ADVERTISEMENT

ಎಸ್‌ಎಸ್‌ಎಲ್‌ಸಿ: ವಿಜಯಪುರಕ್ಕೆ ‘ಬಿ’ ಶ್ರೇಣಿ

26ರಿಂದ 25ನೇ ಸ್ಥಾನಕ್ಕೆ ಜಿಗಿದ ಜಿಲ್ಲೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 14:47 IST
Last Updated 10 ಆಗಸ್ಟ್ 2020, 14:47 IST
ಸಿ.ಪ್ರಸನ್ನಕುಮಾರ್‌
ಸಿ.ಪ್ರಸನ್ನಕುಮಾರ್‌   

ವಿಜಯಪುರ: ಸೋಮವಾರ ಪ್ರಕಟವಾದ ಪ್ರಸಕ್ತ ಸಾಲಿನ ಎಸ್ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯ ಮಟ್ಟದಲ್ಲಿಜಿಲ್ಲೆಗೆ 25ನೇ ಸ್ಥಾನ ಲಭಿಸಿದೆ.

ಪರೀಕ್ಷೆ ಬರೆದ 32,425 ವಿದ್ಯಾರ್ಥಿಗಳಲ್ಲಿ 26,620 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 7,412 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಪ್ರಸನ್ನಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ರಾಜ್ಯಮಟ್ಟದಲ್ಲಿ ಜಿಲ್ಲೆಗೆ ‘ಬಿ’ ಶ್ರೇಣಿ‌ ಲಭಿಸಿದೆ. ಹೋದ ವರ್ಷಕ್ಕೆ ಹೋಲಿಸಿದರೆ(26) ಈ ವರ್ಷ ಒಂದು ಸ್ಥಾನ ಮೇಲಕ್ಕೇರಿದೆ(25) ಎಂದು ಹೇಳಿದರು.

ADVERTISEMENT

ತಾಲ್ಲೂಕುವಾರು ವಿಜಯಪುರ, ವಿಜಯಪುರ ಗ್ರಾಮೀಣ, ಚಡಚಣ, ಇಂಡಿ, ಮುದ್ದೇಬಿಹಾಳ, ಸಿಂದಗಿ ‘ಬಿ’ ಶ್ರೇಣಿ‌ ಹಾಗೂ ಬಸವನ ಬಾಗೇವಾಡಿಗೆ ‘ಸಿ’ ಶ್ರೇಣಿ‌ ಲಭಿಸಿದೆ ಎಂದರು.

ಕೋವಿಡ್‌ ಸಂದರ್ಭದಲ್ಲಿ ಮಕ್ಕಳು ಪರೀಕ್ಷಾ ಕೇಂದ್ರಕ್ಕೆ ಬಂದುಹೋಗಲು ಯಾವುದೇ ತೊಂದರೆಯಾಗದಂತೆ ಎಲ್ಲ ರೀತಿಯ ವ್ಯವಸ್ಥೆ ಹಾಗೂ ಸೌಕರ್ಯ ಕಲ್ಪಿಸಲಾಗಿತ್ತು. ಆದರೂ ಸಹ ಕೋವಿಡ್‌ ಭಯದಿಂದ ಪ್ರತಿದಿನ 2 ಸಾವಿರಕ್ಕೂ ಅಧಿಕವಿದ್ಯಾರ್ಥಿಗಳು ಗೈರಾದ ಕಾರಣ ಜಿಲ್ಲೆಯ ಫಲಿತಾಂಶದ ಮೇಲೆಪರಿಣಾಮ ಬೀರಿದೆ ಎಂದು ಹೇಳಿದರು.

ಅಕ್ಷತಾ ಜಿಲ್ಲೆಗೆ ಪ್ರಥಮ:ಸಿಂದಗಿಯ ಆದರ್ಶ ವಿದ್ಯಾಲಯ(ಆರ್‌ಎಂಎಸ್‌ಎ) ವಿದ್ಯಾರ್ಥಿನಿ ಅಕ್ಷತಾ ಶಶಿಕಾಂತ ರಾಠೋಡ 623 ಅಂಕಗಳನ್ನು ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಮುದ್ದೇಬಿಹಾಳ ತಾಲ್ಲೂಕಿನ ಬಿದರಕುಂದಿಯ ಸರ್ಕಾರಿ ಆದರ್ಶ ವಿದ್ಯಾಲಯದ ಮಂಜುನಾಥ ನಾಡಗೌಡರ ಮತ್ತು ಬಸವನ ಬಾಗೇವಾಡಿಯ ಸರ್ಕಾರಿ ಪ್ರೌಢಶಾಲೆಯ ಪಲ್ಲವಿ ಮಲ್ಲನಗೌಡ ಪಾಟೀಲ ತಲಾ 619 ಅಂಕಗಳನ್ನು ಪಡೆದು ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

* ಅಕ್ಷತಾ ರಾಠೋಡ ಜಿಲ್ಲೆಗೆ ಪ್ರಥಮ

* 26,620 ವಿದ್ಯಾರ್ಥಿಗಳು ಉತ್ತೀರ್ಣ

* ಬಸವನ ಬಾಗೇವಾಡಿಗೆ ‘ಸಿ‘ ಶ್ರೇಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.