ADVERTISEMENT

ಶ್ರೀಶೈಲ ಶ್ರೀಗಳ ಗುರುವಂದನಾ ಕಾರ್ಯಕ್ರಮ ಜುಲೈ 2ಕ್ಕೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 14:25 IST
Last Updated 27 ಜೂನ್ 2022, 14:25 IST
ಶ್ರೀಶೈಲ ಪೀಠದ ಜಗದ್ಗುರು
ಶ್ರೀಶೈಲ ಪೀಠದ ಜಗದ್ಗುರು   

ವಿಜಯಪುರ: ಶ್ರೀಶೈಲ ಜಗದ್ಗುರುಗಳ ಗುರುವಂದನಾ ಕಾರ್ಯಕ್ರಮ ನಗರದ ಕಿತ್ತೂರ ರಾಣಿ ಚೆನ್ನಮ್ಮ‌ ಮಂಗಲ ಕಾರ್ಯಾಲಯದಲ್ಲಿ ಜುಲೈ 2 ರಂದು ನಡೆಯಲಿದೆಎಂದು ಕರಭಂಟನಾಳದ ಶಿವಕುಮಾರ ಮಹಾಸ್ವಾಮಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಆಧ್ಯಾತ್ಮಿಕ, ಧರ್ಮಪ್ರಸಾರದ ಪವಿತ್ರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ದ್ವಾದಶ ಪೀಠಾರೋಹಣ ಮಹೋತ್ಸವ ಸಹ ಇದೇ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

ಪಾದಯಾತ್ರೆ:ದ್ವಾದಶ ಪೀಠಾರೋಹಣ ಮಹೋತ್ಸವದ ಅಂಗವಾಗಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಶ್ರೀ ಕ್ಷೇತ್ರ ಯಡಿಯೂರಿನಿಂದ ಶ್ರೀಶೈಲದವರೆಗೆ ಲೋಕ ಕಲ್ಯಾಣಾರ್ಥವಾಗಿ ಹಾಗೂ ಪರಿಸರ ರಕ್ಷಣೆಗಾಗಿ ಜಗದ್ಗುರುಗಳ ಪಾದಯಾತ್ರೆ ಅಕ್ಟೋಬರ್ 10 ರಿಂದ ಆರಂಭಗೊಳ್ಳಲಿದ್ದು, ನವೆಂಬರ್ 11 ರಂದು ಶ್ರೀಶೈಲ ತಲುಪಲಿದೆ ಎಂದರು.

ADVERTISEMENT

ಶ್ರೀಗಳು ಲೋಕ ಕಲ್ಯಾಣಾರ್ಥವಾಗಿ ಈ ಪಾದಯಾತ್ರೆ ಕೈಗೊಳ್ಳುತ್ತಿದ್ದಾರೆ. ಪಾದಯಾತ್ರೆಯ ಮಾರ್ಗದಲ್ಲಿ ಬರುವ ನಗರ ಮತ್ತು ಗ್ರಾಮಗಳಲ್ಲಿ ಧರ್ಮಜಾಗೃತಿ, ಲಿಂಗದೀಕ್ಷೆ, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶ್ರೀ ಜಗದ್ಗುರುಗಳ ಜನ್ಮ ಸುವರ್ಣ ಮಹೋತ್ಸವ ಮತ್ತು ದ್ವಾದಶ ಪೀಠಾರೋಹಣ ಮಹೋತ್ಸವದ ಸವಿನೆನಪಿಗಾಗಿ ಪಾದಯಾತ್ರೆಯ ಮಾರ್ಗದ ಎರಡೂ ಬದಿಗಳಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮ ಈಗಾಗಲೇ ಪ್ರಾರಂಭವಾಗಿದೆ. ಈ ಪಾದಯಾತ್ರೆ ಸಂಪನ್ನಗೊಳ್ಳುವ ವೇಳೆ ಲಕ್ಷಾಂತರ ಸಸಿಗಳು ನೆಡಲು ಸಾಧ್ಯವಾಗಲಿದೆ ಎಂದರು.

ಪಾದಯಾತ್ರೆಯು ಶ್ರೀ ಕ್ಷೇತ್ರ ಶ್ರೀಶೈಲವನ್ನು ತಲುಪಿದ ನಂತರ ಡಿಸೆಂಬರ್‌ ಮೊದಲನೆ ವಾರದಲ್ಲಿ ಶ್ರೀ ಜಗದ್ಗುರು ಪಂಡಿತಾರಾಧ್ಯರ ಲಿಂಗೋದ್ಭವ ಮೂರ್ತಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ, ಜಗದ್ಗುರುಗಳವರ ಇಷ್ಟಲಿಂಗ ಮಹಾಪೂಜೆ, ತುಲಾಭಾರ, ರುದ್ರಹೋಮ ನೆರವೇರಲಿದೆ. ನಿಸರ್ಗ ರಕ್ಷಣೆ, ಲೋಕ ಕಲ್ಯಾಣಕ್ಕಾಗಿ ಸುಧೀರ್ಘ ಪಾದಯಾತ್ರೆಯನ್ನು ಶ್ರೀಶೈಲ ಜಗದ್ಗುರುಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ಹೇಳಿದರು.

ಗುರುವಂದನೆ ಅಂಗವಾಗಿ ಜಗದ್ಗುರುಗಳಿಗೆ ರುದ್ರಾಕ್ಷಿಯ ತುಲಾಭಾರ, ಗುರುವಂದನೆ
ಮತ್ತು ಅನ್ನದಾನ ಕಾರ್ಯಕ್ರಮಗಳನ್ನು ಶ್ರೀಶೈಲ ಕ್ಷೇತ್ರದಲ್ಲಿ ಆಯೋಜಿಸಲಾಗಿದೆ ಎಂದರು.

ಶ್ರೀಗಳ ಜನ್ಮ ಸುವರ್ಣ ಮಹೋತ್ಸವ ಮತ್ತು ದ್ವಾದಶ ಪೀಠಾರೋಹಣ ಮಹೋತ್ಸವದ ಅಂಗವಾಗಿ ಮುಂಬರುವ ಜ.10 ರಿಂದ ಜ.15 ರವರೆಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಮಹಾ ಅಧಿವೇಶನ, ರಾಷ್ಟ್ರೀಯ ವೇದಾಂತ ಸಮ್ಮೇಳನ, ರಾಷ್ಟ್ರೀಯ ವಚನ ಸಮ್ಮೇಳನ, ರಾಷ್ಟ್ರೀಯ ವೀರಶೈವಾಗಮ ಸಮಾವೇಶ ಮತ್ತು ತೆಲುಗು, ಕನ್ನಡ ಹಾಗೂ ಮರಾಠಿ ವೀರಶೈವ ಸಾಹಿತ್ಯಗೋಷ್ಠಿ, ಉಚಿತ ಸಾಮೂಹಿಕ ವಿವಾಹ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಯೋಜಿಸಲಾಗಿದೆ ಎಂದರು.

ಬಸವನಬಾಗೇವಾಡಿಯ ಶಿವಪ್ರಕಾಶ ಮಹಾಸ್ವಾಮಿ, ತಾಳಿಕೋಟಿ ಜಯಸಿದ್ದೇಶ್ವರ ಮಹಾಸ್ವಾಮಿ, ಗುಂಡಕನಾಳದ ಗುರುಲಿಂಗ ಶಿವಾಚಾರ್ಯರು, ತಡವಲಗಾದ ಶಿವಾನಂದ ಶಾಸ್ತ್ರಿಗಳು, ವಿಶ್ರಾಂತ ಡಿವೈಎಸ್ ಪಿ ಬಸವರಾಜ ಚೌಕಿಮಠ, ರವೀಂದ್ರ ಬಿಜ್ಜರಗಿ, ಎಸ್ಎಸ್ ಗೊಳಸಂಗಿಮಠ, ಸಿದ್ದು ಮಲ್ಲಿಕಾರ್ಜುನಮಠ, ಅಶೋಕ ತಿಮಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.