ADVERTISEMENT

ಮೂಕಿಹಾಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕುಸಿತ: ಸಂಚಾರ ದುರವಸ್ಥೆ

ಬಸ್ ಸಂಚಾರ ಸ್ಥಗಿತ; ಗ್ರಾಮಸ್ಥರ ಪರದಾಟ

ಶರಣಬಸಪ್ಪ ಎಸ್‌.ಗಡೇದ
Published 17 ಸೆಪ್ಟೆಂಬರ್ 2019, 20:00 IST
Last Updated 17 ಸೆಪ್ಟೆಂಬರ್ 2019, 20:00 IST
ತಾಳಿಕೋಟೆಯಿಂದ ಮೂಕಿಹಾಳಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿನ ಸೇತುವೆ ಕುಸಿದಿರುವುದು
ತಾಳಿಕೋಟೆಯಿಂದ ಮೂಕಿಹಾಳಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿನ ಸೇತುವೆ ಕುಸಿದಿರುವುದು   

ತಾಳಿಕೋಟೆ: ಪಟ್ಟಣದಿಂದ ಹಡಗಿನಾಳ ಮಾರ್ಗವಾಗಿ ಮೂಕಿಹಾಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಬಸ್ ಸಂಚಾರ ಸ್ಥಗಿತಗೊಂಡಿದೆ. ಇದರಿಂದಾಗಿ ಇಲ್ಲಿಯ ಜನರು ಪರದಾಡುವಂತಾಗಿದೆ.

ಮೂಕಿಹಾಳದಿಂದ ತಾಳಿಕೋಟೆ 5 ಕಿ.ಮೀ ದೂರದಲ್ಲಿದೆ. ಮಿಣಜಗಿ ಮೂಲಕ ಬಂದರೆ 10 ಕಿ.ಮೀ ದೂರವಾಗುತ್ತದೆ ಎಂಬ ಕಾರಣಕ್ಕೆ ಜನತೆಯ ಬಹುದಿನಗಳ ಬೇಡಿಕೆಯಂತೆ ಹಡಗಿನಾಳವರೆಗಿನ 2.5 ಕಿ.ಮೀ ರಸ್ತೆಯನ್ನು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ₹87.33 ಲಕ್ಷ ಅನುದಾನದಲ್ಲಿ 2011 ರಲ್ಲಿ ದುರಸ್ತಿ ಮಾಡಲಾಯಿತು. 2016ರ ನಿರ್ವಹಣೆಯನ್ನು ಗುತ್ತಿಗೆದಾರರಿಗೆ ವಹಿಸಲಾಗಿತ್ತು. ಅಲ್ಲಿಂದ ಪಟ್ಟಣ ತಲುಪಲು ಉಳಿದ 2.5 ಕಿ.ಮೀ ದೂರವನ್ನು ಇನ್ನೊಂದು ಯೋಜನೆಯಲ್ಲಿ ಮುಕ್ತಾಯಗೊಳಿಸಲಾಗಿತ್ತು.

ಮೂಕಿಹಾಳದಿಂದ ಹಡಗಿನಾಳವರೆಗಿನ 2.5 ಕಿ.ಮೀ ಸರಹದ್ದಿನಲ್ಲಿ ಬರುವ ಸೋಗಲಿ ಹಳ್ಳಕ್ಕೆ ಅಡ್ಡಲಾಗಿ ನೆಲಮಟ್ಟದ ಸೇತುವೆಯೊಂದಿಗೆ ಇನ್ನೂ ಐದಾರು ಕಡೆ ನೆಲಮಟ್ಟದ ಪುಟ್ಟ ಸೇತುವೆಗಳನ್ನೂ ನಿರ್ಮಿಸಲಾಗಿತ್ತು. ರಸ್ತೆ ಉತ್ತಮಗೊಂಡ ಕಾರಣ ಸಮಯ ಮತ್ತು ದೂರದ ಉಳಿತಾಯಕ್ಕಾಗಿ ಪಟ್ಟಣಕ್ಕೆ ಬರುತ್ತಿದ್ದ ವಾಹನಗಳೆಲ್ಲ ಇದೇ ಮಾರ್ಗದಲ್ಲಿ ಸಂಚರಿಸಿಸುತ್ತಿದ್ದವು. ವಾಹನಗಳ ಭರಾಟೆಯಿಂದ ಕೆಲವೇ ವರ್ಷಗಳಲ್ಲಿ ರಸ್ತೆ ಹಾಳಾಗಿದ್ದು, ದುರಸ್ತಿ ಕಾರ್ಯ ಕೈಗೊಂಡಿಲ್ಲ.

ADVERTISEMENT

ಸದ್ಯ ಸೋಗಲಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಮಧ್ಯದಲ್ಲಿಯೇ ದೊಡ್ಡ ಬಿರುಕು ಕಾಣಿಸಿಕೊಂಡಿದೆ. ಮಾರ್ಗ ಮಧ್ಯೆ ಇರುವ ಇನ್ನೊಂದು ಸೇತುವೆ ಅದರೊಳಗಿನ ಸಿಮೆಂಟ್ ಪೈಪ್‌ಗಳು ಕಾಣಿಸುವಷ್ಟು ಕುಸಿದಿವೆ.

‘ನಮ್ಮ ಎಂಜಿನಿಯರ್ ಎರಡು ಸಾರಿ ರಸ್ತೆ ಪರಿಶೀಲನೆ ಮಾಡಿದ್ದು, ಸೇತುವೆ ಮಧ್ಯೆ ಬಿರುಕು ಬಿಟ್ಟಿರುವುದು ಗಮನಕ್ಕೆ ಬಂದಿದೆ. ಇದರ ನಿರ್ವಹಣೆಗೆ ಅಗತ್ಯ ಅನುದಾನ ಲಭ್ಯವಿಲ್ಲ. ಈ ಬಗ್ಗೆ ಶಾಸಕರೊಂದಿಗೆ ಚರ್ಚಿಸಲಾಗಿದೆ. ಕಾರ್ಯಪಡೆ (ಟಾಸ್ಕ್‌ಫೋರ್ಸ್‌) ಅನುದಾನದಲ್ಲಿ ಹಣದ ಭರವಸೆ ನೀಡಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಎಇಇ ಎಸ್.ಬಿ.ಬಿರಾದಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಸ್ತೆ ಹಾಳಾಗಿದ್ದರಿಂದ ಗ್ರಾಮದ ಮೂಲಕ ಹಾಯ್ದು ಹೋಗುತ್ತಿದ್ದ ಬಸ್ ಸಂಚಾರ ಸ್ಥಗಿತವಾಗಿದೆ. ಇದರಿಂದ ಬಸ್ ಪಾಸ್ ಪಡೆದ ಶಾಲಾ ವಿದ್ಯಾರ್ಥಿಗಳು, ವಯಸ್ಸಾದವರು, ಆಸ್ಪತ್ರೆಗೆ ಹೋಗಬೇಕಾದವರು ನಡೆದುಕೊಂಡೇ ಹೋಗಬೇಕಾಗಿದೆ’ ಎಂದು ಹಡಗಿನಾಳದ ನಿಂಗನಗೌಡ ದೇಸಾಯಿ ಹೇಳಿದರು.

‘ತಕ್ಷಣವೇ ರಸ್ತೆ ಮತ್ತು ಸೇತುವೆಯನ್ನು ದುರಸ್ತಿಗೊಳಿಸಬೇಕು. ಇಲ್ಲವಾದಲ್ಲಿ ಮುಷ್ಕರ ನಡೆಸುತ್ತೇವೆ’ ಎಂದು ಹಡಗಿನಾಳ ಗ್ರಾಮದ ಪ್ರಮುಖ ನಿಂಗನಗೌಡ ದೇಸಾಯಿ, ಮೂಕಿಹಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕೆ.ಬಿರಾದಾರ ಹಾಗೂ ಇತರರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.