ADVERTISEMENT

ವಿಜಯಪುರ ಜಿಲ್ಲೆಯಲ್ಲಿ ಪಟ್ಟಣ ಪಂಚಾಯ್ತಿ ಚುನಾವಣೆಗೆ ವೇದಿಕೆ ಸಜ್ಜು

ತಲಾ ಎರಡೆರಡು ಪ.ಪಂ.ಗಳಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ

ಬಸವರಾಜ ಸಂಪಳ್ಳಿ
Published 1 ಡಿಸೆಂಬರ್ 2021, 14:01 IST
Last Updated 1 ಡಿಸೆಂಬರ್ 2021, 14:01 IST
ದೇವರ ಹಿಪ್ಪರಗಿ ಪಟ್ಟಣ ಪಂಚಾಯ್ತಿ ಕಾರ್ಯಾಲಯ
ದೇವರ ಹಿಪ್ಪರಗಿ ಪಟ್ಟಣ ಪಂಚಾಯ್ತಿ ಕಾರ್ಯಾಲಯ   

ವಿಜಯಪುರ: ವಿಧಾನ ಪರಿಷತ್‌ ಚುನಾವಣೆಯ ನಡುವೆಯೇ ಮತ್ತೊಂದು ಚುನಾವಣೆ ಎದುರಾಗಿದೆ. ಜಿಲ್ಲೆಯ ಆರು ಪಟ್ಟಣ ಪಂಚಾಯ್ತಿಗಳಿಗೆ ಡಿ.27ರಂದು ಚುನಾವಣೆ ನಿಗದಿಯಾಗಿದ್ದು, ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ.

ನಾಲತವಾಡ ಪಟ್ಟಣ ಪಂಚಾಯ್ತಿಯ 14 ವಾರ್ಡ್‌, ನಿಡಗುಂದಿಯ 16 ವಾರ್ಡ್‌, ದೇವರ ಹಿಪ್ಪರಗಿಯ 17 ವಾರ್ಡ್‌, ಆಲಮೇಲದ 19 ವಾರ್ಡ್‌, ಮನಗೂಳಿಯ 16 ವಾರ್ಡ್, ಕೊಲ್ಹಾರ ಪಟ್ಟಣ ಪಂಚಾಯ್ತಿಯ 17 ವಾರ್ಡ್‌ ಹಾಗೂ ಚಡಚಣ ಪಟ್ಟಣ ಪ‍ಂಚಾಯ್ತಿಯ ಒಂದು ವಾರ್ಡ್‌(4)ಗೆ ಚುನಾವಣೆ ನಡೆಯಲಿದೆ.

ಮುಂಬರುವ ವಿಧಾನಸಭೆ ಚುನಾವಣೆ ಮೇಲೆ ಪಟ್ಟಣ ಪಂಚಾಯ್ತಿ ಚುನಾವಣಾ ಫಲಿತಾಂಶ ಪ್ರಭಾವ ಬೀರಲಿರುವುದರಿಂದ ಬಹುತೇಕ ಶಾಸಕರು, ಮಾಜಿ ಶಾಸಕರು ಸೇರಿದಂತೆ ಮೂರು ಪಕ್ಷಗಳು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ.

ADVERTISEMENT

ಈ ಹಿಂದಿನ ಅವಧಿಯಲ್ಲಿ ನಾಲತವಾಡ ಪಟ್ಟಣ ಪಂಚಾಯ್ತಿಯಲ್ಲಿ ಕಾಂಗ್ರೆಸ್‌ ಆರು, ಜೆಡಿಎಸ್‌ ಆರು, ಬಿಜೆಪಿ ಒಂದು ಹಾಗೂ ಪಕ್ಷೇತರರಒಂದು ಜಯಗಳಿಸಿದ್ದರು. ಪಕ್ಷೇತರ ಸದಸ್ಯ ಕಾಂಗ್ರೆಸ್‌ ಬೆಂಬಲಿಸಿದ ಪರಿಣಾಮ ಪಟ್ಟಣ ಪಂಚಾಯ್ತಿಯಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿತ್ತು. ವಿಶೇಷವೆಂದರೆ ಬಿಜೆಪಿ ಸದಸ್ಯ ಕಾಂಗ್ರೆಸ್‌ ಬೆಂಬಲದೊಂದಿಗೆ ಉಪಾಧ್ಯಕ್ಷರಾಗಿದ್ದರು!

ನಿಡಗುಂದಿ ಪಟ್ಟಣ ಪಂಚಾಯ್ತಿಯ 16 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ 8, ಬಿಜೆಪಿ 6 ಮತ್ತು ಇಬ್ಬರು ಪಕ್ಷೇತರರು ಜಯಗಳಿಸಿದ್ದರು. ಪಕ್ಷೇತರರ ಬೆಂಬಲದೊಂದಿಗೆ ಕಾಂಗ್ರೆಸ್‌ ಅಧಿಕಾರದ ಗದ್ದುಗೆ ಏರಿತ್ತು.

ದೇವರ ಹಿಪ್ಪರಗಿ ಪಟ್ಟಣ ಪಂಚಾಯ್ತಿಯ 17 ವಾರ್ಡ್‌ಗಳ ಪೈಕಿ ಜೆಡಿಎಸ್‌ 7, ಕಾಂಗ್ರೆಸ್‌ 6, ಬಿಜೆಪಿ 3 ಮತ್ತು ಪಕ್ಷೇತರ ಒಬ್ಬರು ಜಯಗಳಿಸಿದ್ದರು. ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ಜೆಡಿಎಸ್‌ ಆಡಳಿತ ನಡೆಸಿತ್ತು.

ಮನಗೂಳಿ ಪಟ್ಟಣ ಪಂಚಾಯ್ತಿಯ 16 ವಾರ್ಡ್‌ಗಳ ಪೈಕಿ ಜೆಡಿಎಸ್‌ 16 ವಾರ್ಡ್‌ಗಳಲ್ಲಿ ಜಯಗಳಿಸುವ ಮೂಲಕ ಅಧಿಕಾರವನ್ನು ಅನುಭವಿಸಿತ್ತು. ಕಾಂಗ್ರೆಸ್‌ ಕೇವಲ ಒಂದು ಸ್ಥಾನದಲ್ಲಿ ಜಯಗಳಿಸಿತ್ತು.

ಆಲಮೇಲ ಪಟ್ಟಣ ಪಂಚಾಯ್ತಿಯ 19 ವಾರ್ಡ್‌ಗಳಲ್ಲಿ ಬಿಜೆಪಿ 9, ಕಾಂಗ್ರೆಸ್‌ 8 ಮತ್ತು ಪಕ್ಷೇತರ 2 ಸ್ಥಾನದಲ್ಲಿ ಜಯಗಳಿಸಿತ್ತು. ಪಕ್ಷೇತರರ ಬೆಂಬಲದೊಂದಿಗೆ ಬಿಜೆಪಿ ಅಧಿಕಾರ ನಡೆಸಿತ್ತು.

ಕೊಲ್ಹಾರ ಪಟ್ಟಣ ಪಂಚಾಯ್ತಿಯ 17 ಸ್ಥಾನಗಳಲ್ಲಿ ಬಿಜೆಪಿ 9, ಕಾಂಗ್ರೆಸ್‌ 5 ಮತ್ತು 3 ಪಕ್ಷೇತರರು ಜಯಗಳಿಸಿದ್ದರು. ಬಿಜೆಪಿ ಅಧಿಕಾರದಲ್ಲಿತ್ತು.

ಇದೀಗ ಎದುರಾಗಿರುವ ಚುನಾವಣೆಯಲ್ಲಿ ಆಯಾ ಪಟ್ಟಣ ಪಂಚಾಯ್ತಿಗಳ ಅಧಿಕಾರವನ್ನು ತಮ್ಮ ವಶದಲ್ಲಿ ಇಟ್ಟುಕೊಳ್ಳುವ ಜೊತೆಗೆ ಇತರೆ ಪಟ್ಟಣ ಪಂಚಾಯ್ತಿಗಳಲ್ಲೂ ತಮ್ಮ ಪಕ್ಷದ ಬಾವುಟ ಹಾರಿಸಲು ಮೂರು ಪಕ್ಷಗಳು ಭರದ ಸಿದ್ಧತೆಯಲ್ಲಿ ತೊಡಗಿವೆ.

ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಪಟ್ಟಣ ಪಂಚಾಯ್ತಿಗಳ ವಿವಿಧ ವಾರ್ಡ್‌ಗಳಿಗೆ ಅರ್ಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆಯಲ್ಲಿ ತೊಡಗಿವೆ. ಅನೇಕ ಹಾಲಿ ಸದಸ್ಯರಿಗೆ ಕ್ಷೇತ್ರ ಕೈತಪ್ಪಿ ಹೋಗಿದ್ದು, ಅಕ್ಕಪಕ್ಕದ ವಾರ್ಡ್‌ಗಳಿಂದ ಸ್ಪರ್ಧಿಸಲು ಟಿಕೆಟ್‌ಗಾಗಿ ಶಾಸಕರು, ಮಾಜಿ ಶಾಸಕರ ಎದುರು ದುಂಬಾಲು ಬಿದ್ದಿದ್ದಾರೆ. ಮಹಿಳಾ ಮೀಸಲಾತಿ ಬಂದಿರುವ ಕಡೆ ತಮ್ಮ ಪತ್ನಿಯನ್ನು ಚುನಾವಣೆಗೆ ನಿಲ್ಲಿಸಲು ತಯಾರಿ ನಡೆಸಿದ್ದಾರೆ. ಅನೇಕರಿಗೆ ಸ್ಪರ್ಧಿಸಲು ಅವಕಾಶವೇ ಇಲ್ಲದಂತಾಗಿದೆ. ಪಕ್ಷದ ಟಿಕೆಟ್‌ ಲಭಿಸದಿದ್ದರೇ ಅನ್ಯ ಪಕ್ಷ ಅಥವಾ ಪಕ್ಷೇತರರಾಗಿ ಸ್ಪರ್ಧಿಸಲು ಅಣಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.