೀರೇಶ ಪೂಜಾರಿ, ಸಂಗಣ್ಣ ಕೋಟಿ, ವೀರೇಶನಗರ ಗ್ರಾಮದ ರೈತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.