
ದೇವರಹಿಪ್ಪರಗಿ: ‘ಜನನಿ, ಜನ್ಮಭೂಮಿ ಸ್ವರ್ಗಕ್ಕಿಂತಲೂ ಶ್ರೇಷ್ಠ ಎಂಬ ಮಾತಿನಲ್ಲಿ ಸತ್ಯವಿದೆ. ನಮ್ಮ ಆಚಾರ, ವಿಚಾರ, ಸಂಸ್ಕಾರ, ಸಂಸ್ಕೃತಿಗೆ ಮೂಲ ಕಾರಣವೇ ನಮ್ಮ ಜನ್ಮಭೂಮಿ’ ಎಂದು ಕೇದಾರಪೀಠದ ಭೀಮಾಶಂಕರಲಿಂಗ ಭಗವತ್ಪಾದರು ಹೇಳಿದರು.
ಪಟ್ಟಣದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜರುಗಿದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
‘ಭಾರತೀಯ ಪರಂಪರೆಯಲ್ಲಿ ಪಂಚ ಪೀಠಗಳು ಹಾಗೂ ಶಂಕರಾಚಾರ್ಯರಿಂದ ಸ್ಥಾಪಿತವಾದ ನಾಲ್ಕು ಮಠಗಳಿಗೆ ವಿಶೇಷ ಸ್ಥಾನಮಾನಗಳಿವೆ’ ಎಂದರು.
ಹಂಪಿಸಾವಿರದೇವರ ಮಠದ ವಾಮದೇವ ಶ್ರೀ ಮಾತನಾಡಿ, ‘ಪುಣ್ಯ ಅಧ್ಯಯನದಿಂದ ಬರಲಾರದು, ಇದು ಮಹಾತ್ಮರ ದರ್ಶನದಿಂದ ಬರಬಲ್ಲದು. ಪಂಚ ತತ್ವಗಳ ಆಧಾರದ ಮೇಲೆ ಹುಟ್ಟಿದ ಪೀಠಗಳು ಮಾನವ ಕಲ್ಯಾಣ ಬಯಸುತ್ತವೆ. ಆಧ್ಯಾತ್ಮಿಕ ವಿಚಾರಗಳನ್ನು ಅರಿತು ನಾವು ಅಂತರಂಗದಿಂದ ಬದಲಾಗಬೇಕು’ ಎಂದರು.
ಆಲಮೇಲ ಗುರು ಸಂಸ್ಥಾನ ಹಿರೇಮಠದ ಚಂದ್ರಶೇಖರ ಶ್ರೀ ಹಾಗೂ ಸ್ಥಳೀಯ ಜಡಿಮಠದ ಜಡಿಸಿದ್ಧೇಶ್ವರ ಶ್ರೀ ಮಾತನಾಡಿದರು.
ಧರ್ಮಸಭೆ ಆರಂಭಕ್ಕೂ ಮೊದಲು ಮಹಿಳೆಯರು ಪೂರ್ಣಕುಂಭ ಹೊತ್ತು ಕೇದಾರ ಶ್ರೀಗಳನ್ನು ಸ್ವಾಗತಿಸಿದರು.
ಆಹಿರಸಂಗದ ಮಲ್ಲಿಕಾರ್ಜುನ ಶ್ರೀ, ಅವೋಗೇಶ್ವರ ಧಾಮದ ಶ್ರೀ, ಕಲ್ಯಾಣ ಮಂಟಪದ ಅಧ್ಯಕ್ಷ ಬಸಯ್ಯ ಮಲ್ಲಿಕಾರ್ಜುನಮಠ, ಮಾಜಿಶಾಸಕ ಅಶೋಕ ಶಾಬಾದಿ, ಬಸನಗೌಡ ಪಾಟೀಲ (ಯಡಿಯಾಪುರ), ಶರಣಗೌಡ ಲಿಂಗದಳ್ಳಿ (ಚಬನೂರ), ಬಸಯ್ಯ ಹಿರೇಮಠ (ಪುರಾಣಿಕ), ಎಂ.ಆರ್.ಶಿರಸಂಗಿಮಠ, ಸಿ.ಕೆ.ಕುದರಿ, ಶಾಂತಯ್ಯ ಜಡಿಮಠ, ಆನಂದ ಪರದೇಶಿಮಠ, ಸೋಮು ಹಿರೇಮಠ, ಆನಂದ ಜಡಿಮಠ, ಕಾಶೀನಾಥ ಹಿರೇಮಠ, ಶ್ರೀಶೈಲ ಕಬ್ಬಿನ, ಸಿದ್ದು ಆನಂದಿ, ಬಂಡೆಪ್ಪಗೌಡ ದಿಂಡವಾರ, ಸೋಮು ದೇವೂರ, ಬಿ.ಎಸ್. ತೆಗನೂರ (ಶಾಬಾದಿ), ಶಿವಪ್ಪ ವಸ್ತ್ರದ, ಸಾಹೇಬಗೌಡ ಮುಳಸಾವಳಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.